ಶಾದಿ ಭಾಗ್ಯಕ್ಕೆ ಬಿಡುಗಡೆಯಾಗದ ಅನುದಾನ

ದಾವಣಗೆರೆ

        2017ರ ಆಗಸ್ಟ್ ತಿಂಗಳಿನಿಂದ ಇಲ್ಲಿಯ ವರೆಗೂ ಶಾದಿ ಭಾಗ್ಯ ಯೋಜನೆಯ ಅನುದಾನ ಬಿಡುಗಡೆಯಾಗಿಲ್ಲ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಹೀನಾ ಕೌಸರ್ ಮಾಹಿತಿ ನೀಡಿದರು.

          ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಯಾಸೀನ್‍ತಾಜ್ ಎಂಬುವರ ಪೋಷಕರು ಅರ್ಜಿ ಅರ್ಜಿ ಸಲ್ಲಿಸಿ, ಶಾದಿ ಭಾಗ್ಯ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಿ, ಒಂದು ವರ್ಷ ಕಳೆದರೂ ಈ ವರೆಗೂ ಸಹಾಯಧನ ದೊರೆತಿಲ್ಲ. ಆದ್ದರಿಂದ ಸಹಾಯಧನ ಕೊಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

           ಇದಕ್ಕೆ ಪ್ರತಿಕ್ರಯಿಸಿದ ಎಡಿಸಿ ಪದ್ಮ ಬಸವಂತಪ್ಪ, ಸಹಾಯ ಧನ ನೀಡಲು ಏಕೆ ವಿಳಂಬ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ಹೀನಾ ಕೌಸರ್, 2017ರ ಆಗಸ್ಟ್ ತಿಂಗಳಿನಿಂದ ಇಲ್ಲಿಯ ವರೆಗೂ ಶಾದಿ ಭಾಗ್ಯ ಯೋಜನೆಯಡಿಯಲ್ಲಿ ಅನುದಾನ ಬಂದಿಲ್ಲ. ಹೀಗಾಗಿ ಶಾದಿ ಭಾಗ್ಯ ಯೋಜನೆಯ ಅಡಿಯಲ್ಲಿ ಬಂದಿರುವ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿಲ್ಲ ಎಂದರು.

          ಈ ವೇಳೆ ಮಾತನಾಡಿದ ಪದ್ಮ ಬಸವಂತಪ್ಪ, ಸರ್ಕಾರದಿಂದ ಅನುದಾನ ಬರುತ್ತಿದ್ದಂತೆ, ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಇತ್ಯರ್ಥಪಡಿಸಬೇಕೆಂದು ಸೂಚಿಸಿದರು.

          ಹರೀಶ ಎಂಬುವರು ಅರ್ಜಿ ಸಲ್ಲಿಸಿ, ನಗರದಲ್ಲಿ 42 ಖಾಸಗಿ ಅರ್ಪಾಟ್‍ಮೆಂಟ್‍ಗಳಿವೆ ಈ ಅರ್ಪಾಟ್‍ಮೆಂಟ್ ಗಳವರು ಸ್ವಂತ ಎಸ್.ಟಿ.ಪಿ ಪ್ಲಾಂಟ್ ಹೊಂದಿರಬೇಕೆಂಬ ನಿಯಮವಿದೆ. ಆದರೆ, ಯಾವ ಅಪಾರ್ಟ್‍ಮೆಂಟ್‍ನವರು ಸಹ ಎಸ್.ಟಿ.ಪಿ ಪ್ಲಾಂಟ್ ಹೊಂದಿಲ. ಆದ್ದರಿಂದ ಈ ಅಪಾರ್ಟ್‍ಮೆಂಟ್‍ಗಳ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

         ಮಹಾನಗರ ಪಾಲಿಕೆ ವ್ಯಾಪ್ತಿಯ ಆವರಗೆರೆ ಗ್ರಾಮಸ್ಥರು ಅರ್ಜಿ ಸಲ್ಲಿಸಿ, ಆವರಗೆರೆಗೆ ಹೊಂದಿಕೊಂಡಂತೆ ನಿರ್ಮಾಣವಾಗಿರುವ ಉತ್ತಮ್‍ಚಂದ್ ಖಾಸಗಿ ಲೇ ಔಟ್ ನಲ್ಲಿ 40 ಅಡಿ ರಸ್ತೆ ಮಾಡಿದ್ದು, ಹಿಂದೆ ಅಲ್ಲಿ ಕೇವಲ ಬಂಡಿಜಾಡು ಇತ್ತು. ಆದರೆ, ಅಲ್ಲಿ ನಿರ್ಮಿಸಿರುವ ರಸ್ತೆಗೆ ನಮ್ಮ ನಮ್ಮ ಜಾಗವನ್ನು ಅತೀಕ್ರಮಿಸಿಕೊಂಡಿದ್ದರು. ಆದರೆ, ಈಗ ನಮ್ಮ ಜಾಗವನ್ನು ನಾವು ಆಕ್ರಮಿಸಿಕೊಂಡಿದ್ದೇವೆ. ಆದರೆ, ತಹಶೀಲ್ದಾರ್ ಅವರು ನಮ್ಮ ವಿರುದ್ಧ ಅನಗತ್ಯವಾಗಿ ಕೇಸ್ ಹಾಕಿದ್ದಾರೆ. ದಯವಿಟ್ಟು ನೀವಾದರೂ ನಮಗೆ ನ್ಯಾಯಕೊಡಿಸಿ ಎಂದು ಮನವಿ ಮಾಡಿದರು.

          ಇದಕ್ಕೆ ಪ್ರತಿಕ್ರಯಿಸಿದ ಅಪರ ಜಿಲ್ಲಾಧಿಕಾರಿ, ಈ ಕುರಿತು ತಹಶೀಲ್ದಾರ್ ಅವರಿಂದ ವರದಿ ಪಡೆದು ಪರಿಶೀಲಿಸುವುದಾಗಿ ಹೇಳಿದರು.

         ಹರಿಹರ ನಗರದ ನಿವಾಸಿಯೊಬ್ಬರು ಅರ್ಜಿ ನೀಡಿ ಅಮರಾವತಿ ಕಾಲೋನಿಯ ಚರಂಡಿಯ ನೀರು ನಮ್ಮ ಮನೆ ಕಡೆ ಹರಿಯುತ್ತದೆ. ಇದನ್ನು ತಪ್ಪಿಸಲು ಕಳೆದ ಆರು ವರ್ಷದ ಮುಂಚಿನಿಂದಲೂ ಅರ್ಜಿ ನೀಡುತ್ತಿದ್ದರೂ ಸಮಸ್ಯೆ ಪರಿಹಾರ ಆಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿ ನಮಗಾಗುತ್ತಿರುವ ಸಮಸ್ಯೆಯನ್ನು ತಪ್ಪಿಸಬೇಕೆಂದು ಮನವಿ ಮಾಡಿದರು.

          ಹರಿಹರ ಕಿರ್ಲೋಸ್ಕರ್ ಕಾರ್ಖಾನೆ ನಿವೃತ್ತಿ ನೌಕರರೊಬ್ಬರು ಕಳೆದ 18 ವರ್ಷಗಳಿಂದ ಬಾಕಿ ಗ್ರಾಚುಟಿ ಹಣ ಬಂದಿಲ್ಲ ಶೀಘ್ರ ಕೊಡಿಸಿ ಕೊಡಿ ಎಂದರು ಅಪರ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಈ ಪ್ರಕರಣ ನ್ಯಾಯಾದಲ್ಲಿದೆ ಹಾಗೂ ತಹಶೀಲ್ದಾರರಿಗೆ ವಿವರ ನೀಡಲು ಹೇಳಿದೆ ಕಾರ್ಖಾನೆ ಜಾಗವನ್ನು ಹರಾಜು ಹಾಕಿ ಬಾಕಿ ಇರುವವರಿಗೆ ಹಣ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಲೇಬೆನ್ನೂರು ಸಿದ್ದಪ್ಪ ಬಡಾವಣೆಯ ಮೋಹನಕುಮಾರ ಮತ್ತಿತರರು ಮಾತನಾಡಿ, ಬೇಡ ಜಂಗಮ ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಸುತ್ತೋಲೆಗಳನ್ನು ಅನುಸರಿಸುವಂತೆ ತಹಶೀಲ್ದಾರ ಗ್ರೇಡ್-2 ಇವರಿಗೆ ಸೂಕ್ತ ಆದೇಶ ನೀಡಿ ಸಮಾಜಕ್ಕೆ ಸಿಗಬೇಕಾದ ಸಂವಿಧಾನಾತ್ಮಕ ಹಕ್ಕನ್ನು ಒದಗಿಸಿಕೊಡಲು ಮನವಿ ಮಾಡಿದರು.

             ಎಸ್.ಜಿ.ಎಂ.ನಗರದ ಕಲಂದರದ ಎಂಬುವರು ಅರ್ಜಿ ಸಲ್ಲಿಸಿ, ಅಲ್ಪಸಂಖ್ಯಾತರ ಶ್ರಮಶಕ್ತಿ ಯೋಜನೆಯಡಿ ಸ್ವಂತ ವ್ಯಾಪಾರಕ್ಕಾಗಿ ಸಾಲಸೌಲಭ್ಯ ನೀಡುವಂತೆ ಕೋರಿದರು.ಜಗಳೂರು ತಾಲ್ಲೂಕಿನ ಕುಮಾರಪ್ಪ ಎಂಬುವರು ಯಾವುದಾರರು ಉದ್ಯೋಗ ನೀಡಿ ಇಲ್ಲ ಸ್ವ-ಉದ್ಯೋಗಕ್ಕೆ ಅವಕಾಶವಾಗುವಂತೆ ಕುರಿಕೊಳ್ಳಲು ಧನಸಹಾಯ ಕೊಡಿಸಿ ಎಂದು ಮನವಿ ಮಾಡಿದರು.

           ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ, ದೇವರಾಜು ಅರಸು ನಿಗಮಕ್ಕೆ ಕುರಿಕೊಳ್ಳಲು ಅರ್ಜಿ ನೀಡಿ ಎಂದರು ನಿಗಮದ ಅಧಿಕಾರಿ ಪ್ರತಿಕ್ರಿಯಿಸಿ ಈ ವರ್ಷದ ಅರ್ಜಿ ಸ್ವೀಕೃತಿ ಕೊನೆಗೊಂಡಿದ್ದು, ಮುಂದಿನ ಸಾಲಿಗೆ ಪ್ರಯತ್ನಿಸಿ ಎಂದರು.ನಗರದ ಚಿಕ್ಕನಾಗ್ತಿಹಳ್ಳಿಯ ಹನುಮಂತಪ್ಪ ಅರ್ಜಿ ನೀಡಿ, ನನಗೆ ಮನೆ, ಕರೆಂಟು, ನೀರಿನ ಸಂಪರ್ಕ ಮೂರು ಒಟ್ಟಿಗೆ ಕಲ್ಪಿಸಬೇಕೆಂದು ಮನವಿ ಮಾಡಿದರು.
ಮುನೀರಬಾನು, ಷಾತಾಜ್, ಮಹದೇವಪ್ಪ ಎಂಬುವರು ಆಶ್ರಯ ಮನೆಗಳಿಗೆ ಕೋರಿ ಅರ್ಜಿ ಸಲ್ಲಿಸಿದರು.

           ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಭ, ಕಾರ್ಮಿಕ ಅಧಿಕಾರಿ ಇಬ್ರಾಹಿಂ ಮತ್ತಿತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link