ಹಾನಗಲ್ಲ :
ಬಾಳಂಬೀಡ ಏತ ನೀರಾವರಿ ಯೋಜನೆ ನನ್ನ ಗಮನಕ್ಕೆ ಬಂದಿದೆ. ರೈತರ ಸಾಲ ಮನ್ನಾ ಪ್ರಕ್ರಿಯೇ ಮುಗಿದ ಬಳಿಕ ಯೋಜನೆಯನ್ನು ಕೈಗೆತ್ತಿಕೊಳ್ಳಳಾಗುವುದು. ಹಾಗೂ ಬೆಳೆವಿಮೆಯಲ್ಲಿ ಆದ ವ್ಯತ್ಯಾಸ ಹಣವನ್ನು 20-25 ದಿನಗಳಲ್ಲಿ ರೈತರ ಖಾತೆಗೆ ಜಮಾ ಮಾಡಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಭರವಸೆ ಮೇರೆಗೆ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ರೈತರು ತಾತ್ಕಾಲಿಕ ತೆರೆ ಎಳೆಯುವ ಮೂಲಕ ಧರಣಿಯಿಂದ ಹಿಂದೆ ಸರಿದಿದ್ದಾರೆ.
ಗುರುವಾರ ಸಂಜೆ 5 ಘಂಟೆಯ ಹೊತ್ತಿಗೆ ಧರಣಿಯನ್ನು ಹಿಂಪಡೆದು ವರದಿಗಾರರಿಗೆ ವಿವರ ನೀಡಿದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಾಳಂಬೀಡ ಏತ ನೀರಾವರಿ ಹಾಗೂ ಬೆಳೆವಿಮೆಯಲ್ಲಿ ರೈತರಿಗಾದ ಅನ್ಯಾಯವನ್ನು ಸರಿಪಡಿಸುವವರೆಗೂ ನಿರಂತರ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿತ್ತು. ಅದರಂತೆ ಡಿ.17ರಿಂದ ತಹಶೀಲ್ದಾರ ಕಾರ್ಯಾಲಯದ ಎದುರು ಧರಣಿ ಆರಂಭಿಸಲಾಗಿತ್ತು. ಹಿರಿಯ ಅಧಿಕಾರಿಗಳ ಮಾತಿನಂತೆ ರೈತರ ಒಂದು ನಿಯೋಗ ಬೆಳಗಾವಿಗೆ ತೆರಳಿ ಮುಖ್ಯಮಂತ್ರಿ, ಕೃಷಿಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ, ಮುಖ್ಯಮಂತ್ರಿಗಳ ಭರವಸೆಯಂತೆ ಇಂದು ತಾತ್ಕಾಲಿಕವಾಗಿ ಧರಣಿಯಿಂದ ಹಿಂದೆ ಸರಿಯುತ್ತಿದ್ದೇವೆ ಎಂದರು.
ಜನೇವರಿ 28 ರಂದು ಹಾವೇರಿಯಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ರೈತರನ್ನು ಜಾಗೃತಗೊಳಿಸಿ, ಕಾನೂನಿನ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ. ಮುಖ್ಯಮಂತ್ರಿಗಳು ಮಾತಿನಂತೆ ನಡೆದುಕೊಂಡು ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸಮಾವೇಶದ ಸಂದರ್ಭದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬ್ಯಾಂಕರ್ಸ ಸಭೆ :
ಬೆಳೆವಿಮೆಯಲ್ಲಿ ಆಗಿರುವ ವ್ಯತ್ಯಾಸ ಹಾಗೂ ಲೋಪದೋಷಗಳ ಕುರಿತು ಪರಾಮರ್ಶೆ ನಡೆಸಲು ಡಿ.21 ರಂದು ಶುಕ್ರವಾರ ತಾಲೂಕು ತಹಶೀಲ್ದಾರ ಅವರ ಸಭಾಭವನದಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಉಪವಿಭಾಗಾಧಿಕಾರಿ ಬೋಯರ್ ಹರ್ಷಲ್ ನಾರಾಯಣರಾವ್, ತಹಶೀಲ್ದಾರ ಎಂ.ಗಂಗಪ್ಪ, ಲೀಡ್ ಬ್ಯಾಂಕ ಹಾಗೂ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳು, ಕೃಷಿ ಅಧಿಕಾರಿಗಳು, ರೈತ ಮುಖಂಡರು ಪಾಲ್ಗೊಂಡು ಚರ್ಚೆ ನಡೆಸುವರು.
ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಮಲ್ಲೇಶಪ್ಪ ಪರಪ್ಪನವರ, ಮಹಲಿಂಗಪ್ಪ ಅಕ್ಕಿವಳ್ಳಿ, ವಾಸುದೇವ ಕಮಾಣಿ, ರಾಜೀವ ದಾನಪ್ಪನವರ, ರುದ್ರಪ್ಪ ಹಣ್ಣಿ, ಮುಕ್ತಾರ ಅಹ್ಮದ ಬಾಳೂರ, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ರಾಮೂ ಯಳ್ಳೂರ, ಉಪವಿಭಾಗಾಧಿಕಾರಿ ಬೋಯರ್ ಹರ್ಷಲ್ ನಾರಾಯಣರಾವ್, ತಹಶೀಲ್ದಾರ ಎಂ.ಗಂಗಪ್ಪ, ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ಪ್ರತಿಭಟನೆ ಹಿಂಪಡೆಯುವ ಸಂದರ್ಭದಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ