ಹರಪನಹಳ್ಳಿ
ಡಿ.30ರಂದು ನಡೆಯಬೇಕಿದ್ದ ಬಾಲ್ಯವಿವಾಹ ತಡೆದು ಪೋಷಕರಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡಿರುವ ಘಟನೆ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.ನೇಸರ ಮಕ್ಕಳ ಸಹಾಯವಾಣಿ ಸಂಯೋಜಕ ಬಿ.ಮಲ್ಲಿಕಾರ್ಜುನ, ಸಿಡಿಪಿಒ ಇಲಾಖೆ ಸಂಯೋಜಕಿ ನಾಗವೇಣಿ, ರತ್ಮಮ್ಮ, ಎಎಸ್ಐ ರುದ್ರಪ್ಪ ನೇತೃತ್ವದಲ್ಲಿ ಬಾಲಕಿ ಮನೆಗೆ ಬೇಟಿ ನೀಡಿದ ಅಧಿಕಾರಿಗಳು ಪೋಷಕರಾದ ರಾಜಪ್ಪ ಮತ್ತು ರೇಣುಕಮ್ಮ ದಂಪತಿಗೆ ಕಾನೂನಿನ ಅರಿವು ಮೂಡಿಸಿ, ಬಾಲಕಿ ಮದುವೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಥಮ ಪಿಯುಸಿ ಓದುತ್ತಿದ್ದ 17 ವರ್ಷ ವಯಸ್ಸಿನ ಬಾಲಕಿಯನ್ನು ಹಗರಿಬೊಮ್ಮನಹಳ್ಳಿ ತಾಲೂಕು ಉಪ್ಪಾರಗಟ್ಟಿ ಗ್ರಾಮದ ಹುಲುಗಪ್ಪ ಎಂಬ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಭಾನುವಾರ ಬೆಳಗ್ಗೆ ವಿವಾಹ ನಡೆಸಲು ಹಿರಿಯರು ನಿರ್ಧರಿ, ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು.
ಬಾಲಕಿ ತಂದೆ-ತಾಯಿಗೆ ಮಾಹಿತಿ ನೀಡಿದ ಬಳಿಕ, ಹುಡುಗನ ಮನೆಯವರಿಗೂ ಫೋನ್ ಮೂಲಕ ಮಾಹಿತಿ ಕೊಟ್ಟು ಕಾನೂನಿನ ಜಾಗೃತಿ ಮೂಡಿಸಿದ್ದಾರೆ. ಬಳಿಕ ಪೋಷಕರಿಂದ 18 ವರ್ಷ ತುಂಬಿದ ಬಳಿಕವೇ ವಿವಾಹ ಮಾಡುವುದಾಗಿ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು, ವಿವಾಹವನ್ನು ರದ್ದುಗೊಳಿಸಿದರು.ಮದುವೆ ಸಂಭ್ರಮ ಸವಿಯಲು ಆಗಮಿಸಿದ್ದ ಬಾಲಕಿ ಕಡೆಯ ಸಂಬಂಧಿಕರು, ಹುಡುಗನ ಸಂಬಂಧಿಗಳು ನಿರಾಸೆಯಿಂದ ಹಿಂತಿರುಗಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ