ಬ್ಯಾಡಗಿ:
ಮಹಿಳೆಯರನ್ನು ರಕ್ಷಿಸುವ ಕೆಲಸ ಪ್ರಜ್ಞಾವಂತ ಸಮಾಜದಿಂದಾಗಬೇಕಾಗಿದೆ ಆದರೆ ಅವರ ಮೇಲೆಯೇ ಅತೀ ಹೆಚ್ಚು ಆಸಿಡ್ ದಾಳಿಗಳು ದೇಶದಲ್ಲಿ ನಡೆದಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೆಲಸ ಇದಾಗಿದೆ ಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಇಬ್ರಾಹಿಂದ ಮುಜಾವರ್ ಖೇದ ವ್ಯಕ್ತಪಡಿಸಿದರು.
ಪಟ್ಟಣದ ಬಿಇಎಸ್ ಪ್ರೌಢಶಾಲೆಯಲ್ಲಿ ಕಾನೂನು ಸೇವಾ ಸಮಿತಿ ತಾಲೂಕು ಘಟಕ ನ್ಯಾಯವಾದಿಗಳ ಸಂಘ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರದಯಲ್ಲಿ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಸಸಿಗಳಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಅತೀ ಕಠಿಣವಾದ ಕಾನೂನುಗಳನ್ನು ಜಾರಿಗೊಳಿಸಿದೆಯಾದರೂ ಅವರ ಮೇಲೆಯೇ ಹೆಚ್ಚು ದೌರ್ಜನ್ಯ ಪ್ರಕರಣಗಳು ಜರುಗುತ್ತಿರುವುದು ದುರದೃಷ್ಟಕರ ವಿಚಾರ ಎಂದರು.
ಆಸಿಡ್ ದಾಳಿಯಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರು ಯಾವುದೇ ಕಾರಣಕ್ಕೂ ಭಯದಿಂದ ಹಿಂದೆ ಸರಿಯಬಾರದು, ತಮ್ಮ ಜೀವನವನ್ನೇ ಕತ್ತಲೆಯಾಗಿಸಿದ ಆರೋಪಿಗಳ ಬಗ್ಗೆ ಭಯಬೇಡ, ಉಚಿತವಾಗಿ ಸಿಗುವಂತಹ ಕಾನೂನಿನ ನೆರವನ್ನು ಪಡೆದುಕೊಳ್ಳುವ ಮೂಲಕ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯನ್ನು ನೀಡುವವರೆಗೂ ತಮ್ಮ ಹೋರಾಟವನ್ನು ಮುಂದುವರೆಸಲು ಮನಸ್ಸು ಮಾಡುವಂತೆ ಸಲಹೆ ನೀಡಿದರು.
ಪದೇ ಪದೇ ನ್ಯಾಯಾಲಯಕ್ಕೆ ಹೋಗುವುದಕ್ಕೂ ಹೆದರುವ ಅಥವಾ ಬೇಸರ ವ್ಯಕತಪಡಿಸುವ ಮಹಿಳೆಯರು ಮೊಕದ್ದಮೆಗಳನ್ನು ತಪ್ಪಿತಸ್ಥರ ವಿರುದ್ಧ ದಾಖಲಿಸಲು ಹಿಂದೇಟು ಹಾಕುವಂತಹ ನಿರ್ಧಾರಗಳನ್ನು ಸಹಜವಾಗಿ ಕೈಗೊಳ್ಳುತ್ತಾರೆ ಆದರೆ ನ್ಯಾಯಾಲಯದ ಕಾರ್ಯ ಕಲಾಪಗಳಲ್ಲಿ ಬದಲಾವಣೆಗಳಾಗಿದ್ದು, ಸಂತ್ರಸ್ಥ ಮಹಿಳೆಯರು ಒಮ್ಮೆ ನ್ಯಾಯಾಲಯಕ್ಕೆ ಖುದ್ದಾಗಿ ಬಂದು ತಮ್ಮ ಹೇಳಿಕೆ ನೀಡಿದರೆ ಸಾಕಾಗುತ್ತದೆ, ಅದನ್ನೇ ಸಾಕ್ಷಿ ಆಧಾರಗಳನ್ನಿಟ್ಟುಕೊಂಡು ಪ್ರಕರಣದ ವಿಚಾರಣೆ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪಿಎಸ್‍ಐ ಮಹಾಂತೇಶ್, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಎಚ್.ಎನ್.ರಾವಳ, ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಎಚ್.ಎಸ್.ಜಾಧವ, ಸದಸ್ಯರಾದ ಎಂ.ಪಿ.ಹಂಜಗಿ, ಡಿ.ಎಚ್.ಹುಣಶೀಮರದ, ವಿಜಯ ಯರಗಲ್ಲ, ಎ.ಎಸ್.ಐ.ಮಣಕೂರ, ಮುಖ್ಯಶಿಕ್ಷಕ ಎಸ್.ಎಂ.ಉಮಾಪತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ