ಚಿತ್ರದುರ್ಗ
ಜಿಲ್ಲಾ ಪಂಚಾಯಿತಿಯಲ್ಲಿ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟ್ಟು ಶಮನಗೊಳ್ಳುವ ಬದಲಿಗೆ ಇನ್ನಷ್ಟು ಬಿಗಿಯಾಗ ತೊಡಗಿದೆ. ಕಳೆದ ಒಂದು ವರ್ಷದಿಂದ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ನಡೆಯುತ್ತಿರುವ ಭಿನ್ನಮತಕ್ಕೆ ಮತ್ತೊಮ್ಮೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ರದ್ದಾಗಿದೆ.
ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರ ವಿರುದ್ದ ಬಂಡಾಯವೆದ್ದಿರುವ ಸದಸ್ಯರು ಬುಧವಾರ ಅವಿಶ್ವಾಸ ಮಂಡನೆಗೆ ಸಭೆ ಕರೆಯುವಂತೆ ಕೋರಿ 31 ಮಂದಿ ಸದಸ್ಯರು ಸಹಿ ಮಾಡಿರುವ ಪತ್ರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲ್ಲಿಸಿದ್ದರು. ಅಧ್ಯಕ್ಷರಿಗೂ ಅಂಚೆ ಮೂಲಕ ಪತ್ರವನ್ನು ರವಾನಿಸಲಾಗಿದೆ.
ಕಳೆದ ಹದಿನೈದು ದಿನಗಳಿಂದ ಅಧ್ಯಕ್ಷರ ವಿರುದ್ದ ಸಹಿ ಸಂಗ್ರಹಣೆ ಮಾಡುತ್ತಿರುವ ಸಂಗತಿ ಗೊತ್ತಿದ್ದೂ ಸೌಭಾಗ್ಯ ಬಸವರಾಜನ್ ಸಾಮಾನ್ಯ ಸಭೆಗೆ ದಿನಾಂಕ ಗೊತ್ತು ಪಡಿಸಿದ್ದರು. ಗುರುವಾರದ ಸಭೆಗೆ ಮತ್ತೆ ಕೊರಂ ಕೊರತೆ ಎದುರಾಗಿದ್ದರಿಂದ ಸಭೆ ಅನಿವಾರ್ಯವಾಗಿ ಮುಂಡೂಲ್ಪಟ್ಟಿತ್ತು. ಹೀಗಾಗಿ ಅಧ್ಯಕ್ಷರು ಮತ್ತೊಮ್ಮೆ ಮುಖಭಂಗ ಅನುಭವಿಸಬೇಕಾಯಿತು
ಜಿ.ಪಂ.ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ನಿಗಧಿಯಾಗಿದ್ದ ಸಭೆಗೆ ಅರ್ದತಾಸು ಮುಂಚೆಯೇ ಅಧಿಕಾರಿಗಳು ಸೇರಿದ್ದರು. ಅಧ್ಯಕ್ಷರು ಒಳಗೊಂಡಂತೆ ಬಹುತೇಕ ಇಲಾಖೆಗಳ ಮುಖ್ಯಸ್ಥರು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವೇದಿಕೆಯಲ್ಲಿ ಕುಳಿತಿದ್ದರು. ನಿಗಧಿತ ಸಮಯಕ್ಕಿಂತ ಒಂದು ಗಂಟೆ ಕಾದರೂ ಇಬ್ಬರು ಸದಸ್ಯರು ಬಿಟ್ಟರೆ ಉಳಿದವರು ಯಾರೂ ಇತ್ತ ಸುಳಿಯಲಿಲ್ಲ. ಕೆಲವು ಹಿರಿಯ ಸದಸ್ಯರು ಕಚೆರಿಯಲ್ಲಿದ್ದರೂ ಸಭೆಗೆ ಹಾಜರಾಗಲಿಲ್ಲ.
ಸಮಯ ಮೀರುತ್ತಿದ್ದಂತೆಯೇ ಸಭೆಯಲ್ಲಿದ್ದವರ ಹಾಜರಾತಿ ಪಡೆಯಲಾಯಿತು. ಸದಸ್ಯರು ಅವಿಶ್ವಾಸದ ನೋಟಿಸ್‍ನ್ನು ಅಧ್ಯಕ್ಷರ ಗಮನಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಂದರು. ಇದರಿಂದ ವಿಚಲಿತರಾದ ಅಧ್ಯಕ್ಷರು ಸಭೆ ಮುಂದೂಡಲಾಗಿದೆ ಎಂದು ಘೋಷಿಸಿ ಹೊರ ನಡೆದರು.
ಅಧಿಕಾರ ಯಾಕೆ ಬಿಟ್ಟುಕೊಡಲಿ ?
ಈ ಸಂರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸೌಭಾಗ್ಯ ಬಸವರಾಜನ್, ಸರ್ಕಾರವೇ ಶಾಸನ ಮಾಡಿದ್ದು ಐದು ವರ್ಷ ಜಿಲ್ಲಾಪಂಚಾಯತ್ ಅಧ್ಯಕ್ಷರಿಗೆ ಅಧಿಕಾರ ನೀಡಿದೆ. ನಾನೇಕೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಡಲಿ ಎಂದು ಪ್ರಶ್ನಿಸಿದರು
ಸಭೆ ಮುಂದೂಡಲಾಗಿದೆ. ಮತ್ತೆ ಸದಸ್ಯರೊಂದಿಗೆ ಮಾತನಾಡಿ ಸಾಮಾನ್ಯ ಸಭೆಗೆ ಬರುವಂತೆ ಮನವಿ ಮಾಡುತ್ತೇನೆ. ಸದಸ್ಯರು ಬರುತ್ತಾರೆಂಬ ನಂಬಿಕೆ ಇದೆ. ಇನ್ನು ಅವಿಶ್ವಾಸ ಗೊತ್ತುವಳಿ ಸಭೆ ಕರೆಯಲು 15 ದಿನಗಳ ಕಾಲವಕಾಶ ಇದೆ. ಮುಂದೆ ಏನಾಗುತ್ತದೆ ನೋಡೋಣ ಎಂದರು.
ನಾನು ಸಾಕಷ್ಟು ಬಾರಿ ಮೀಟಿಂಗ್ ಕರೆದಿದ್ದೆನೆ. ಅದರೆ ಸಭೆ ಕರೆದಾಗಲೆಲ್ಲ ಅಸಹಕಾರ ತೋರಿ ಮೀಟಿಂಗ್ ನಡೆಯದಂತೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಬರವಿದೆ. ಇದರ ಬಗ್ಗೆ ಯಾರಿಗೂ ಚಿಂತೆಯೇ ಇಲ್ಲ. ನಾನು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಕೇವಲ ಅಧ್ಯಕ್ಷ ಸ್ಥಾನಕ್ಕಾಗಿ ಇವರು ಹೀಗೆ ಕಿತ್ತಾಟ ಹಾಗೂ ಅಸಹಕಾರ ತೋರಿಸುತ್ತಿದ್ದಾರೆ ಎಂದರು
ನಾನು ಮೀಸಲಾತಿಯಂತೆಯೇ ಅಧ್ಯಕ್ಷಳಾಗಿದ್ದೆನೆ. ಸರ್ಕಾರ ಹೊಸದೊಂದು ಶಾಸನ ಮಾಡಿದ್ದು 5 ವರ್ಷಗಳ ಸಂಪೂರ್ಣ ಅಧಿಕಾರವನ್ನು ನೀಡಿದೆ. ಇದರ ಮೇಲೂ ಸ್ವತಃ ಕಾಂಗ್ರೆಸ್ ಸದಸ್ಯರು ಹಾಗೂ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಸೇರಿ ಅವಿಶ್ವಾಸ ನೋಟೀಸ್ ನೀಡಿದ್ದಾರೆ. ನಾನು ಎಲ್ಲರ ಜೊತೆ ಮತ್ತೆ ಚರ್ಚೆ ಮಾಡುತ್ತೆನೆ. ಮುಂದಿನ ದಿನಗಳಲ್ಲಿ ಸಭೆಯನ್ನು ಕರೆಯುತ್ತೆನೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ