ಚಿತ್ರದುರ್ಗ: 
ಬುಡಕಟ್ಟು ಸಂಸ್ಕತಿಯ ಅಚರಣೆಗಳಲ್ಲಿ ಒಂದಾಗಿರುವ ಗಾದ್ರಿಪಾಲನಾಯಕ ಸ್ವಾಮಿಯ ಮಿಂಚೇರಿ ಯಾತ್ರೆಗೆ ಬಚ್ಚಬೋರನಹಟ್ಟಿಯ ಗ್ರಾಮಸ್ಥರು ಶನಿವಾರ ಚಕ್ಕಡಿಗಾಡಿಗಳಲ್ಲಿ ತೆರಳಿದರು. ನೂರಾರು ಎತ್ತಿನ ಗಾಡಿಗಳಲ್ಲಿ ಹೆದ್ದಾರಿಯ ಮೂಲಕ ಮಿಂಚೇರಿ ಗುಡ್ಡಕ್ಕೆ ಪಯಣ ಬೆಳೆಸಿದರು.
ಮ್ಯಾಸಬೇಡ ಸಮುದಾಯದವರು ಐದು ವರ್ಷಗಳಿಗೊಮ್ಮೆ ಆಚರಿಸುವ ಬುಡಕಟ್ಟು ಸಂಸ್ಕೃತಿಯ ಈ ಉತ್ಸವಕ್ಕೆ `ಮಿಂಚೇರಿ ಯಾತ್ರೆ’ ಎಂಬ ಹೆಸರಿದೆ. ಚಿತ್ರದುರ್ಗದ ತುರುವನೂರು ರಸ್ತೆ ಮಾರ್ಗವಾಗಿ ಸಂಚರಿಸುತ್ತ, ಆರ್ಟಿಒ ಕಚೇರಿ ಹತ್ತಿರ ಶನಿವಾರ ಬಂದಾಗ ಅಲ್ಲಿದ್ದ ಜನ ಅಚ್ಚರಿಯಿಂದಲೇ ನೋಡತೊಡಗಿದರು.
ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮಸ್ಥರು ಗಾದ್ರಿಮಲೆ ಹೆಬ್ಬುಲಿ ಗಾದ್ರಿಪಾಲನಾಯಕ ಸ್ವಾಮಿ ಹೆಸರಿನಲ್ಲಿ ಅದ್ಧೂರಿಯಾಗಿ ಜಾತ್ರೆಯನ್ನು ಶತಶತಮಾನಗಳಿಂದಲೂ ಆಚರಿಸುತ್ತ ಬಂದಿದ್ದು, ಆ ಪರಂಪರೆ ಇಂದಿಗೂ ಮುಂದುವರೆದುಕೊಂಡು ಬಂದಿದೆ. ಗ್ರಾಮದಿಂದ ಸುಮಾರು 45 ಕಿ.ಮೀ ದೂರದ ಸಿರಿಗೆರೆ ಸಮೀಪದ ಮಿಂಚೇರಿ ಗುಡ್ಡಕ್ಕೆ ಹೋಗುವಂತಹ ವಿಶಿಷ್ಟ ಪದ್ಧತಿ ಇದು. ಅದಕ್ಕಾಗಿಯೇ ಇದನ್ನು ಮಿಂಚೇರಿ ಯಾತ್ರೆ ಎಂದು ಕರೆಯುವ ಪ್ರತೀತಿಯೂ ಇದೆ.
ಆರು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಬಚ್ಚಬೋರನಹಟ್ಟಿಯಲ್ಲಿ ಚಾಲನೆ ನೀಡಲಾಯಿತು. ಇಡೀ ಗ್ರಾಮದ ಬಹುತೇಕರು ವಿವಿಧ ಸಾಮಗ್ರಿಗಳೊಂದಿಗೆ ಎತ್ತಿನಗಾಡಿ, ಟ್ರಾಕ್ಟರ್ ಏರಿದರು. ಅದರಲ್ಲಿ ಮಹಿಳೆಯರೇ ಹೆಚ್ಚು. ಮುಂಭಾಗದಲ್ಲಿ ಪುರುಷರು, ಯುವಕರು ಸಾಥ್ ನೀಡಿದರು. ಪಾಲ್ಗೊಂಡಿದ್ದ ಅನೇಕರು ಹೊಸ ವಸ್ತ್ರ ತೊಟ್ಟು ಸಂಭ್ರಮಿಸಿದರು. ಪಾದಯಾತ್ರೆ ಮಾಡುತ್ತಿದ್ದವರಲ್ಲಿ ಎಲ್ಲಿಲ್ಲದ ಉತ್ಸಾಹ. ಅದು ಕೊನೆಯವರೆಗೂ ಕುಗ್ಗಲಿಲ್ಲ. ಇದನ್ನು ನೋಡಲು ಕೆಲ ದಾರಿ ಮಾರ್ಗದುದ್ದಕ್ಕೂ ಜನವೋ ಜನ.
300 ಎತ್ತಿನ ಗಾಡಿ:
ಮಿಂಚೇರಿ ಯಾತ್ರೆಯಲ್ಲಿ ಈ ಬಾರಿ ಸುಮಾರು 300 ಎತ್ತಿನ ಗಾಡಿಗಳನ್ನು ಶೃಂಗಾರ ಮಾಡಿಕೊಂಡು ಯಾತ್ರೆ ಹೊರಟಿತು. ಗಾದ್ರಿಪಾಲನಾಯಕ ಸನ್ನಿಧಾನಕ್ಕೆ ಹೋಗಿ ಎಡೆ ಅರ್ಪಿಸಿ, ಪೂಜೆ ಸಲ್ಲಿಸಿ ಬರುವ ಸಂಪ್ರದಾಯವಿದೆ. ಜತೆಗೆ ಗುಡ್ಡದಲ್ಲಿ ಹುಲಿರಾಯನಿಗೂ ಪೂಜೆ ನೆರವೇರುತ್ತದೆ.
ಮಿಂಚೇರಿ ಯಾತ್ರೆ ಬಚ್ಚಬೋರನಹಟ್ಟಿಯಿಂದ ಪ್ರಾರಂಭಗೊಂಡು ಗೋನೂರು, ರಾಷ್ಟ್ರೀಯ ಹೆದ್ದಾರಿ ಮೂಲಕ ಚಿತ್ರದುರ್ಗ, ಸೀಬಾರ, ಗೂಳಯ್ಯನಹಟ್ಟಿ, ಕ್ಯಾಸಾಪುರ, ಕಡ್ಲೇಗುದ್ದು, ಮೇಗಳಹಟ್ಟಿ, ಕೋಣನೂರು, ಚುಕ್ಕೇನಹಳ್ಳಿ, ಸಿರಿಗೆರೆ, ಮದಕರಿಪುರ ಹಾಗೂ ಮಿಂಚೇರಿಪುರದವರೆಗೆ ಸಂಚರಿಸುತ್ತದೆ.
ಯಾತ್ರೆಯಲ್ಲಿ ಸಾವಿರಾರು ಮಂದಿ ತಮ್ಮ ಸಂಬಂಧಿಕರ ಜೊತೆಗೂಡಿ ಬುಡಕಟ್ಟು ಸಂಸ್ಕೃತಿಯ ಸಂಪ್ರದಾಯದಂತೆ ಗುಡ್ಡಕ್ಕೆ ಹೋಗುತ್ತಾರೆ. ವಿಶಿಷ್ಟ ಆಚರಣೆಯಲ್ಲಿ ನಾಯಕ ಸಮುದಾಯದವರು ಜಿಲ್ಲೆಯ ವಿವಿಧಡೆಗಳಿಂದ ಬರುವ ಮೂಲಕ ಪಾಲ್ಗೊಳ್ಳುತ್ತಿರುವುದು ಮತ್ತೊಂದು ವಿಶೇಷ. ಎತ್ತಿನ ಗಾಡಿಗಳ ಜೊತೆ ಟ್ರಾಕ್ಟರ್ ಮತ್ತಿತರೆ ವಾಹನಗಳಲ್ಲೂ ಸಾವಿರಾರು ಜನ ಪಾಲ್ಗೊಳ್ಳುತ್ತಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








