ಹೊಸಪೇಟೆ :
ಇಂದಿನ ಮಾರುಕಟ್ಟೆ ಸಂಸ್ಕತಿ ಮತ್ತು ಎಲೆಕ್ಟ್ರಾನಿಕ್ ಯುಗದಲ್ಲಿ ಉಪಯೋಗಿಸಿ ಬಿಸಾಡುವ ಸಂಸ್ಕತಿ ಇರುವಾಗ ಇನ್ನು ಆ್ಯಂಟಿಕ್ ವಸ್ತುಗಳು ಉಳಿಯುತ್ತಾವಾ ? ಎಂದು ಹಿರಿಯ ಕಲಾವಿದೆ ಗಾಯತ್ರಿ ದೇಸಾಯಿಯವರು ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಕನ್ನಡ ವಿಶ್ವವಿದ್ಯಾಲಯ, ಹಂಪಿ ದೃಶ್ಯಕಲಾ ವಿಭಾಗ ಹಾಗೂ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ಮತ್ತು ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಜಂಟಿಯಾಗಿ 26.12.2018ರಿಂದ 30.12.2018ರವರೆಗೆ ಮಂಟಪ ಸಭಾಂಗಣದಲ್ಲಿ ಆಯೋಜಿಸಲಾದ “ರಾಷ್ಟ್ರೀಯ ಪಾರಂಪರಿಕ ಚಿತ್ರಕಲಾ ಶಿಬಿರವನ್ನು” ಕ್ಯಾನ್ವಾಸ್ನ ಮೇಲೆ ಚಿತ್ರ ಬರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಸಮಕಾಲೀನ ಪ್ರಯೋಗಗಳ ಮಧ್ಯೆ ಪಾರಂಪರಿಕ ಚಿತ್ರಕಲೆ ಉಳಿಯುವುದೇ ಎಂದು ಆತಂಕ ವ್ಯಕ್ತಪಡಿಸಿದ ಅವರು, ಪಾರಂಪರಿಕ ಚಿತ್ರಗಳನ್ನು ಸಮಕಾಲೀನಗೊಳಿಸಿದರೆ ಪಾರಂಪರಿಕ ಚಿತ್ರಕಲೆಯು ಉಳಿದು ಬೆಳೆಯಬಹುದು ಎಂದರು.
ಸಮಕಾಲೀನ ಸಂದರ್ಭದಲ್ಲಿ ಫೆಮಿನಿಸಮ್ ಮಾಕ್ರ್ಸೀಸಂ, ಜಂಡರಿಸಂ, ಐಡೆಂಟಿಟಿ ಆಧಾರಿತವಾದ ಚಿತ್ರಕಲಾಕೃತಿಗಳು ಹೊರಹೊಮ್ಮುತ್ತಿವೆ. ಜೊತೆಗೆ ಸಂಶೋಧನಾ ಆಧಾರಿತ ಕಲಾಕೃತಿಗಳು ರಚನೆಯಾಗುತ್ತಿವೆ. ಮೈಸೂರು ಸುರಪುರ, ತಂಜಾವೂರು ಶೈಲಿಯ ಶ್ರೀಮಂತ ಚಿತ್ರಕಲೆ ಬಳಕೆಯಲ್ಲಿದೆ. ದೃಶ್ಯಕಲೆಯ ಭಾಷೆಯು ಸಂಸ್ಕತಿಗೆ ಅನುಗುಣವಾಗಿ ಬಂದಿದೆ. ಯುವಜನಾಂಗವು ಪಾರಂಪರಿಕ ಚಿತ್ರಕಲೆಯನ್ನು ಉಳಿಸಲು ಪ್ರಯತ್ನಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಕುಲಸಚಿವ ಡಾ.ಮಂಜುನಾಥ ಬೇವಿನಕಟ್ಟಿ ಮಾತನಾಡಿ, ಶಿಬಿರದ ಮೂಲಕ ಪಾರಂಪರಿಕ ಚಿತ್ರಗಳ ಮರುಸೃಷ್ಟಿ ಹಾಗೂ ಚಿತ್ರಗಳಿಗೆ ಜೀವ ಕೊಡುವ ಕೆಲಸ ನಡೆಯುತ್ತಿದೆ. ನಾಡಿನ ಸಮಾಜದ ಪ್ರತಿಯೊಂದು ಘಟನೆಗಳಿಗೆ ಸ್ಪಂದಿಸುತ್ತ ಕಲಾವಿದರು ತಮ್ಮ ಕೃತಿಗಳ ಮೂಲಕ ಅಭಿವ್ಯಕ್ತಿಸಿ ಮುಂದಿನ ಪೀಳಿಗೆಗೆ ಒಂದು ಸಂದೇಶ ನೀಡುತ್ತಾರೆ. ಮಾತನ್ನು ಮೀರಿದ ಭಾವಗಳು ಚಿತ್ರಕಲೆಯಲ್ಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಕುಲಪತಿ ಡಾ.ಮಲ್ಲಿಕಾ ಎಸ್. ಘಂಟಿಯವರು ಮಾತನಾಡಿ, 80ರ ದಶಕದಲ್ಲಿ ಸಾಮಾಜಿಕ ಪ್ರಗತಿಪರ ಚಳುವಳಿಗೆ ಕಲಾವಿದರು ಪೂರಕವಾಗಿದ್ದರು. ಜಾಗತೀಕರಣ ಸಂದರ್ಭದಲ್ಲಿ ಕಲಾವಿದರು ಪರ್ಯಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಕಲಾವಿದರು ತಮ್ಮ ವಿಶಿಷ್ಟ ಲೋಕದಲ್ಲಿ ಕಳೆದುಹೋಗತ್ತಾರೆ. ವಿಶಿಷ್ಟ ಲೋಕಗಳು ಸ್ಪಂದಿಸಿದಾಗ ಕೃತಿಗಳು ರಚನೆಯಾಗುತ್ತವೆ. ಪ್ರಭಾವಗಳು ಕಲಾಕೃತಿಗಳ ರಚನೆಗೆ ಪ್ರೇರಣೆ ನೀಡುತ್ತವೆ. ಜಾಗತೀಕರಣದ ಹೊಡೆತದಲ್ಲಿ ಪಾರಂಪರಿಕ ಕಲೆಯನ್ನು ಆಧುನಿಕ ಪರಂಪರೆಯ ಒರೆಗೆ ಹಚ್ಚಿ ಸ್ವಲ್ಪ ಹೊಳಪು ತರಬೇಕಾಗಿದೆ. ಮಾರುಕಟ್ಟೆ ವ್ಯವಸ್ಥೆಯ ನಿರ್ವಹಣೆ ಕಲಾವಿದರಿಗೆ ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಜನರ ಮಾನಸಿಕ ಸ್ಥಿತಿಯನ್ನು ಕಲಾವಿದರು ಅರ್ಥಮಾಡಿಕೊಂಡರೆ ಬದುಕಿಗೆ ಆರ್ಥಿಕ ಸುಭದ್ರತೆ ಸಿಗುತ್ತದೆ ಎಂದರು.
ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿದರು. ದೃಶ್ಯಕಲಾವಿಭಾಗದ ಮುಖ್ಯಸ್ಥ ಡಾ.ಅಶೋಕಕುಮಾರ ರಂಜೇರೆ ಅವರು ಪ್ರಾಸ್ತವಿಕ ನುಡಿದರು.ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ನಗರ ಯೋಜನಾಧಿಕಾರಿ ಸುನೀಲ್, ಡಾ.ಶಿವಾನಂದ ಹೆಚ್.ಬಂಟನೂರು, ಶಿಬಿರದ ಸಂಚಾಲಕರಾದ ಡಾ.ಮೋಹನರಾವ್ ಬಿ. ಪಂಚಾಳ, ಇದ್ದರು.
ಶಿಬಿರದಲ್ಲಿ ಹೈದ್ರಾಬಾದ್, ಚೆನ್ನೈ, ಗೋವಾ, ಕೇರಳ, ಅಹಮದಾಬಾದ್, ಗುಲ್ಬರ್ಗಾ, ಬೆಂಗಳೂರು ಹಾಸನ, ಓಡಿಸ್ಸಾ, ಕೊಲ್ಹಾಪುರ, ಸತಾರ, ಮಂಡ್ಯ, ಹುಮನಾಬಾದ್, ತುಮಕೂರು, ಬಳ್ಳಾರಿ, ಬಿಜಾಪುರ ಮೊದಲಾದ ಪ್ರದೇಶಗಳಿಂದ ಹಿರಿಯ ಕಲಾವಿದರು, ಯುವಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
