ದಾವಣಗೆರೆ
ಪಂಚಮಸಾಲಿ ಸಮಾಜವನ್ನು ರಾಜಕೀಯವಾಗಿ ಕಡೆಗಣಿಸಿರುವುದರ ವಿರುದ್ಧ, ನಗರದಲ್ಲಿ ಸಭೆ ಸೇರಿದ ಪಂಚಮಸಾಲಿ ಸಮಾಜದ ಸಮಾನ ಮನಸ್ಕರು ತಮ್ಮ ರಾಜಕೀಯ ನಡೆಯನ್ನು ಇನ್ನೂ ಎರಡು ದಿನಗಳಲ್ಲಿ ಅಂತಿಮಗೊಳಿಸಲು ನಿರ್ಧರಿಸಿದರು.
ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಗುರುವಾರ ಪಂಚಮಸಾಲಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಆಶ್ರಯದಲ್ಲಿ ಸಭೆ ಸೇರಿ, ತಮ್ಮನ್ನು ರಾಜಕೀಯವಾಗಿ ಕಡೆಗಣಿಸಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಇನ್ನೂ ಎರಡೇ ದಿನಗಳಲ್ಲಿ ತಮ್ಮ ರಾಜಕೀಯ ನಡೆಯ ಬಗ್ಗೆ ಪ್ರಕಟಿಸಲು ಒಕ್ಕೊರಲಿನಿಂದ ತೀರ್ಮಾನಿಸಿದರು.
ಸಭೆಯಲ್ಲಿ ಮಾತನಾಡಿದ ಬಿಜೆಪಿ ಯುವ ಮುಖಂಡ ಎಚ್.ಎಸ್.ನಾಗರಾಜ, ನಮಗೆ ಗೌರವ ಇಲ್ಲದ ಕಡೆಯಲ್ಲಿರುವುದು ಸಭ್ಯತೆಯಲ್ಲ. ಬಿಜೆಪಿ ಮುಖಂಡರ ವರ್ತನೆ ನಿಜಕ್ಕೂ ತಮಗೆ ಬೇಸರವನ್ನುಂಟು ಮಾಡಿದೆ. ಆ ವರ್ಗ, ಈ ವರ್ಗ ಅಂತಾ ಅಲ್ಲ, ಎಲ್ಲಾ ವರ್ಗಗಳ ಮೇಲೂ ದೌರ್ಜನ್ಯ ಎಸಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ತಂದೆಗೆ ಮಾತು ಕೊಟ್ಟಿದ್ದ ಅದೇ ಬಿಜೆಪಿ ನಾಯಕರು ಮಾತು ತಪ್ಪಿದರು. ನಮ್ಮ ತಂದೆ ಮಾತಿಗೂ ಬೆಲೆ ಕೊಡಲಿಲ್ಲ. ಏಕೆ ನಮಗೆ ಬೆಲೆ ಇಲ್ಲವೇ? ನಮಗೆ ಜನ ಮನ್ನಣೆ ಕೊಡುವುದಿಲ್ಲವೇ? ಆ ಮುಖಂಡರಂತೆ ಮಾತು ಬದಲಿಸುವ ಜಾಯಮಾನ ನಮ್ಮದಲ್ಲ. ನಾವು ಅಧಿಕಾರಕ್ಕಾಗಿ ಎಂದಿಗೂ ರಾಜಕಾರಣ ಮಾಡಿಲ್ಲ. ಜನರ ಮಧ್ಯೆ ಇದ್ದು, ಸಮಾಜದ ಹಿತಕ್ಕಾಗಿ ದುಡಿದಿದ್ದೇವೆ. ಸಮಾಜ ಬಾಂಧವರು ಈಗಲೂ ಸಂಘಟಿತವಾಗದಿದ್ದರೆ, ನಮ್ಮ ಸಮಾಜ ಅಪಾಯಕ್ಕೆ ಸಿಲುಕಲಿದೆ ಎಂದು ಅಳಲು ತೋಡಿಕೊಂಡರು.
ಕಳೆದೊಂದು ದಶಕದಿಂದಲೂ ಸಾಕಷ್ಟು ನೋವನ್ನುಂಡಿದ್ದೇನೆ. ಪಂಚಮಸಾಲಿ ಮತ್ತಿತರೆ ಸಮಾಜದವರು ಎಷ್ಟು ಮುಗ್ಧರೋ ಅಷ್ಟೇ ಉಗ್ರತೆಯುಳ್ಳವರು ಎಂಬುದನ್ನು ಬಿಜೆಪಿ ಜಿಲ್ಲಾ ಮುಖಂಡರು ಅರಿಯಲಿ. ಒಂದು ವೇಳೆ ಅಂತಹ ಉಗ್ರತೆಯನ್ನು ಪಂಚಮಸಾಲಿ ಮತ್ತಿತರೆ ಸಮಾಜಗಳು ತೋರಿಸಿದರೆ ಎಂತಹ ಬದಲಾವಣೆ ಮಾಡಬಲ್ಲರು ಎಂಬುದನ್ನು ಬೇಕಿದ್ದರೆ ಮಾಡಿ ತೋರಿಸಬಲ್ಲೆವು ಎಂದು ಸೂಚ್ಯವಾಗಿ ಎಚ್ಚರಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ವಿ. ಪಟೇಲ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಮತ್ತು ಮಾಜಿ ಸಚಿವ ಎಚ್.ಶಿವಪ್ಪ ಕುಟುಂಬದ ಮಧ್ಯೆ ಯಾವಾಗಲೂ ಉತ್ತಮ ಸಂಬಂಧವಿದ್ದು, ಇಂತಹ ಕುಟುಂಬಗಳ ಅಭಿಮಾನಿಗಳು ಕರೆದ ಸಮಾನ ಮನಸ್ಕರ ಸಭೆಯು ಏ.23ರ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು.
ಚುನಾವಣೆಯಲ್ಲಿ ಹೆಚ್ಚು ಹಣ ಖರ್ಚು ಮಾಡಿದವರನ್ನು ಸೋಲಿಸಬೇಕು. ಕಾಂಗ್ರೆಸ್ ನನಗೆ ಟಿಕೆಟ್ ನೀಡುವ ಭರವಸೆ ನೀಡಿತ್ತು. ನಂತರ ಕೈಬಿಟ್ಟಿತು. ಇದಕ್ಕೆಲ್ಲಾ ನನಗೆ ಬೇಸರವಿಲ್ಲ. ಆದರೆ, ಜಿಲ್ಲೆಯಲ್ಲಿ ಜಾತಿ ಕಾರಣಕ್ಕಾಗಿ, ಬ್ಯಾಂಕ್ ಬ್ಯಾಲೆನ್ಸ್ ಇಲ್ಲವೆಂಬ ಉದ್ದೇಶಕ್ಕಾಗಿ ನನಗೆ ಸಿಗಬೇಕಾಗಿದ್ದ ಟಿಕೆಟ್ ತಪ್ಪಿಸಿದ್ದು ನೋವು ತಂದಿದೆ ಎಂದರು.
ಕಾಂಗ್ರೆಸ್ ಮುಖಂಡ ಎಂ.ಟಿ.ಸುಭಾಶ್ಚಂದ್ರ ಮಾತನಾಡಿ, ನಾವು ಜನ ಹಿತಕ್ಕಾಗಿ ರಾಜಕಾರಣ ಮಾಡುವವರೇ ಹೊರತು, ದೊಡ್ಡ ಆಸ್ತಿ ಮಾಡಬೇಕೆಂಬ ದುರಾಸೆಯಿಂದಲ್ಲ್ಲ. ಜಾತಿ, ಧರ್ಮ ಮೀರಿ ಎಲ್ಲರೊಂದಿಗೆ ನಾವಿದ್ದೇವೆ. ಒಂದು ಜಾತಿ, ಜನಾಂಗವನ್ನು ಮೆಚ್ಚಿಸಿ ಮಾತನಾಡಲು ಸಾಧ್ಯವಿಲ್ಲ. ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವುದೇ ಸಾಮಾಜಿಕ ನ್ಯಾಯವಾಗಿದ್ದು, ಈ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಬೇಕು ಎಂಬುದನ್ನು ನೀವೇ ನಿರ್ಧರಿಸಿ ಎಂದರು.
ಪಂಚಮಸಾಲಿ ಸಮಾಜ ದೊಡ್ಡ ಸಮಾಜವಾಗಿದ್ದರೂ 8 ಕ್ಷೇತ್ರದ ಪೈಕಿ ಒಂದರಲ್ಲೂ ನಮ್ಮ ಶಾಸಕರು ಇಲ್ಲವೆಂಬುದೇ ದುರಂತ. ಕನಿಷ್ಟ ವಿಧಾನ ಪರಿಷತ್ಗೆ, ರಾಜ್ಯಸಭೆಗಾದರೂ ನೇಮಕ ಮಾಡುತ್ತೇವೆಂಬ ವ್ಯವದಾನವೂ ರಾಜಕೀಯ ನಾಯಕರಿಗಿಲ್ಲ. ಈಗ್ಗೆ 10 ವರ್ಷದ ಹಿಂದೆ ಕಾಂಗ್ರೆಸ್ಸಿನಲ್ಲಿ ಲಿಂಗಾಯತರಿಗೆ ರಾಜ್ಯಸಭೆಗೆ ಆಯ್ಕೆ ಮಾಡಲು ಹಿರಿಯ ಮುಖಂಡರೊಬ್ಬರು ಸ್ಥಳೀಯ ನಾಯಕರಿಗೆ ಹೇಳಿದರು. ತಮ್ಮ ಮಗನಿಗೆ ರಾಜ್ಯಸಭೆಗೆ ಆಯ್ಕೆ ಮಾಡುವಂತೆ ಸ್ಥಳೀಯ ನಾಯಕ ಹೇಳಿದ್ದರಿಂದ ಪಂಚಮಸಾಲಿಗೆ ಸಿಗಬೇಕಿದ್ದ ಅವಕಾಶ ಮತ್ತೆ ತಪ್ಪಿತು ಕೈ ತಪ್ಪಿಸತು ಎಂದು ಆರೋಪಿಸಿದರು.
ಜಿಪಂ ಸದಸ್ಯ ತೇಜಸ್ವಿ ವಿ.ಪಟೇಲ, ನಗರಸಭೆ ಮಾಜಿ ಸದಸ್ಯ ಬಿ.ವೀರಣ್ಣ, ಸಾದಿಕ್ ಪೈಲ್ವಾನ್, ಡಾ.ಎಚ್.ವಿಶ್ವನಾಥ, ರೈತ ಸಂಘದ ಬಲ್ಲೂರು ರವಿಕುಮಾರ, ಆರ್.ಪ್ರತಾಪ್, ತೆಲಗಿ ಈಶ್ವರಪ್ಪ, ಕಿತ್ತೂರು ಪುಟ್ಟಣ್ಣ, ಕೋಳಿ ಇಬ್ರಾಹಿಂ, ಮೋತಿ ರಾಜೇಂದ್ರ ಇತರರು ಇದ್ದರು.