ಸಿಆರ್‍ಸಿ ಕೇಂದ್ರಕ್ಕೆ 30 ಕೋಟಿ ರೂ. ಕೊಡಿಸುವೆ

ದಾವಣಗೆರೆ

        ವಿಕಲಚೇತನರ ಪುನಶ್ಚೇತನಕ್ಕಾಗಿ ನಗರಕ್ಕೆ ಮಂಜೂರಾಗಿರುವ ಕಾಂಪೋಸಿಟ್ ರೀಜನಲ್ ಸೆಂಟರ್ ಸ್ಥಾಪನೆಗೆ ಸ್ಥಳ ಅಂತಿಮಗೊಳಿಸಿದರೆ, ಕೇಂದ್ರ ಸರ್ಕಾರದಿಂದ 30 ಕೋಟಿ ರೂ. ಅನುದಾನ ಕೊಡಿಸುವುದಾಗಿ ಸಂಸದ ಜಿ.ಎಂ.ಸಿದ್ದೇಶ್ವರ್ ಭರವಸೆ ನೀಡಿದರು.

         ನಗರದ ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯಲ್ಲಿ ಭಾನುವಾರ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಕಲಚೇತನರಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ಸೌಲಭ್ಯ ಕಲ್ಪಿಸುವ ಮೂಲಕ ಅವರ ಪುನಶ್ಚೇತನ ಮಾಡಲು ಕೇಂದ್ರ ಸರ್ಕಾರವು ಈಗಾಗಲೇ ದಾವಣಗೆರೆಗೆ ಸಿಆರ್‍ಸಿ (ಸಂಯುಕ್ತ ಪ್ರಾದೇಶಿಕ ಕೇಂದ್ರ) ಮಂಜೂರು ಮಾಡಿದೆ. ಈ ಕೇಂದ್ರ ಸ್ಥಾಪನೆಗಾಗಿ ಸ್ಥಳ ಅಂತಿಮ ಗೊಳಿಸಿದ ಎರಡೇ ತಿಂಗಳಲ್ಲಿ ಕೇಂದ್ರ ಸರ್ಕಾರದಿಂದ 30 ಕೋಟಿ ರೂ. ಅನುದಾನ ಕೊಡಿಸಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರವು ಗೋವಾ ಹಾಗೂ ಕರ್ನಾಟಕ ರಾಜ್ಯಗಳ ವಿಕಲಚೇತನರಿಗಾಗಿ ದಾವಣಗೆರೆಯಲ್ಲಿ ಸಿಆರ್‍ಸಿ ಕೇಂದ್ರ ತೆರೆಯಲು ಅನುಮತಿ ನೀಡಿದೆ.

           ಕೇಂದ್ರ ನಿರ್ಮಾಣಕ್ಕೆ ಸುಮಾರು ಹತ್ತು ಎಕರೆ ಜಮೀನು ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತವು ನಗರದ ಹೊರ ಭಾಗದಲ್ಲಿ ಮೂರ್ನಾಲ್ಕು ಕಡೆಗಳಲ್ಲಿ ಜಾಗ ತೋರಿಸಿದರೂ ಕೇಂದ್ರದ ಅಧಿಕಾರಿಗಳು ನಗರದಲ್ಲಿಯೇ ಸ್ಥಳ ಬೇಕೆಂದು ಹೇಳುತ್ತಿದ್ದಾರೆ. ಆದರೆ, ನಗರದಲ್ಲಿ 10 ಕೋಟಿ ರೂ. ನೀಡಿದರೂ 1 ಎಕರೆ ಸ್ಥಳ ಸಿಗುವುದಿಲ್ಲ. ಆದ್ದರಿಂದ ನಗರದ ಹೊರಗಿನ ಪ್ರದೇಶದಲ್ಲೇ ಈ ಕೇಂದ್ರ ನಿರ್ಮಾಣಕ್ಕೆ ಅಂತಿಮಗೊಳಿಸಿ, ಅಲ್ಲಿಗೆ ವಿಕಲಚೇನತರು ಓಡಾಡಲು ಬಸ್ ಸೌಲಭ್ಯ ಕಲ್ಪಿಸುತ್ತೇವೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

        ದಾವಣಗೆರೆಯಲ್ಲಿಯೇ ಸಿಆರ್‍ಸಿ ಕೇಂದ್ರ ಆರಂಭ ಆಗುವುದರಿಂದ ವಿಕಲಚೇತನರ ಸಂಪೂರ್ಣ ಅಭಿವೃದ್ಧಿಗೆ ಬೇಕಾದ ಮೂಲಸೌಕರ್ಯಗಳನ್ನು ಕಲ್ಪಿಸಲು ಅನುಕೂಲವಾಗಲಿದೆ ಎಂದರು.

        ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಶಿಧರ್ ಮಾತನಾಡಿ, ವಿಶೇಷಚೇತನರಿಗೆ ಸರ್ಕಾರವು ಪೋಷಣಾ ಭತ್ಯೆ, ಬಸ್‍ಪಾಸ್, ವಿದ್ಯಾರ್ಥಿ ವೇತನ, ಉದ್ಯೋಗದಲ್ಲಿ ಮೀಸಲಾತಿ, ಸ್ವಉದ್ಯೋಗಕ್ಕೆ ರಿಯಾಯಿತಿ, ಸ್ವಯಂ ಉದ್ಯೋಗಕ್ಕೆ ಎಲ್ಲಾ ಇಲಾಖೆಗಳಲ್ಲಿ ಶೇ. 5ರಷ್ಟು ಮೀಸಲಾತಿ, ಸಲಕರಣೆಗಳ ಉಚಿತ ವಿತರಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಇವುಗಳ ಸದುಪಯೋಗ ಪಡೆಯುವ ಮೂಲಕ ವಿಕಲಚೇತನರು ಸಮಾಜದ ಮುಖ್ಯವಾನಿಗೆ ಬರಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

        ವಿಕಲಚೇತನರಿಗೆ ನೀರುವ ಗುರುತಿನ ಚೀಟಿಯು 10 ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ. ನಂತರ ಅದನ್ನು ನವೀಕರಿಸಿಕೊಳ್ಳಬೇಕು ಎಂದ ಅವರು, ವಿಕಲಚೇತನರಿಗೆ ಸೌಲಭ್ಯ ವಿತರಿಸುವ ಕ್ಯಾಂಪ್‍ಗಳಲ್ಲಿ ಯಾವುದೇ ಸವಲತ್ತುಪಡೆಯಲು ದಲ್ಲಾಳಿಗಳ ಮೊರೆ ಹೋಗದೆ, ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ, ಸೂಕ್ತ ದಾಖಲೆ ಒದಗಿಸಿ ಸೌಲಭ್ಯಪಡೆಯಬೇಕೆಂದು ಕಿವಿಮಾತು ಹೇಳಿದರು.

         ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ ಡಾ. ಸುರೇಶ್ ಹನಗವಾಡಿ, ಹಿಮೋಫಿಲಿಯಾವು ಬಾಹ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆಯಲ್ಲ. ದೇಹದ ಒಳಗೊಳಗೇ ಇದರಂತೆ ನೋವು ನೀಡುವ ಖಾಯಿಲೆ ಮತ್ತೊಂದಿಲ್ಲ. ಆದ್ದರಿಂದ ಸರ್ಕಾರ ಹಿಮೋಫಿಲಿಯಾ ರೋಗಿಗಳಿಗೆ ಮೊದಲ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.

          ದೇಶದಲ್ಲಿ ಪ್ರತಿ 10 ಸಾವಿರ ಜನರಿಗೆ ಒಬ್ಬರು ಹಿಮೋಫಿಲಿಯಾದಿಂದ ಬಳಲುತ್ತಿದ್ದು, ದೇಶದಲ್ಲಿ 80 ಸಾವಿರದಿಂದ 1 ಲಕ್ಷ ಹಿಮೋಫಿಲಿಯಾ ಪೀಡಿತರಿದ್ದಾರೆ. ರಾಜ್ಯದಲ್ಲಿ 6 ಸಾವಿರ ಬಾಧಿತರಿದ್ದು, ನೋಂದಣಿಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಕೇವಲ 1800 ವ್ಯಕ್ತಿಗಳು ಮಾತ್ರ. ಆದ್ದರಿಂದ ಇನ್ನುಳಿದವರನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವ ಕೆಲಸ ಆಗಬೇಕೆಂದು ಸಲಹೆ ನೀಡಿದರು.

          ಹಿಮೋಫಿಲಿಯಾವು ವಂಶವಾಹಿ ಕಾಯಿಲೆಯಲ್ಲ. ಏಕೆಂದರೆ, 100 ಹಿಮೋಫಿಲಿಯಾ ಬಾಧಿತರಲ್ಲಿ 30 ಜನರಲ್ಲಿ ವಂಶವಾಹಿಯಿ ಅಲ್ಲದೇ ಬೇರೆ ಕಾರಣಗಳಿಂದ ಬಂದಿರುವುದು ದೃಢಪಟ್ಟಿದೆ. ಇದು ವಿರಳ ತೊಂದರೆಯಾದ್ದರಿಂದ ಸರ್ಕಾರ, ಸಮಾಜ ನಮ್ಮನ್ನು ಗುರುತಿಸುತ್ತಿಲ್ಲ. ನಮ್ಮದು ಜೀವ, ಜೀವನ ಹಸನಾಗಿರಲು ಸರ್ಕಾರ ಎಲ್ಲ ರೀತಿಯ ಸೌಕರ್ಯ ನೀಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಹಿಮೋಫಿಲಿಯಾ ಬಾಧಿತರಾದ ಸುಹಾಸ್ ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು.

         ಕಾರ್ಯಕ್ರಮದಲ್ಲಿ ಕರ್ನಾಟಕ ಹಿಮೋಫಿಲಿಯಾ ಗೌರವಾಧ್ಯಕ್ಷೆ ಕಿರುವಾಡಿ ಗಿರಿಜಮ್ಮ, ಉಪಾಧ್ಯಕ್ಷ ಡಾ.ಬಿ.ಟಿ. ಅಚ್ಯುತ, ಮುಖ್ಯ ವೈದ್ಯಾಧಿಕಾರಿ ಡಾ.ಎಂ.ಎಂ.ದಡ್ಡಿ ಕೊಪ್ಪದ್, ಕಾರ್ಯನಿರ್ವಾಹಕ ನಿರ್ದೇಶಕ ಜಿ.ಸಿ. ಸದಾಶಿವಪ್ಪ ಮತ್ತಿತರರು ಉಪಸ್ಥಿತರಿದ್ದರು. ಭಾರತಿ ಪ್ರಾರ್ಥಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link