ಮೆಲ್ಬರ್ನ್ :
ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಭಾನುವಾರ (ಡಿಸೆಂಬರ್ 30) ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿ ಬಳಗ 137 ರನ್ ಅಮೋಘ ಗೆಲುವನ್ನಾಚರಿಸಿದೆ. ಈ ಗೆಲುವಿನೊಂದಿಗೆ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಮುನ್ನಡೆಯಲ್ಲಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಆರಂಭಿಕ ಇನ್ನಿಂಗ್ಸ್ನಲ್ಲಿ ಚೇತೇಶ್ವರ ಪೂಜಾರ, ನಾಯಕ ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ ಉತ್ತಮ ರನ್ ಬಲ ತುಂಬಿದರು. ಪೂಜಾರ 106 (17ನೇ ಟೆಸ್ಟ್ ಶತಕ), ಮಯಾಂಕ್ 76, ಕೊಹ್ಲಿ 82, ರೋಹಿತ್ 63, ಅಜಿಂಕ್ಯ ರಹಾನೆ 34 ರನ್ ಸೇರಿಸಿದರು.
ಆರಂಭಿಕ ಆಟಗಾರ ಹನುಮ ವಿಹಾರಿ ವಿಕೆಟ್ ಬೇಗನೆ ಕಳೆದುಕೊಂಡರೂ ಭಾರತ ಉಳಿದ ಆಟಗಾರರ ರನ್ ಕೊಡುಗೆಯಿಂದ 169.4 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 443 ರನ್ ಪೇರಿಸಿ ಡಿಕ್ಲೇರ್ ಘೋಷಿಸುವುದರೊಂದಿಗೆ ಇನ್ನಿಂಗ್ಸ್ ಮುಗಿಸಿತು. ಆಸ್ಟ್ರೇಲಿಯಾಕ್ಕೆ ಪ್ರಥಮ ಇನ್ನಿಂಗ್ಸ್ನಲ್ಲಿ ಬ್ಯಾಟ್ಸ್ಮನ್ಗಳ ಬೆಂಬಲ ಸಿಗಲಿಲ್ಲ. ಮಾರ್ಕಸ್ ಹ್ಯಾರಿಸ್ 22, ಉಸ್ಮಾನ್ ಖವಾಜಾ 21, ಟ್ರಾವಿಸ್ ಹೆಡ್ 20, ಟಿಮ್ ಪೈನೆ 22 ರನ್ ಗಳಿಸಿದ್ದೇ ಹೆಚ್ಚೆನಿಸಿತು. 65.5 ಓವರ್ನಲ್ಲಿ ಆಸೀಸ್ ಎಲ್ಲಾ ವಿಕೆಟ್ ಕಳೆದು 151 ರನ್ ಪೇರಿಸಿ ಆಟ ಮುಗಿಸಿತು.
ದ್ವಿತೀಯ ಇನ್ನಿಂಗ್ಸ್ನಲ್ಲಿ ಭಾರತದ ಆಟಗಾರರು ತೀರಾ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದರು. ಮಯಾಂಕ್ 42, ಪೂಜಾರ, ಕೊಹ್ಲಿ 0, ರಿಷಬ್ ಪಂತ್ 33 ರನ್ ಸೇರಿಸಿದ್ದರಿಂದ 37.3 ಓವರ್ನಲ್ಲಿ 8 ವಿಕೆಟ್ ಕಳೆದು 106 ರನ್ ಕಲೆ ಹಾಕುವುದರೊಂದಿಗೆ ಡಿಕ್ಲೇರ್ ಘೋಷಿಸಿತು. ಆಸೀಸ್ ದ್ವಿತೀಯ ಇನ್ನಿಂಗ್ಸ್ ವೇಳೆ ಗೆಲ್ಲಲು 399 ರನ್ ಗಳ ಅಗತ್ಯವಿತ್ತು. ಆದರೆ ತಂಡದ ಪರ ಪೈನೆ 63, ಖವಾಜಾ 33, ಶಾನ್ ಮಾರ್ಷ್ 44, ಟ್ರಾವಿಸ್ ಹೆಡ್ 34 ರನ್ ಅಷ್ಟೇ ನೀಡಲು ಶಕ್ತರಾದರು. ಆಸ್ಟ್ರೇಲಿಯಾ 89.3 ಓವರ್ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 261 ರನ್ ಗಳಿಸಿತು.
ಭಾರತದ ಇನ್ನಿಂಗ್ಸ್ ವೇಳೆ ಪ್ಯಾಟ್ ಕಮಿನ್ಸ್ 3+6, ಜೋಶ್ ಹ್ಯಾಝೆಲ್ವುಡ್ 1+3, ಮಿಚೆಲ್ ಸ್ಟಾರ್ಕ್ 2 ವಿಕೆಟ್ ಕೆಡವಿ ಮಿಂಚಿದರೆ, ಆಸೀಸ್ ಇನ್ನಿಂಗ್ಸ್ ವೇಳೆ ಜಸ್ಪ್ರೀತ್ ಬೂಮ್ರಾ 6+3, ರವೀಂದ್ರ ಜಡೇಜಾ 2+3, ಇಶಾಂತ್ ಶರ್ಮಾ 2+2, ಮೊಹಮ್ಮದ್ ಶಮಿ 1+2 ವಿಕೆಟ್ ಉರುಳಿಸಿ ಮಿಂಚಿದರು. ಜಸ್ಪ್ರೀತ್ ಬೂಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ