ಹಾನಗಲ್ಲ
ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ 7 ತಿಂಗಳಲ್ಲಿ 350 ಕೋಟಿರೂ ಸಾಲಮನ್ನಾ ಯೋಜನೆಗೆ ಬಿಡುಗಡೆಗೊಳಿಸಿದ್ದು, 44 ಸಾವಿರ ಕೋಟಿಗಳ ಸಂಪೂರ್ಣ ಸಾಲಮನ್ನಾ ಮಾಡಲು ಅವರಿಗೆ 5 ವರ್ಷಗಳ ಅಧಿಕಾರಾವಧಿ ಸಾಲದಾಗುತ್ತದೆ ಎಂದು ಮಾಜಿ ಸಚಿವ, ಶಾಸಕ ಸಿ.ಎಂ.ಉದಾಸಿ ಲೇವಡಿ ಮಾಡಿದರು.
ತಾಲೂಕಿನ ಹೊಂಬಳಿ ಗ್ರಾಮದಲ್ಲಿ 5 ಲಕ್ಷರೂ ವೆಚ್ಚದ ಸಂಸದರ ಅನುದಾನದ ಸಮುದಾಯ ಭವನ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ಅತಿ ಹೆಚ್ಚು ಸಂಖ್ಯೆಯಲ್ಲಿ ಆಯ್ಕೆಯಾದ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಹೊರಗಿಟ್ಟು ಮೈತ್ರಿ ಮಾಡಿಕೊಂಡ ವಿರೋಧ ಪಕ್ಷಗಳು ಯಾವ ಯೋಜನೆಗೂ ಅನುದಾನ ನೀಡಲು ಸಾಧ್ಯವಾಗದೇ ರಾಜ್ಯ ಅಭಿವೃದ್ಧಿ ಶೂನ್ಯವಾಗಿದೆ.
ತಾಲೂಕಿನಲ್ಲಿ ಬಸಾಪುರ, ತಿಳವಳ್ಳಿ, ಮಕರವಳ್ಳಿ, ಗುಡ್ಡದಮಲ್ಲಾಪುರ ಹಾಗೂ ಬಾಳಂಬೀಡ ಏತ ನೀರಾವರಿ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರೂ ರೈತರ ಪರವಾಗಿ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡದೇ ಸತಾಯಿಸುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಯೋಜನೆ ರೂಪಿತವಾದ ಸಂದರ್ಭದಲ್ಲಿ 180 ಕೋಟಿಯ ಕಾಮಗಾರಿ ಈಗ 400 ಕೋಟಿಯದ್ದಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಿಗ್ಗಾವಿ ಹನಿ ನೀರಾವರಿ ಯೋಜನೆಯನ್ನು ಹಾನಗಲ್ಲ ತಾಲೂಕಿಗೂ ವಿಸ್ತರಿಸಲಾಗಿದ್ದು, ಈ ಕುರಿತು ಶಾಸಕ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗಿದೆ. ಇದರಲ್ಲಿ ತಾಲೂಕಿನ 11 ಗ್ರಾಮಗಳ, 4400 ಎಕರೆ ನೀರಾವರಿಗೊಳಪಡಲಿದೆ ಎಂದು ವಿವರಿಸಿದರು. ಸಂಗೂರ-ಕಾತೂರ ರಸ್ತೆ ಮಾರ್ಗವಾಗಿ ಹೋತನಹಳ್ಳಿ ಗ್ರಾಮಕ್ಕೆ 24 ಕೋಟಿಗಳ ರಸ್ತೆ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ.
ಕರಗುದರಿ-ಮಂಕಾಪುರ ರಸ್ತೆ ಕಾಮಗಾರಿ ಟೆಂಡರ್ ಕರೆಯಲಾಗಿದ್ದು ಶೀಘ್ರದಲ್ಲಿ ಆರಂಭಗೊಳ್ಳಲಿದೆ. ಮಾರಬೀಡದಲ್ಲಿ ಅಗತ್ಯವಿರುವ ವಿದ್ಯುತ್ ವಿತರಣಾ ಘಟಕ ಸ್ಥಾಪನೆಗೆ ಚಿಂತನೆ ನಡೆದಿದೆ. ಹೊಂಬಳಿ ಗ್ರಾಮದ ಸಮೀಪ ಧರ್ಮಾ ನದಿಗೆ 45 ಲಕ್ಷರೂಗಳ ತಡೆಗೋಡೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಜಿಪಂ ಸದಸ್ಯ ಮಾಲತೇಶ ಸೊಪ್ಪಿನ ಮಾತನಾಡಿ, ತಾಲೂಕಿನಲ್ಲಿರುವ ಎಲ್ಲ ಬಾಂದಾರಗಳಿಗೆ ಸಕಾಲಕ್ಕೆ ಗೇಟ್ಗಳನ್ನು ಹಾಕದಿದ್ದರೆ ನೀರು ಪೋಲಾಗಿ ಹರಿದು ಹೋಗುತ್ತದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾಳಜಿವಹಿಸಬೇಕು. ಬಾಳಂಬೀಡ ಏತ ನೀರಾವರಿ ಯೋಜನೆ ಮಂಜೂರಾತಿಗಾಗಿ ಸಂಸದ ಶಿವಕುಮಾರ ಉದಾಸಿ, ಶಾಸಕ ಸಿ.ಎಂ.ಉದಾಸಿ ಆಸಕ್ತಿಯಿಂದ ಕಾರ್ಯೊನ್ಮುಖರಾಗಿದ್ದು, ಕೇಂದ್ರದಿಂದಲೂ ಅನುದಾನ ಬಿಡುಗಡೆಗೆ ಶ್ರಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಉಜ್ವಲ ಯೀಜನೆ ಅತಿ ಹೆಚ್ಚು ಫಲಾನುಭವಿಗಳನ್ನು ಹೊಂದಿರುವುದಕ್ಕೆ ಸಂಸದ ಶಿವಕುಮಾರ್ ಉದಾಸಿ ಅವರು ಕಾರಣರಾಗಿದ್ದಾರೆ. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಶಿವಕುಮಾರ್ ಅವರೇ ಪಕ್ಷದ ಅಭ್ಯರ್ಥಿಯಾಗಲಿದ್ದು, ಪಕ್ಷದ ಹಾಗೂ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು ಕ್ರಿಯಾಶೀಲವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಶಿವಾ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಬಸಣ್ಣ ಸಂಶಿ, ತಾಪಂ ಸದಸ್ಯೆ ಶೀಲಾ ಗಡಿಯಪ್ಪನವರ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ನಿಂಗಪ್ಪ ಚಂಗಳೆಮ್ಮನವರ, ಎಪಿಎಂಸಿ ನಿರ್ದೇಶಕ ನಾಗಪ್ಪ ಶಿವಣ್ಣನವರ, ಹಿರಿಯ ರೈತರಾದ ಚಂದ್ರಣ್ಣ ಕಳ್ಳಿ, ಚನಬಸಪ್ಪ ಸವಣೂರ, ಶಿವಣ್ಣ ಸೈದಣ್ಣನವರ, ನೀಲಮ್ಮ ದೇವಸೂರ, ಮಂಜುನಾಥ ಸವಣೂರ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ