ಬೆಳಗಾವಿ
ಪುಂಡಾನೆಗಳ ಕಾಟ, ಆನೆ ಹಿಡಿಯಲು ಲಂಚದ ಹಾವಳಿ, ಹೇಳತೀರದ ರೈತರ ಪಡಿಪಾಟಲು, ಅರಣ್ಯ ಸಚಿವರ ಅಸಮರ್ಪಕ ಉತ್ತರಕ್ಕೆ ಆಡಳಿತ ಪಕ್ಷದ ಸದಸ್ಯರಿಂದಲೇ ಬೇಸರ, ಇಲಾಖೆ ಅಧಿಕಾರಿಗಳ ಉದಾಸೀನತೆ, ಬಿಜೆಪಿ ಸದಸ್ಯರ ಧರಣಿ ಯತ್ನ, ಆಡಳಿತ – ವಿರೋಧಿ ಸದಸ್ಯರ ನಡುವೆ ಕಾವೇರಿದ ಮಾತಿನ ಚಕಮಕಿ ಮೇಲ್ಮನೆಯಲ್ಲಿ ಸುದೀರ್ಘ ಚರ್ಚೆಗೆ ಗ್ರಾಸ ಒದಗಿಸಿತು.
ಅರಣ್ಯ ಸಚಿವ ಶಂಕರ್ ಅವರ ಬದಲಿಗೆ ಕೆ.ಜೆ.ಜಾರ್ಜ್ ಅವರೇ ಈ ಖಾತೆಯನ್ನು ವಹಿಸಿಕೊಂಡರೆ ಆನೆ ಸಮಸ್ಯೆಗಳಿಗೆ ಪರಿಹಾರ ದೊರಕಬಹುದು ಎಂಬ ಭಾವನೆ ಸದನದಲ್ಲೇ ಮೊಳಗಿತು. ಮೂಡಿಗೆರೆ ಮತ್ತು ಮಡಿಕೇರಿಯಲ್ಲಿ ಆನೆಗಳ ಉಪಟಳದಿಂದ ಜನರು, ರೈತರು ಎದುರಿಸುತ್ತಿರುವ ಸಮಸ್ಯೆಗಳು ಒಂದು ಕಡೆಯಾದರೆ ಎ.ಸಿ ರೂಮು ಬಿಟ್ಟು ಹೊರಗೆ ಬಾರದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಆಕ್ರೋಶ ಸ್ಫೋಟಗೊಂಡಿತು.
ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್, ಪ್ರಶ್ನೋತ್ತರ ಕಲಾಪದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಕಾಡಾನೆ ಹಾವಳಿಯಿಂದ ರೈತರ ಬೆಳೆಗಳಿಗೆ ಮತ್ತು ಜನರ ಪ್ರಾಣಕ್ಕೆ ಅಪಾಯವಾಗುತ್ತಿದ್ದು, ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು? ಲಿಖಿತ ಪ್ರಶ್ನೆಯಲ್ಲಿ ಸಚಿವರು ತಪ್ಪು ಉತ್ತರ ನೀಡಿದ್ದಾರೆ. ಅವರಿಗಿಂತ ಅಲ್ಲಿ ಏನು ನಡೆದಿದೆ ಎಂಬ ವಿಚಾರ ತಮಗೆ ಗೊತ್ತಿದೆ ಎಂದು ಏರು ಧ್ವನಿಯಲ್ಲಿ ಹೇಳಿದರು.
ಇದಕ್ಕೆ ಅರಣ್ಯ ಸಚಿವ ಆರ್.ಶಂಕರ್ ಉತ್ತರಿಸಿ, ಮೂಡಿಗೆರೆಯಲ್ಲಿ ಇಬ್ಬರು ಆನೆ ಹಾವಳಿಯಿಂದ ಮೃತಪಟ್ಟಿದ್ದು, ಪರಿಹಾರ ವಿತರಿಸಲಾಗಿದೆ ಎಂದು ಒಂದು ಸಾಲಿನಲ್ಲಿ ಉತ್ತರಿಸಿದರು.
ಸಚಿವರ ಅಪೂರ್ಣ ಮಾಹಿತಿಗೆ ಆಕ್ರೋಶಗೊಂಡ ಪ್ರಾಣೇಶ್, ಈ ಹಿಂದಿನ ಅರಣ್ಯ ಸಚಿವ ರಮಾನಾಥ ರೈ, ಸಹ ಆನೆ ಹಾವಳಿ ತಡೆಯಲು ಯಾವುದೇ ಕ್ರಮಕೈಗೊಳ್ಳಲಿಲ್ಲ. ಈ ಬಗ್ಗೆ ಕೇಳಿದಾಗಲೆಲ್ಲ ನೋಡುವಾ, ಮಾಡುವಾ ಎಂಬ ಉತ್ತರ ಬಿಟ್ಟರೆ ಬೇರೆ ಪರಿಹಾರ ತಿಳಿಸುತ್ತಿರಲಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಫಲ್ಗುಣಿ, ಬಣಕಲ್ ಗ್ರಾಮದಲ್ಲಿ ಆನೆ ಹಾವಳಿಯಿಂದ ಇಬ್ಬರು ಮೃತಪಟ್ಟಿದ್ದು, ಸರ್ಕಾರದ ಉತ್ತರದಲ್ಲಿ ಇದನ್ನು ಸ್ಪಷ್ಟಪಡಿಸದೇ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಖಾರವಾಗಿ ಹೇಳಿದರು.
ಪ್ರಾಣೇಶ್ ಮಾತಿಗೆ ಸದಸ್ಯ ಸುನೀಲ್ ಸುಬ್ರಮಣಿ ಧ್ವನಿಗೂಡಿಸಿ, ಮಡಿಕೇರಿಯಲ್ಲಿಯೂ ಸಹ ಆನೆ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆ ನಿಷ್ಕ್ರಿಯವಾಗಿದೆ ಎಂದರು.
ಆಗ ಸಚಿವ ಆರ್.ಶಂಕರ್, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆನೆ ಹಾವಳಿ ನಿಯಂತ್ರಣ ಕುರಿತು ಸಭೆ ನಡೆಸಲಾಗಿದ್ದು, ಆನೆ ಸಂಚಾರ ತಡೆಗೆ ಅರಣ್ಯದಲ್ಲಿ ಬ್ಯಾರಿಕೇಡ್ ಅಳವಡಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಸಚಿವರ ಮಾತಿಗೆ ಆಡಳಿತ ಪಕ್ಷಗಳ ಸದಸ್ಯರಾದ ರವಿ ಮತ್ತು ಭೋಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಮಂತ್ರಿಗಳು ಆನೆ ಹಾವಳಿ ಬಗ್ಗೆ ಅಸಹಾಯಕತೆಯನ್ನು ತೋರುತ್ತಿದ್ದಾರೆಂದು ರವಿ ಹೇಳಿದರು. ಸಚಿವರಿಗೆ ಕೇಳಲಾದ ಪ್ರಶ್ನೆ ಗಂಭೀರವಾಗಿದ್ದು, ಅವರ ಉತ್ತರ ಮಾತ್ರ ಸಮರ್ಪಕವಾಗಿಲ್ಲ. ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್‍ರಿಂದ ಸಚಿವರು ಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಬ್ಯಾರಿಕೇಡ್ ನಿಂದ ಶೇ. 40-50 ರಷ್ಟು ಮಾತ್ರ ಪರಿಹಾರವಾಗುತ್ತದೆಯೇ ಹೊರತು ಶಾಶ್ವತ ಪರಿಹಾರವಾಗಲು ಸಾಧ್ಯವಿಲ್ಲ. ಐಬೆಕ್ಸ್ ಅಳವಡಿಕೆ ನೂರಕ್ಕೆ ನೂರರಷ್ಟು ಅವೈಜ್ಞಾನಿಕ. ಜನರ ಹಿತಕ್ಕಿಂತ ಸುಪ್ರೀಂಕೋರ್ಟ್ ಆದೇಶ ಪಾಲನೆ ಮುಖ್ಯವಲ್ಲ ಎಂದಾಗ, ಭೋಜೇಗೌಡರ ಮಾತಿಗೆ ಅರಣ್ಯ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಆರ್.ಶಂಕರ್ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕೆಂದು ಬಿಜೆಪಿ ಸದಸ್ಯರಾದ ಪ್ರಾಣೇಶ್, ಸುನೀಲ್ ಸುಬ್ರಮಣಿ, ಸಭಾಪತಿ ಪೀಠದ ಮುಂಭಾಗ ಧರಣಿಗೆ ಮುಂದಾದರು.
ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಒಂದು ಆನೆಯನ್ನು ಹಿಡಿಯಲು ಒಂದು ಕೋಟಿ ರೂಪಾಯಿ ಖರ್ಚಾಗಿದೆ. ಆನೆ ಹಿಡಿಯುವುದರಲ್ಲಿಯೂ ಭ್ರಷ್ಟಾಚಾರವಾಗಿದೆ. ಯಾವಾಗ ಅರಣ್ಯ ಇಲಾಖೆ ಆನೆ ಹಿಡಿಯುತ್ತದೆ ಎಂಬುದನ್ನು ಸ್ಪಷ್ಟಪಡಿಸಿ, ಜಿಲ್ಲಾ ಉಸ್ತುವಾರಿ ಸಚಿವರು ಅರಣ್ಯ ಸಚಿವರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದರು.
ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ವನ್ಯಜೀವಿ ಸಂರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿವೆ. ಕಾಡಿನಲ್ಲಿ ಪ್ರಾಣಿಗಳಿಗೆ ಆಹಾರ ಬೆಳೆಸುವ ಮತ್ತು ನೀರನ್ನು ಪೂರೈಸುವ ವ್ಯವಸ್ಥೆ ಮಾಡಬೇಕು. ಸಮಸ್ಯೆಗಳ ಬಗ್ಗೆ ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕು. ಪುಂಡಾನೆ ಹಿಡಿಯಲು ಅಧಿಕಾರಿಗಳು ಮುಂದಾಗಬೇಕು ಎಂದರು.ಬಿಜೆಪಿ ಉಪನಾಯಕ ನಾರಾಯಣಸ್ವಾಮಿ, ಅಧಿಕಾರಿಗಳು ಎಸಿ ಕೊಠಡಿಯನ್ನು ಬಿಟ್ಟು ಹೊರಗೆ ಕೆಲಸ ಮಾಡುವುದಿಲ್ಲ ಎಂದಾಗ, ಈ ಮಾತಿಗೆ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿಯವರಿಂದಾಗಿ ಪ್ರಶ್ನೋತ್ತರಕ್ಕೆ ತಡವಾಗುತ್ತಿದೆ. ಬೇರೆಯವರ ಪ್ರಶ್ನೆಗೂ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಎಲ್ಲರನ್ನು ಸಮಾಧಾನ ಮಾಡಿದ ಬಳಿಕ ಪ್ರಾಣೇಶ್ ಮತ್ತು ಸುನೀಲ್ ಸುಬ್ರಮಣಿ ತಮ್ಮ ಸ್ಥಾನಕ್ಕೆ ಮರಳಿದರು.
ಬಳಿಕ ಸಚಿವ ಆರ್.ಶಂಕರ್ ಮಾತನಾಡಿ, ಇದೆ 26- 27 ರಂದು ರಂದು ಮಡಿಕೇರಿ, ಮೂಡಿಗೆರೆಯ ಆನೆ ಹಾವಳಿ ಪ್ರದೇಶಗಳಿಗೆ ಭೇಟಿ ಕೊಟ್ಟು ಖುದ್ದು ಪರಿಶೀಲಿಸುವ ಭರವಸೆ ನೀಡಿದ ನಂತರ ಆನೆ ವಿಚಾರದ ಕೋಪ, ತಾಪ ತಣ್ಣಗಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








