ಬೆಂಗಳೂರು
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿಯೇ ಸ್ಪರ್ಧೆ ಮಾಡಬೇಕು ಎಂದು ಪಕ್ಷ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಇದು ಕಾಂಗ್ರೆಸ್ ನಾಯಕರ ಮುಂದಿನ ನಡವಳಿಕೆಗಳ ಮೇಲೆ ಅವಲಂಬಿತವಾಗಿದೆ ಎಂದು ಜೆಡಿಎಸ್ ವರಿಷ್ಠ ನಾಯಕ , ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಈ ಕುರಿತು ಕೆಲವು ಮಾಧ್ಯಮ ಪ್ರತಿನಿಧಿಗಳ ಜೊತೆ ಅನೌಪಚಾರಿವಾಗಿ ಮಾತನಾಡಿದ ಅವರು, ಕಾಂಗ್ರೆಸ್ ದೊಡ್ಡಣ್ಣನ ಪಾತ್ರದ ಬಗ್ಗೆ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ನಿಗಮ- ಮಂಡಳಿ ನೇಮಕಾತಿಯಲ್ಲಿ ನಮಗೆ ಮೂರನೇ ಒಂದು ಭಾಗದಷ್ಟು ಸ್ಥಾನ ಕೊಟ್ಟರೂ ಬೇಸರವಿಲ್ಲ, ಆದರೆ ಕಾಂಗ್ರೆಸ್ ದೊಡ್ಡಣ್ಣನ ಪಾತ್ರ ವಹಿಸಿ ಏಕಾಏಕಿ ತೀರ್ಮಾನ ಮಾಡುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ.
ನಿಗಮ- ಮಂಡಳಿ ನೇಮಕಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಸೌಜನ್ಯಕ್ಕಾದರೂ ನಮ್ಮ ಜೊತೆ ಮಾತುಕತೆ ನಡೆಸಬೇಡವೇ. ಎಲ್ಲವನ್ನು ಏಕಾಂಗಿಯಾಗಿಯೇ ತೀರ್ಮಾನ ಮಾಡುವ ನಿಲುವು ಸರಿಯಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ದೊಡ್ಡಣ್ಣನ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ 28 ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವ ತೀರ್ಮಾನಕ್ಕೆ ಬರುವ ಇಂಗಿತ ವನ್ನು ಪಕ್ಷದ ವಕ್ತಾರರು ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ದೇವೇಗೌಡರು ಇದೆಲ್ಲ ಕಾಂಗ್ರೆಸ್ ನಮ್ಮನ್ನು ಯಾವ ರೀತಿ ಗೌರವದಿಂದ ನಡೆಸಿಕೊಳ್ಳುತ್ತದೆ ಎಂಬುದರ ಮೇಲೆ ನಿಂತಿದೆ. ಈ ಸಮಯದಲ್ಲಿ ನಾನು ಯಾರನ್ನು ಬೊಟ್ಟು ಮಾಡಿ ದೂರಲು ಇಷ್ಟಪಡುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ