ಚಳ್ಳಕೆರೆ
ತಾಲ್ಲೂಕು ಪಂಚಾಯಿತಿಯ ಪ್ರತಿಯೊಂದು ಸಭೆಯಲ್ಲೂ ಸಹ ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಮೊದಲ ಆದ್ಯತೆ ನೀಡಬೇಕೆಂದು ಒತ್ತಾಯ ಪಡಿಸಿದರೂ ಸಹ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮತ್ತು ಪಂಚಾಯಿತಿ ರಾಜ್ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸಕರಾತ್ಮಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯೆತನ ಸರ್ಕಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಬೇಸರ ವ್ಯಕ್ತ ಪಡಿಸಿದರು.
ಅವರು, ಬುಧವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬ ಅಧಿಕಾರಿಯೂ ತನ್ನ ವ್ಯಾಪ್ತಿಯಲ್ಲಿಯೇ ಪ್ರಾಮಾಣಿಕವಾಗಿ ಸಮಸ್ಯೆಯ ತೀರ್ವತೆಯನ್ನು ಅರಿತು ಕಾರ್ಯನಿರ್ವಹಿಸಿದಲ್ಲಿ ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ. ನೀವು ಕೈಗೊಳ್ಳುವ ಕಾರ್ಯಗಳ ಬಗ್ಗೆ ಕನಿಷ್ಠ ಪಕ್ಷ ಚುನಾಯಿತ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುವ ಪ್ರವೃತ್ತಿಯನ್ನು ಎಲ್ಲಾ ಅಧಿಕಾರಿಗಳು ಬೆಳೆಸಿಕೊಳ್ಳಬೇಕು. ನೀವು ಮಾಡುವ ಕಾರ್ಯದ ಬಗ್ಗೆ ಸಾರ್ವಜನಿಕವಾಗಿ ತಿಳಿಸಿದರೆ ನಿಮ್ಮ ಮೇಲೆ ಯಾವುದೇ ಆರೋಪವಿರುವುದಿಲ್ಲ. ಸರ್ಕಾರದ ಕೆಲಸ ಮಾಡುವ ಸಂದರ್ಭದಲ್ಲಿ ಚಿಕ್ಕಪುಟ್ಟ ಲೋಪಗಳಾದರೆ ದೃತಿಗೆಡದೆ ನಿಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿ ಮುಗಿಸಿ ಎಂದರು.
ಕ್ಷೇತ್ರದಾದ್ಯಂತ ಕುಡಿಯುವ ಶುದ್ದ ನೀರಿನ ಘಟಕದ ಬಗ್ಗೆ ಈಗಾಗಲೇ ಪತ್ರಿಕಾ ವರದಿಯನ್ನು ಗಮನಿಸಿರುವ ಅಧಿಕಾರಿ ವರ್ಗ ಅವುಗಳನ್ನು ದುರಸ್ಥಿಗೊಳಿಸಿ ಜನರಿಗೆ ನೀರುಕೊಡಿ. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರು ತೊಂದರೆಯಾಗದಂತೆ ಜಾಗೃತಿವಹಿಸಿವುದು ಅಧಿಕಾರಿಗಳ ಕರ್ತವ್ಯ, ಈ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ತಿಳಿಸಿದರು. ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದು, ಯುವಜನತೆ ಅಡ್ಡದಾರಿಹಿಡಿಯುವುದಲ್ಲದೆ ದುಡಿಯುವ ಹಣವೆಲ್ಲಾ ಕುಡಿತಕ್ಕೆ ವ್ಯಯವಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಆರೋಪಿಸಿದರು. ಕೂಡಲೇ ಅಬಕಾರಿ ವೃತ್ತ ನಿರೀಕ್ಷಕ ತುಕರಾಮ್‍ನಾಯ್ಕರವರನ್ನು ಸಭೆಗೆ ಕರಿಸಿ ಗ್ರಾಮದ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ಕೂಡಲೇ ತಡೆಗಟ್ಟುವಂತೆ ಸೂಚಿಸಿದರು.
ತಾಲ್ಲೂಕಿನ ಪರಶುರಾಮಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ನೇಮಕವಾಗದ ಹಿನ್ನೆಲೆಯಲ್ಲಿ ಕೂಡಲೇ ತಜ್ಞ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾರವರಿಗೆ ಸೂಚನೆ ನೀಡಿದರು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವುದೇ ಸೂಕ್ತ ಚಿಕಿತ್ಸೆ ನೀಡದೆ ಚಿತ್ರದುರ್ಗಕ್ಕೆ ಕಳುಹಿಸಿಕೊಡುವ ಆರೋಪದ ಬಗ್ಗೆ ಆಡಳಿತಾಧಿಕಾರಿ ಡಾ.ಜಿ.ತಿಪ್ಪೇಸ್ವಾಮಿಯವರನ್ನು ಪ್ರಶ್ನಿಸಿದಾಗ ಅಪಘಾತ ಇನ್ನಿತರೆ ಸಂದರ್ಭಗಳಲ್ಲಿ ರೋಗಿಗಳ ಪ್ರಾಣ ಉಳಿಸುವುದು ಮುಖ್ಯವಾಗಿದ್ದು, ಅದೇ ರೀತಿ ಹೆರಿಗೆ ಸಂದರ್ಭದಲ್ಲೂ ತಾಯಿಯ ಮಗು ಪ್ರಾಣ ಉಳಿಸಲು ಅನಿವಾರ್ಯವಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಪ್ರಸ್ತುತ ಆಸ್ಪತ್ರೆಯಲ್ಲಿರುವ ವ್ಯವಸ್ಥೆಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಚಳ್ಳಕೆರೆ ಯಿಂದ ನಾಯಕನಹಟ್ಟಿ ರಸ್ತೆ ಹದಗೆಟ್ಟಿದ್ದು ತುರ್ತು ರಿಪೇರಿಗೊಳಿಸುವಂತೆ ಒತ್ತಾಯ ಪಡಿಸಿದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಸತ್ಯಪ್ಪನವರಿಗೆ ರಸ್ತೆ ದುರಸ್ಥಿ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಿದರು. ಕೃಷಿ ಇಲಾಖೆ ಅಧಿಕಾರಿ ಎನ್.ಮಾರುತಿ ಮಾಹಿತಿ ನೀಡಿ ಬೆಳೆ ನಷ್ಟ ಪರಿಹಾರ ಕುರಿತಂತೆ ಈ ಬಾರಿ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾರಾಮಣ್ಣ, ಉಪಾಧ್ಯಕ್ಷೆ ತಿಪ್ಪಮ್ಮಲಿಂಗಾರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಗದ್ದಿಗೆ ತಿಪ್ಪೇಸ್ವಾಮಿ, ಸಣ್ಣಸೂರಯ್ಯ, ಆಂಜನೇಯ, ಜಿ.ವೀರೇಶ್, ನಾಗೇಂದ್ರರೆಡ್ಡಿ, ತಿಮ್ಮಾರೆಡ್ಡಿ, ಟಿ.ತಿಪ್ಪೇಸ್ವಾಮಿ, ಒ.ತಿಪ್ಪೇಸ್ವಾಮಿ, ಕಾಲುವೇಹಳ್ಳಿ ಶ್ರೀನಿವಾಸ್, ಸಮರ್ಥರಾಯ, ರಾಮರೆಡ್ಡಿ, ಉಮಾಜನಾರ್ಧನ್, ಸುವರ್ಣಮ್ಮ, ರಂಜಿತಾ, ದ್ರಾಕ್ಷಾಯಣಮ್ಮ, ತಿಪ್ಪಮ್ಮ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಲ್.ಈಶ್ವರಪ್ರಸಾದ್, ವ್ಯವಸ್ಥಾಪಕ ತಿಪ್ಪೇಸ್ವಾಮಿ ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
