ಬೆಂಗಳೂರು:
ಸೋಮವಾರ ಸುರಿದ ಮಳೆಯಿಂದಾಗಿ ಕಾವೇರಿ ಒಳಹರಿವು ಹೆಚ್ಚಾಗಿದೆ ಎಂದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ವಿರುದ್ಧ ವಿರೋಧ ಪಕ್ಷದ ನಾಯಕರು ಹಾಗೂ ತಜ್ಞರು ತೀವ್ರವಾಗಿ ಕಿಡಿಕಾರಿದ್ದಾರೆ.
ಡಿಕೆ.ಶಿವಕುಮಾರ್ ಅವರು ಕಾವೇರಿ ನದಿಯ ಒಳಹರಿವಿನ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಬಾರದಿತ್ತು. ಇದು ತಮಿಳುನಾಡು ಸರ್ಕಾರಕ್ಕೆ ಮತ್ತಷ್ಟು ಶಕ್ತಿ ನೀಡಲಿದೆ. ಸಚಿವರ ಹೇಳಿಕೆಯನ್ನೇ ಇಟ್ಟುಕೊಂಡು ಪ್ರತಿದಿನ 3,000 ಕ್ಯೂಸೆಕ್ ಬಿಡುಗಡೆ ಮಾಡಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಗೌರವಿಸುವಂತೆ ಒತ್ತಡ ಹೇರುತ್ತಾರೆಂದು ಹೇಳಿದ್ದಾರೆ.
ಜೆಡಿಎಸ್‌ನ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಮಾತನಾಡಿ, ಎಲ್ಲಿದೆ 8000 ಕ್ಯೂಸೆಕ್? ಕೆಆರ್’ಎಸ್ ಜಲಾಶಯದಲ್ಲಿ ಸೋಮವಾರದ ಒಳಹರಿವು 3,500 ಇತ್ತು. ಮಂಗಳವಾರ 4,200 ಆಗಿದೆ. ಬೀದಿಯಲ್ಲಿ ನಿಂತು ಕಾವೇರಿ ನದಿ ನೀರಿನ ಬಗ್ಗೆ ಅವರು ಮಾತನಾಡುವುದು, ಘೋಷಣೆ ಮಾಡಲು ಸಾಧ್ಯವಿಲ್ಲ.
ಈ ರೀತಿ ಹೇಳಿಕೆ ನೀಡಿ, ನಾಳೆ ಪ್ರಾಧಿಕಾರದ ಮುಂದೆ ಏನನ್ನು ಹೇಳುತ್ತಾರೆ? ಮಾಧ್ಯಮಗಳ ಮುಂದೆ ಘೋಷಣೆ ಮಾಡುವ ಅಗತ್ಯವೇನಿತ್ತು? ಇಂತಹ ಹೇಳಿಕೆಗಳ ಮೂಲಕ ಜನರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ? ಏನೇ ಆದರೂ ಕಾವೇರಿ ನದಿಯ ಒಳಹರಿವಿನ ಬಗ್ಗೆ ವಿವರಗಳನ್ನು ಪಡೆಯಲು ಪ್ರಾಧಿಕಾರ ತನ್ನದೇ ಆದ ನೆಟ್ವರ್ಕ್ ಅನ್ನು ಹೊಂದಿದೆ ಎಂದು ಹೇಳಿದರು.
ಈ ನಡುವೆ ಡಿಕೆ.ಶಿವಕುಮಾರ್ ಅವರ ಹೇಳಿಕೆ ಜಲ ತಜ್ಞರು ಕೂಡ ಹಿಡಿಕಾರಿದ್ದಾರೆ. “ಇಂತಹ ಸಮಯದಲ್ಲಿ ಘೋಷಣೆ ಮಾಡುವ ಅಗತ್ಯ ಏನಿತ್ತು? ನಾವು ಈ ರೀತಿಯ ಹೇಳಿಕೆಗಳನ್ನು ನೀಡಿದರೆ, ತಮಿಳುನಾಡು ನೀರು ಕೇಳುತ್ತದೆ ಮತ್ತು ನೀರು ಬಿಡುಗಡೆ ಮಾಡುವಂತೆ ಕೇಂದ್ರದ ಅಧಿಕಾರಿಗಳು ಸೂಚನೆ ನೀಡುತ್ತಾರೆಂದು ಹೇಳಿದ್ದಾರೆ.
ಮಾಜಿ ಜಲಸಂಪನ್ಮೂಲ ಸಚಿವ ಹಾಗೂ ಬಿಜೆಪಿ ನಾಯಕ ಗೋವಿಂದ್ ಕಾರಜೋಳ ಮಾತನಾಡಿ, ನಮಗೆ ನೀರು ಕೊಡುವ ನೈರುತ್ಯ ಮುಂಗಾರು ಮುಗಿದಿದೆ ಎಂಬುದನ್ನು ನೆನಪಿಡಿ. ಈಗ ಈಶಾನ್ಯ ಮಾನ್ಸೂನ್ ಮಾತ್ರ ತಮಿಳುನಾಡಿಗೆ ನೀರು ದೊರೆಯುವಂತೆ ಮಾಡುತ್ತದೆ. ಕರ್ನಾಟಕಕ್ಕೆ ಅಲ್ಲ ಎಂದು ಹೇಳಿದ್ದಾರೆ.
ನಾವು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು, ಪ್ರಸ್ತುತ ಲಭ್ಯವಿರುವ ನೀರು ನಮಗೆ ಕುಡಿಯುವ ನೀರಿನ ಅಗತ್ಯತೆಗಳಿಗೆ ಸಾಕಾಗುವುದಿಲ್ಲ. ಮುಂದಿನ ಮಳೆಗಾಲದವರೆಗೆ ನದಿ ಜಲಾನಯನ ನಗರಗಳು ಮತ್ತು ನಗರ ಪ್ರದೇಶಗಳ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಬೇಕು ಎಂದು ಕಾವೇರಿ ಅಧಿಕಾರಿಗಳಿಗೆ ತಿಳಿಸಬೇಕು. ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ಮುಗಿದ ನಂತರ ಒಂದೆರಡು ದಿನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಇದೆ… ನಮ್ಮ ರೈತರ ಮೊದಲ ಬೆಳೆಗೂ ನೀರು ಕೊಟ್ಟಿಲ್ಲ ಎಂದು ಪ್ರಾಧಿಕಾರಕ್ಕೆ ಹೇಳಬೇಕು ಎಂದು ತಿಳಿಸಿದರು.