3800 ಉಪನ್ಯಾಸಕರ ಹುದ್ದೆಗಳನ್ನು 3 ತಿಂಗಳೊಳಗೆ ಭರ್ತಿ : ಜಿ.ಟಿ. ದೇವೇಗೌಡ

ಬೆಂಗಳೂರು

        ಕಳೆದ 10 ವರ್ಷಗಳಿಗೂ ಮೇಲ್ಪಟ್ಟು ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡುವುದಲ್ಲದೇ ರಾಜ್ಯದ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 395 ಪ್ರಾಂಶುಪಾಲರು ಹಾಗೂ 3800 ಉಪನ್ಯಾಸಕರ ಹುದ್ದೆಗಳನ್ನು 3 ತಿಂಗಳೊಳಗೆ ಭರ್ತಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು.

         ಉಪನ್ಯಾಸಕರು ಪ್ರಾಚಾರ್ಯರ ನೇಮಕಾತಿಯಲ್ಲಿ ಕಳೆದ 10 ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಒಟ್ಟು ಹುದ್ದೆಯ ಶೇ. 50 ರಷ್ಟು ಹುದ್ದೆಗಳನ್ನು ಮೀಸಲಿಡಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅತಿ ಹೆಚ್ಚು ಅಂಕ ಪಡೆದ ಶೇ. 50ರಷ್ಟು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುವುದೆಂದು ಅವರು ತಿಳಿಸಿದರು.

          ಪ್ರಾಥಮಿಕ ಶಾಲಾ ಶಿಕ್ಷಕರಿಂದ ಹಿಡಿದು ಪದವಿ ಉಪನ್ಯಾಸಕರವರೆಗೂ ಆಯಾ ವಿಷಯಗಳ ವಿಷಯ ತಜ್ಞರಿಂದ ತರಬೇತಿ ನೀಡುವ ವ್ಯವಸ್ಥೆ ಕೈಗೊಳ್ಳಲಾಗುವುದು. ಬರುವ ಶೈಕ್ಷಣಿಕ ಸಾಲಿನಿಂದ ಪದವಿ ಕಾಲೇಜುಗಳಲ್ಲಿನ ಪಠ್ಯಕ್ರಮಗಳನ್ನು ವಿಷಯ ತಜ್ಞರೊಂದಿಗೆ ಚರ್ಚಿಸಿ ಬದಲಾಯಿಸಲಾಗುವುದು ಎಂದರು.

        ನಗರದ ಶಿಕ್ಷಕರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಐಸಿಎಸ್‍ಇ ಶಾಲೆಗಳ ಕನ್ನಡ ಶಿಕ್ಷಕರ ಸಂಘ ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ಪಠ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ದೊರೆಯದಿರುವುದನ್ನು ಪರಿಗಣಿಸಿ ಉದ್ಯೋಗ ಪಡೆದುಕೊಳ್ಳಲು ಪೂರಕವಾಗುವ ಪಠ್ಯಕ್ರಮಗಳನ್ನು ಅಳವಡಿಸಲಾಗುವುದು ಎಂದರು.

         ಹಳೆ ಶಿಕ್ಷಣ ಪದ್ಧತಿ ಬದಲಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ, ಶಿಕ್ಷಣ ತಜ್ಞರು, ವಿಷಯ ತಜ್ಞರು ಚಿಂತಿಸಬೇಕು ಹೊಸ ಕಾಲೇಜುಗಳನ್ನು ಆರಂಭಿಸುವ ಬದಲು ಈಗಿರುವ ಎಲ್ಲ ಕಾಲೇಜುಗಳಿಗೆ ಅಗತ್ಯ ಉಪನ್ಯಾಸಕರ ನೇಮಕ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕುರಿತು ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದರು.

         ಇಂದು ಶಿಕ್ಷಣ ಕ್ಷೇತ್ರ ಎತ್ತ ಸಾಗುತ್ತಿದೆ ಎನ್ನುವುದರ ಕುರಿತು ಪ್ರತಿ ನಾಗರಿಕರು ಅವಲೋಕಿಸಬೇಕಿದೆ. ಪ್ರಾಥಮಿಕ ಶಿಕ್ಷಕರು ಸಂಬಳಕ್ಕಾಗಿ ಕೆಲಸ ಮಾಡಿಲ್ಲ. ಸಮಾಜ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ ಎಂದ ಅವರು ಮಕ್ಕಳಲ್ಲಿ ಶಿಕ್ಷಕರನ್ನು ಪ್ರಶ್ನಿಸುವ ಮನೋಭಾವ ಹೆಚ್ಚಾದಾಗ ಶಿಕ್ಷಣ ಅಭಿವೃದ್ಧಿಯಾಗಲಿದೆ ಎಂದರು.

         ಕಾರ್ಯಕ್ರಮದ ಅಂಗವಾಗಿ ರಾಜ್ಯದ ಐಸಿಎಸ್‍ಇ ಶಾಲೆಗಳಲ್ಲಿ ಅತ್ಯುತ್ತಮ ಅಂಕ ಪಡೆದ 9 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

        ವೇದಿಕೆಯಲ್ಲಿ ವಿಶ್ರಾಂತ ಕುಲಪತಿ  ಮಲ್ಲೆಪುರಂ ಜಿ. ವೆಂಕಟೇಶ್, ಕವಿ, ಸಾಹಿತಿ ಡಾ. ಹೆಚ್.ಎಸ್. ವೆಂಕಟೇಶಮೂರ್ತಿ, ಶಾಸಕ ಆರ್. ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ವಿ. ಮತ್ತೂರ, ವಿಧಾನ ಪರಿಷತ್ ಸದಸ್ಯ ಆ. ದೇವೇಗೌಡ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯಲ್ಲಪ್ಪ ಗೌಡ, ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link