ಕೊರಟಗೆರೆ
ತುಮಕೂರು ಜಿಲ್ಲೆಯಲ್ಲಿ 100 ಎಕರೆಗಳ ಭೂ ಪ್ರದೇಶದಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ ಜಿ.ಪರಮೇಶ್ವರ್ ತಿಳಿಸಿದರು.
ಅವರು ಸೋಮವಾರ ಕೊರಟಗೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕರ್ನಾಟಕ ಗ್ರಾಮೀಣ ಅಭಿವೃದ್ದಿ ನಿಯಮಿತ ವತಿಯಿಂದ 4.42 ಕೋಟಿ ರೂ.ಗಳ ವೆಚ್ಚದ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚು ಮಹತ್ವ ನೀಡುವ ದೆಸೆಯಿಂದ ಸುಸಜ್ಜಿತ ಕ್ರೀಡಾ ವಿಶ್ವವಿದ್ಯಾಲಯವನ್ನು ನಿರ್ಮಾಣ ಮಾಡಲಾಗುತ್ತಿದೆ.
ಇದಕ್ಕಾಗಿ 100 ಎಕರೆ ಭೂ ಪ್ರದೇಶವನ್ನು ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ. ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೊಜನೆಯಲ್ಲಿ ರಾಜ್ಯಕ್ಕೆ ಹೆಚ್ಚಿನ ಕ್ರೀಡಾ ಅನುದಾನ ನೀಡುವಂತೆ ಕೇಂದ್ರ ಕ್ರೀಡಾ ಸಚಿವರಾದ ರಾಜವರ್ಧನ್ ರಾಥೋಡ್ರವರಲ್ಲಿ ಮನವಿ ಮಾಡಿದ್ದೇವೆ. ಈಗಾಗಲೇ ತುಮಕೂರಿನಲ್ಲಿ 8.25 ಕೋಟಿ ರೂ.ಗಳಲ್ಲಿ ಕ್ರೀಡಾಂಗಣದ ಅಭಿವೃದ್ದಿ ಮತ್ತು ನಿರ್ಮಾಣ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರಿನಲ್ಲಿ 53 ಕೋಟಿ ರೂ.ಗಳನ್ನು ವಿವಿಧ ಕ್ರೀಡಾ ಕೆಲಸಗಳಿಗೆ ಬಳಸಲಾಗುವುದು. ಇದರೆಲ್ಲಾ ಉದ್ದೇಶ ಉತ್ತಮ ಕ್ರೀಡಾಪಟುಗಳು ರಾಜ್ಯದಲ್ಲಿ ರೂಪುಗೊಂಡು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಬೇಕು ಎಂದರು.
ಕೊರಟಗೆರೆ ಪಟ್ಟಣದಲ್ಲಿ 4.42 ಕೋಟಿ ರೂ.ಗಳ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಾಣ ಮಾಡುತ್ತಿದ್ದು, ಇದರಲ್ಲಿ ಪ್ಲೇಯಿಂಗ್ ಏರಿಯಾ, ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳಿಗೆ ಉತ್ತಮ ಶೌಚಾಲಯ, ಕಚೆರಿ ಮತ್ತು ಪ್ರವೇಶದ್ವಾರ, ಪುರುಷರ ಮತ್ತು ಮಹಿಳೆಯರ ಜಿಮ್ ಕೊಠಡಿ ಮತ್ತು ಶೌಚಾಲಯ, ಯೋಗಾಸನ, ವಿವಿಧ ಉದ್ದೇಶಿತ ಕೊಠಡಿಗಳು ಸೇರಿದಂತೆ ಹಲವು ಬಗೆಯ ಕ್ರೀಡೆಗಳಿಗೆ ಒಳಾಂಗಣ ಕ್ರೀಡಾಂಗಣ ಮಾಡಲಾಗಿದೆ ಎಂದ ಅವರು, ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನು ಶೀಘ್ರವಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಇದರಿಂದ ಪಟ್ಟಣದ ಅಭಿವೃದ್ದಿಗೆ ಹೆಚ್ಚಿನ ಅನುದಾನ ಬರುತ್ತದೆ ಎಂದರು.
ಸಮಾರಂಭದಲ್ಲಿ ಕ್ರೀಡಾ ಆಯುಕ್ತ ಶ್ರೀನಿವಾಸ್, ತುಮಕೂರು ಸಂಸದ ಮುದ್ದಹನುಮೆಗೌಡ, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಸಿಇಒ ಅನೀಸ್ಕಣ್ಮಣಿಜಾಯ್, ತುಮಕೂರು ಎಸ್ಪಿ ದಿವ್ಯಾ ಗೋಪಿನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಶ್ವತ್ಥ್ ನಾರಾಯಣ, ಅರಕೆರೆ ಶಂಕರ್, ಪಿಎಸ್ಐ ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








