ಬೆಂಗಳೂರು
ಸರ್ಕಾರ ರಚನೆಗೆ ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಟ್ವೀಟ್ ವಾರ್ ಆರಂಭಗೊಂಡಿದೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಸದಾನಂದಗೌಡ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
“ಕೊಟ್ಟ ಕುದುರೆಯನ್ನು ಏರಲಾರದವನು ಧೀರನೂ ಅಲ್ಲ ಶೂರನೂ ಅಲ್ಲ” ನಿಮ್ಮ ಪಕ್ಷದ ಹುಳುಕನ್ನು ಮುಚ್ಚಿಕೊಳ್ಳಲು ಹೊಸ ಪ್ರಹಸನ ಶುರು ಮಾಡಿದ್ದೀರಿ. ಮುಲಾಜಿನ ಸರ್ಕಾರ ನಡೆಸಲು ಮೈತ್ರಿಗೆ ಕೈಜೋಡಿಸಿ ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ಯತ್ನಿಸಬೇಡಿ. ನಿಮ್ಮ ಗಿಲೀಟು ಮಾತನ್ನು ಯಾರು ಎಂಬುವುದಿಲ್ಲವೆಂದು ಸದಾನಂದ ಗೌಡ ತಿರುಗೇಟು ನೀಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಅಸಹನೆ ನಿಮಗೆ ಶುರುವಾಗಿದೆ. ಸೋಲಿನ ಪರಿಣಾಮವೇ ಅಥವಾ ಮುಖ್ಯಮಂತ್ರಿ ಕುರ್ಚಿ ಕಳೆದುಕೊಂಡ ಮನೋಸ್ಥಿತಿಯೇ ? ಎಂದು ಟ್ವೀಟರ್ ಮೂಲಕ ಸದಾನಂದ ಗೌಡ ಅವರು ಸಿದ್ದರಾಮಯ್ಯನವರ ಕಾಲೆಳೆದಿದ್ದಾರೆ.
ಸದಾನಂದಗೌಡರ ಟ್ವೀಟ್ ಗೆ ಸಿದ್ದರಾಮಯ್ಯ ಕೂಡ ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದಾರೆ.ನಿಮ್ಮ ಅನುಭವಗಳನ್ನು ಸರಿಯಾಗಿ ಹೇಳಿದ್ದೀರಿ.ಕುದುರೆ ಏರಲಾರದನು ಶೂರನೂ ಅಲ್ಲ, ಧೀರನೂ ಅಲ್ಲ.ಎಷ್ಟೆಂದರೂ, ಹನ್ನೊಂದು ತಿಂಗಳಲ್ಲಿಯೇ ಮುಖ್ಯಮಂತ್ರಿ ಸ್ಥಾನದಿಂದ ಓಡಿಹೋದವರಲ್ವೇ ನೀವು,.. ಎಂದು ಕಟುವಾಗಿ ಕೇಂದ್ರ ಸಚಿವರಿಗೆ ಮಾಜಿ ಮುಖ್ಯಮಂತ್ರಿ ವ್ಯಂಗ್ಯವಾಡಿದ್ದಾರೆ.
ಶಾಸಕರ ಖರೀದಿಗೆ ಬಿಜೆಪಿ 30 ಕೋಟಿ ಆಮಿಷ ಒಡ್ಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿಕೆಯಿಂದ ಮುಜುಗರಕ್ಕೆ ಒಳಗಾಗಿರುವ ಬಿಜೆಪಿ ನಾಯಕರು ಎರಡು ದಿನಗಳಿಂದ ನಿರಂತರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ರಮೇಶ್ ಜಾರಕಿಹೊಳಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಮೂಲಕ ಮೈತ್ರಿ ಸರ್ಕಾರವನ್ನು ಅಲ್ಪಮತಕ್ಕೆ ಕುಸಿಯವಂತೆ ಮಾಡುವ ಭೀತಿ ವಿಚಾರಗಳು ರಾಷ್ಟ್ರೀಯ ಪಕ್ಷಗಳ ನಾಯಕರ ಕಿತ್ತಾಟಕ್ಕೆ ವೇದಿಕೆ ಕಲ್ಪಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ