ಜಾತಿ-ಮತವೆಂಬ ಮಾನಸಿಕ ರೋಗಕ್ಕೆ ವಚನ ಮದ್ದು

ದಾವಣಗೆರೆ

      ಪ್ರಸ್ತುತ ಸಮಾಜದಲ್ಲಿ ಮನೆ ಮಾಡಿರುವ ಜಾತಿ-ಮತ, ಶ್ರೇಷ್ಠ-ಕನಿಷ್ಠ, ಪಕ್ಷ-ಪಂಗಡಗಳಂತಹ ಮಾನಸಿಕ ರೋಗಗಳಿಗೆ ವಚನ ಸಾಹಿತ್ಯವೇ ಸರಿಯಾದ ಮದ್ದು ಆಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಹೆಚ್.ಎ.ಭಿಕ್ಷಾವರ್ತಿಮಠ ಪ್ರತಿಪಾದಿಸಿದರು.

       ನಗರದ ಎವಿಕೆ ಮಹಿಳಾ ಕಾಲೇಜಿನ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಮಂಗಳವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕಾಲೇಜಿನ ಕನ್ನಡ ವಿಭಾಗ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ‘ವರ್ತಮಾನಕ್ಕೂ ವಚನ’ ಚಿಂತನಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ಗೌತಮ ಬುದ್ಧರವರು ಕೊನೆ, ಕೊನೆಯಲ್ಲಿ ಲಿಂಗತಾರತಮ್ಯವನ್ನಾದರೂ ಮಾಡಿದ್ದರು. ಆದರೆ, ಬಸವಾದಿ ಶರಣರು ರಚಿಸಿರುವ ವಚನ ಸಾಹಿತ್ಯದಲ್ಲಿ ಯಾವುದೇ ತಾರತಮ್ಯಗಳಿಗೆ ಆಸ್ಪದವೇ ಇರಲಿಲ್ಲ. ಶರಣರು 12ನೇ ಶತಮಾನದಲ್ಲಿ ಸ್ಥಾಪಿಸಿದ್ದ ಜಗತ್ತಿನ ಮೊಟ್ಟಮೊದಲ ಸಂಸತ್ತು ಎಂದೇ ಖ್ಯಾತಿಯಾಗಿರುವ ಅನುಭವ ಮಂಟಪದಲ್ಲಿ ಎಲ್ಲಾ ಜಾತಿ, ಜನಾಂಗಗಳ ಪುರುಷರು ಮತ್ತು ಮಹಿಳೆಯರಿಗೆ ಮುಕ್ತ ಪ್ರವೇಶವಿತ್ತು ಎಂದು ಸ್ಮರಿಸಿದರು.

      ಇಂದಿನ ಚಿಂತನೆ-ಆಚಾರ-ವಿಚಾರಗಳಲ್ಲಿ ಪ್ರಜಾಪ್ರಭುತ್ವದ ಸಾರಂಶವೇ ಇಲ್ಲ. ಮನೆಯಿಂದಲೇ ಅಸಮಾನತೆ ಆರಂಭವಾಗುತ್ತದೆ. ಆದರೆ, ಸ್ವಾತಂತ್ರ-ಸಮಾನತೆ, ಕಾಯಕ-ದಾಸೋಹಗಳ ಸಾಹಿತ್ಯ ಯಾವುದಾದರು ಇದ್ದರೆ, ಅದು ಕರ್ನಾಟಕದ ವಚನ ಸಾಹಿತ್ಯ ಮಾತ್ರ ಎಂದು ವಿಶ್ಲೇಷಿಸಿದರು.

         ಬಸವಾದಿ ಶರಣರಲ್ಲಿ ಹಲವು ಭಿನ್ನಾಭಿಪ್ರಾಯಗಳಿದ್ದರೂ, ಅವರೆಲ್ಲರೂ ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತಿದ್ದರು. ಹೀಗಾಗಿ ವಚನಕಾರರೆಲ್ಲರೂ ಆನಂದಮಯಿಗಳಾಗಿ ಕಾಣುತ್ತಿದ್ದರು. ಆದರೆ, ವರ್ತಮಾನದಲ್ಲಿ ಭಿನ್ನಾಭಿಪ್ರಾಯಗಳನ್ನು ಯಾರೂ ಕ್ರೀಡಾಮನೋಭಾವದಿಂದ ಸ್ವೀಕರಿಸದೇ, ಜಿದ್ದಾಗಿ ಪರಿಗಣಿಸುವ ಕಾರಣ ಮೇಲ್ನೊಟಕ್ಕೆ ಆನಂದವಾಗಿ ಕಂಡರೂ ಒಳಗೊಳಗೆ ಆನಂದದಿಂದ ಇರುವುದಿಲ್ಲ.

        ಇನ್ನೂ ಕೆಲವರು ಇತರರಿಗಿಂತ ತಾವು ಮಾತ್ರ ಆನಂದಲ್ಲಿದ್ದೇವೆಂಬ ಭ್ರಮಾಲೋಕದಲ್ಲಿ ಬದುಕುತ್ತಿದ್ದಾರೆಂದು ಹೇಳಿದರು.
ಇಂದಿನ ಟೆಕ್ಕಿ, ಬುಕ್ಕಿಗಳಿಗೆ ನಾವು ಯಾಕೆ ಬದುಕುತ್ತಿದ್ದೇವೆಂಬುದರ ಪರಿವೇ ಇಲ್ಲ. ಮನುಷ್ಯ ಸ್ವಾರ್ಥಕ್ಕಾಗಿ ಬದುಕುವುದಕ್ಕಿಂತ, ಸಮಾಜಕ್ಕಾಗಿ ಬದುಕಬೇಕು. ಆಗಮಾತ್ರ ಜೀವನಕ್ಕೆ ಸಾರ್ಥಕತೆ ಸಿಗಲಿದೆ ಎಂದ ಅವರು, ಜೀವನ ಬದಲಾಗಬೇಕಾದರೆ, ವಚನಸಾಹಿತ್ಯವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಿ, ಅದರಲ್ಲಿರುವ ವಿಚಾರಧಾರೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

         ಈಗಿನ ಬಹುತೇಕರಿಗೆ ವಚನ ಎಂದರೇನು? ಎಂಬುದರ ಬಗ್ಗೆ ಗೊತ್ತೇ ಇಲ್ಲ. ವಿದ್ಯಾರ್ಥಿಗಳಿಗೆ ಇದು ಏಕ ವಚನ, ಬಹು ವಚನವಾದರೆ, ರಾಜಕಾರಣಿಗಳಿಗೆ ಪ್ರಮಾಣವಚನವಾಗಿದ್ದರೆ, ಕೆಲ ಬುದ್ಧಿ ಜೀವಿಗಳಿಗೆ ಪರಸ್ಪರ ಕಿತ್ತಾಡುವುದಾಗಿದೆ. ಆದರೆ, ಅನುಭಾವಿಗಳು ಮಾತ್ರ ವಚನವನ್ನು ಗಂಭೀರವಾಗಿ ಪರಿಗಣಿಸಲಿದ್ದಾರೆಂದು ನುಡಿದರು.

         ‘ವಚನವು ಸರಸ-ಸಲ್ಲಾಪ ಮಾಡುತ್ತಾ ಕಾಲಹರಣ ಮಾಡುವ ಸಾಹಿತ್ಯವಲ್ಲ. ಅದು ಅನುಭಾವಿಗಳ ಸಾಹಿತ್ಯವಾಗಿದ್ದು, ಇವುಗಳನ್ನು ಓದಬೇಕಾದರೆ, ಮೈಎಲ್ಲಾ ಕಣ್ಣಾಗಿಸಿಕೊಂಡು ಓದಬೇಕೆಂದು ಹೇಳಿದ ಅವರು, ವಚನ ಸಾಹಿತ್ಯವಿಲ್ಲದ ಭಾರತದ ಸಾಹಿತ್ಯ ಎಂದೆಂದೂ ಅಪೂರ್ಣವೇ ಎಂದರು.

         ವಚನ ಸಾಹಿತ್ಯದಲ್ಲಿ ನಮ್ಮ ಬದುಕಿನ ಪರಂಪರೆ ಇದ್ದು, ಲಿಂಗಾಂಗ ಸಾಮರಸ್ಯವೇ ಗುರಿಯಾದರೆ, ಅನುಭಾವದ ಮೂಲಕ ಅಂತರಂಗ ಮತ್ತು ಬಹಿರಂಗ ಶುದ್ಧಿಗೊಳಿಸುವುದು ಇದರ ದಾರಿಯಾಗಿದೆ. ವಚನಕಾರರಿಗೆ ಆರ್ಥಿಕ ಭದ್ರತೆ ಇರದೇ, ಅಂದಂದಿನ ಗಳಿಕೆಯೇ ಅಂದಂದಿನ ಗಳಿಕೆಯಾಗಿದ್ದರೂ ನಡೆ-ನುಡಿಯಲ್ಲಿ ಒಂದಾಗಿದ್ದರು. ಆದರೆ, ಇಂದಿನ ಲೇಖಕರಿಗೆ, ಸಾಹಿತಿಗಳಿಗೆ ಆರ್ಥಿಕ ಭದ್ರತೆ ಇದ್ದರೂ ಸಾಹಿತ್ಯವೇ ಬೇರೆ, ಬದುಕೇ ಬೇರೆ ಎಂಬಂತೆ ಹೀನಾಯವಾಗಿ ಬದುಕತ್ತಿರುವುದು ಅತ್ಯಂತ ವಿಪರ್ಯಾಸವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

          ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಎಸ್.ಶಿವಪ್ರಕಾಶ್, ವಚನವು ಅಂತರಂಗ ಹಾಗೂ ಬಹಿರಂಗ ಶುದ್ಧಿಗೆ ಪೂರಕವಾಗಿವೆ. 12ನೇ ಶತಮಾದಲ್ಲಿ ಪೂರ್ಣ ಸ್ವಾತಂತ್ರ್ಯವಿದ್ದ ಕಾರಣಕ್ಕಾಗಿಯೇ ಎಲ್ಲಾ ವಿಚಾರಗಳು ಅಭಿವ್ಯಕ್ತಗೊಳ್ಳಲು ಸಾಧ್ಯವಾಯಿತು ಎಂದರು.

       ‘ವಚನ ಕ್ರಾಂತಿಯ ಪ್ರತಿಭಟನೆಯ ನೆಲೆಗಳು’ ಕುರಿತು ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ, ‘ವಚನ ಕ್ರಾಂತಿ ತರಬಯಸಿದ ಪರ್ಯಾಯ ವ್ಯವಸ್ಥೆ’ ಕುರಿತು ಮೈಸೂರು ಮಹಾರಾಣಿ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ವಿ.ವಸಂತಕುಮಾರ್ ಉಪನ್ಯಾಸ ನೀಡಿದರು. ಪತ್ರಕರ್ತ ಬಿ.ಎನ್.ಮಲ್ಲೇಶ್ ವಚನ ವಿಶ್ಲೇಷಣೆ ನಡೆಸಿದರು. ಕಲಾವಿದರಾದ ಯಶ ದಿನೇಶ್ ಹಾಗೂ ರೇವಣ್ಣ ಸಂಗಡಿಗರು ವಚನ ಗೀತೆಗಳನ್ನು ಪ್ರಸ್ತುತಪಡಿಸಿದರು. ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕಿ ಕಿರುವಾಡಿ ಗಿರಿಜಮ್ಮ, ಕಾಲೇಜಿನ ಕನ್ನಡ ವಿಭಾದ ಮುಖ್ಯಸ್ಥ ಬಸಪ್ಪ ಎ.ಡಿ. ಉಪಸ್ಥಿತರಿದ್ದರು. ಪರಿಷತ್‍ನ ಜಿಲ್ಲಾಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ಸ್ವಾಗತ ಕೋರಿ, ಆಶಯ ನುಡಿಗಳನ್ನಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link