ಬೆಂಗಳೂರು
ರೋಮ್ ಹತ್ತಿ ಉರಿಯುತ್ತಿದ್ದಾಗ ನೀರೋ ಪೀಟೀಲು ಬಾರಿಸಿದಂತೆ, ಕರ್ನಾಟಕದಲ್ಲಿ ಬರದಿಂದ ರೈತರು ಸಾಯುತ್ತಿದ್ದರೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತ್ರ ತಮ್ಮ ಮಗನ ಸಿನಿಮಾ ಚಿತ್ರೀಕರಣದ ವೀಕ್ಷಣೆಗೆ ಫ್ರಾನ್ಸ್ಗೆ ತೆರಳಿ ಮೋಜು, ಮಸ್ತಿ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆರೋಪಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 156 ತಾಲೂಕುಗಳು ಬರಗಾಲ ಪೀಡಿತವಾಗಿವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಹಿತಕಾಯಬೇಕಾದ ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಸ್ಥರು ವಿದೇಶದಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದರು.
ಮುಖ್ಯಮಂತ್ರಿಗಳು ಸಿಂಗಾಪುರಕ್ಕೆ ಹೋಗಿದ್ದಾರೆ ಎನ್ನಲಾಗಿತ್ತು. ಆದರೆ, ಮಗನ ಸಿನಿಮಾ ಶೂಟಿಂಗ್ ನೋಡಲು ಕುಟುಂಬ ಸಮೇತ ಫ್ರಾನ್ಸ್ಗೆ ಹೋಗಿದ್ದಾರೆ ಎನ್ನುವ ಮಾಹಿತಿ ಈಗ ಸಿಕ್ಕಿದೆ. ಜನರು ಇಲ್ಲಿ ಬರದಿಂದ ಸಾಯುತ್ತಿರುವಾಗ ಮಗನ ಸಿನಿಮಾ ಶೂಟಿಂಗ್ ನೋಡಲು ಸಿಎಂ ಹೋಗಿರುವುದು ಎಷ್ಟರ ಮಟ್ಟಿಗೆ ಸರಿ. ಇದರ ಸತ್ಯಾಸತ್ಯತೆಯನ್ನು ಅವರೇ ಸ್ಪಷ್ಟ ಪಡಿಸಬೇಕು ಎಂದರು.
ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳ ಉಪಕರಣಗಳ ವಿತರಣೆಯಲ್ಲೂ ಭಾರಿ ಗೋಲ್ಮಾಲ್ ಆಗಿದೆ. 131 ತಾಲೂಕುಗಳಲ್ಲಿ 215635 ರೈತರಿಗೆ ಕೃಷಿ ಭಾಗ್ಯ ಯೋಜನೆ ಲಭಿಸಬೇಕಿತ್ತು. 2014-2018ರ ಅವಧಿಯ ನಾಲ್ಕು ವರ್ಷಗಳಲ್ಲಿ 1608 ಕೋಟಿ ರೂ ಖರ್ಚಾಗಿದೆ. ಆದರೆ, ಡೀಸೆಲ್ ಪಂಪ್ಸೆಟ್ಗಳ ವಿತರಣೆ ಆಗಿಲ್ಲ. ಎಷ್ಟೋ ಕಡೆ ಹೊಂಡಗಳನ್ನೇ ತೆಗೆದಿಲ್ಲ. ತೆಗೆದಿರುವ ಕಡೆ ಹೊಂಡಗಳೇ ಮುಚ್ಚಿಹೋಗಿವೆ. ಇದೊಂದು ದೊಡ್ಡ ಹಗರಣವಾಗಿದೆ. ಇದನ್ನು ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಇನ್ನು ಮೂರು ತಿಂಗಳು ಕಳೆದರೆ ಆರ್ಥಿಕ ವರ್ಷವೇ ಮುಗಿಯಲಿದೆ. ಆದರೂ ಡಿಸೆಂಬರ್ ಅಂತ್ಯದ ವೇಳೆಗೆ ಕೇವಲ ಶೇ.30 ರಷ್ಟು ಮಾತ್ರ ಹಣವನ್ನು ಖರ್ಚು ಮಾಡಿದ್ದಾರೆ. ಯಾವುದೇ ರೀತಿಯ ಅಭಿವೃದ್ಧಿ ಕೆಲಸವಾಗಿಲ್ಲ. ಮಾಹಿತಿ ಕೇಳಿದರೆ ಬಳ್ಳಾರಿಯಲ್ಲಿ ಯಾವುದೋ ಬಿಡುಗಡೆ ಮಾಡಿದ ಹಣದ ವಿವರ ನೀಡಿ ಸುಮ್ಮನಾದರು. ಇದು ಈ ಸರ್ಕಾರ ಹೇಗೆ ನಡೆಯುತ್ತಿದೆ ಎನ್ನುವುದಕ್ಕೆ ನಿದರ್ಶನ ಎಂದು ಟೀಕಿಸಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಮ್ಮನ್ನು ಸಂಪರ್ಕ ಮಾಡಿಲ್ಲ. ನಮ್ಮನ್ನು ಸಂಪರ್ಕಿಸದೇ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಜಾರಕಿಹೊಳಿ ಅಮಿತ್ ಶಾ ಭೇಟಿ ಊಹಾಪೆಹ. ಸರ್ಕಾರ ರಚಿಸುವ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಲೊಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕು. ಅದಕ್ಕೆ ಪೂರ್ವ ಭಾವಿಯಾಗಿ ಪ್ರತಿದಿನ ಮೂರ್ನಾಲ್ಕು ಜಿಲ್ಲೆಗಳ ನಾಯಕರ ಜೊತೆ ಸಭೆ ನಡೆಸುತ್ತಿದ್ದೇನೆ. ನಮ್ಮ ಗಮನ ಏಪ್ರಿಲ್ ಕೊನೆಗೆ ಬರುವ ಲೋಕಸಭಾ ಚುನಾವಣೆಯಲ್ಲಿ ಹಚ್ಚಿನ ಸ್ಥಾನ ಗೆಲ್ಲುವುದು ಮಾತ್ರ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ನಮ್ಮದೇನಿದ್ದರೂ ಈಗ ಮುಂದಿನ ಲೋಕಸಭಾ ಚುನಾವಣೆಯೇ ಗುರಿ.ಇಲ್ಲಿರುವ ಸರ್ಕಾರವನ್ನು ಬದಲಿಸುವುದು ನಮ್ಮ ಆದ್ಯತೆಯಲ್ಲ.ಅದು ತಾನಾಗಿ ಉರುಳಿದರೆ ಮಾತ್ರ ನಾವು ಸುಮ್ಮನಿರುವುದಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








