ನೀರು ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ : ರೇಣುಕಾಚಾರ್ಯ

0
11

ಹೊನ್ನಾಳಿ:

        ನೀರು ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕಮ್ಮಾರಗಟ್ಟೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಬಳಿ ಕಮ್ಮಾರಗಟ್ಟೆ-ಬೆನಕನಹಳ್ಳಿ ಮಧ್ಯ ಇರುವ ಹುಣಸೆಹಳ್ಳದ ಬಳಿ 32 ಲಕ್ಷ ರೂ.ಗಳ ವೆಚ್ಚದ ಚೆಕ್ ಡ್ಯಾಂ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೇರವೇರಿಸಿ ಅವರು ಮಾತನಾಡಿದರು.

          ಈ ಬಾರಿ ಮಳೆ ಕಡಿಮೆಯಾಗಿ ಕೆರೆ-ಕಟ್ಟೆಗಳು ಸಂಪೂರ್ಣ ಬತ್ತಿ ಹೋಗಿವೆ. ಇದರಿಂದಾಗಿ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಬಾರದು ಎಂಬ ದೃಷ್ಟಿಯಿಂದ ಕಮ್ಮಾರಗಟ್ಟೆ-ಬೆನಕನಹಳ್ಳಿ ನಡುವಿನ ಹುಣಸೇಹಳ್ಳಕ್ಕೆ 32 ಲಕ್ಷ ರೂ.ಗಳ ವೆಚ್ಚದ ಚೆಕ್ ಡ್ಯಾಂ ಮಂಜೂರು ಮಾಡಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿ ಪ್ರಕೃತಿ ವಿಕೋಪದಿಂದ ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗದೇ ರೈತ ವರ್ಗ ಕಂಗಾಲಾಗಿದ್ದಾರೆ. ಹೊನ್ನಾಳಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸದಾ ಭರ್ತಿಯಾಗುತ್ತಿದ್ದ ಕೆರೆ-ಕಟ್ಟೆಗಳಿಗೆ ನೀರು ಬಾರದೆ ಬತ್ತಿ ಹೋಗಿ ಜನ-ಜಾನುವಾರುಗಳು ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿವೆ. ಮುಂಬರುವ ದಿನಗಳಲ್ಲಿ ಬರಗಾಲ ಆವರಿಸುವ ಭೀತಿ ಕಾಡುತ್ತಿದ್ದು, ಸರಕಾರ ಶೀಘ್ರವೇ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

          ತಾಲೂಕುಗಳಲ್ಲಿ ಅವಶ್ಯವಿರುವ ಗ್ರಾಮಗಳಲ್ಲಿ ಹೊಸದಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡಿ ಅಂತರ್ಜಲ ಮಟ್ಟ ಹೆಚ್ಚಿಸಿ ರೈತರಿಗೆ ನೆರವಾಗಲು ಈಗಾಗಲೇ ಸಣ್ಣ ನೀರಾವರಿ ಇಲಾಖಾ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಅಖಂಡ ಹೊನ್ನಾಳಿ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಹಿಂದಿನ ನನ್ನ ಆಡಳಿತಾವಧಿಯಲ್ಲಿ ಸಚಿವ ಸಚಿವನಾದ ಸಂದರ್ಭದಲ್ಲಿ ಹಲವಾರು ಕೋಟಿ ರೂ.ಗಳ ವೆಚ್ಚದಲ್ಲಿ ಹಲವಾರು ಗ್ರಾಮಗಳಲ್ಲಿ ಬೃಹತ್ ಚೆಕ್ ಡ್ಯಾಮ್‍ಗಳನ್ನು ನಿರ್ಮಿಸಿ ರೈತರ ಸೇವೆಗೆ ನೀಡಲಾಗಿತ್ತು. ಇದೀಗ, ತಾಲೂಕಿನ ಎಲ್ಲಾ ಕೆರೆಗಳ ಅಭಿವೃದ್ಧಿಗೆ ಸರಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಡ ರೈತರಿಗೆ ಜಮೀನುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕ್ರಿಯಾ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಭದ್ರಾ ಕಾಡಾ ಯೋಜನೆಯಡಿ ರೈತರ ಗದ್ದೆಗಳಲ್ಲಿ ಕಾಲುವೆ, ಬಸಿಗಾಲುವೆ ರಸ್ತೆ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದು ವಿವರಿಸಿದರು.

        ತಾಪಂ ಸದಸ್ಯೆ ರೇಖಾ ಉಮೇಶ್‍ನಾಯ್ಕ, ಗ್ರಾಪಂ ಸದಸ್ಯ ಎ.ಜಿ. ಮಹೇಂದ್ರಗೌಡ, ಬೆನಕನಹಳ್ಳಿ, ಕಮ್ಮಾರಗಟ್ಟೆ ಸುತ್ತಮುತ್ತಲಿನ ಗ್ರಾಮಸ್ಥರು, ಮುಖಂಡರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here