ಬೆಂಗಳೂರು
ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳ ನೇಮಕ ನೆನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ವರಿಷ್ಠರ ಮೇಲೆ ಒತ್ತಡ ಹೇರಲು ಸಚಿವ ಸ್ಥಾನ ವಂಚಿತ ಹಲವು ಶಾಸಕರು ಮುಂದಿನ ವಾರ ಸಭೆ ಸೇರಲು ತೀರ್ಮಾನಿಸಿದ್ದಾರೆ.
ಮೈತ್ರಿ ಸರ್ಕಾರದ ಮಂತ್ರಿ ಮಂಡಲ ವಿಸ್ತರಣೆ ಸಧ್ಯಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಮನಗಂಡಿರುವ ಅತೃಪ್ತರು ಇದೀಗ ಒತ್ತಡ ತಂತ್ರದ ಮೊರೆ ಹೋಗಿದ್ದಾರೆ.
ಅಸಮಾಧಾನಗೊಂಡಿರುವ ಶಾಸಕರು ಒಂದೆಡೆ ಸೇರಿದರೆ ವರಿಷ್ಠರಿಗೆ ಸ್ಪಷ್ಟ ಸಂದೇಶ ರವಾನೆಯಾಗಲಿದೆ. ಬೆಳಗಾವಿಯಲ್ಲಿ ಡಿ. 10 ರಂದು ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಅದಕ್ಕೂ ಮುನ್ನ ಸಂಪುಟ ವಿಸ್ತರಣೆಯಾಗಬೇಕು ಎಂದು ಈ ಶಾಸಕರು ಪಟ್ಟು ಹಿಡಿದಿದ್ದಾರೆ.
ಸಂಪುಟ ವಿಸ್ತರಣೆಗೆ ಇದೇ ಕೊನೆಯ ಅವಕಾಶವಿಲ್ಲ. ಜನವರಿ ನಂತರ ಎಲ್ಲಾ ಮುಖಂಡರು ಲೋಕಸಭಾ ಚುನಾವಣೆಯಲ್ಲಿ ಮಗ್ನರಾಗುತ್ತಾರೆ. ಹೀಗಾಗಿ ಈಗಲೇ ಒತ್ತಡ ಹೇರಿ ತಮ್ಮ ಉದ್ದೇಶ ಈಡೇರಿಸಿಕೊಳ್ಳುವುದು ಸೂಕ್ತ ಎನ್ನುವ ನಿಲುವಿನಲ್ಲಿದ್ದಾರೆ.
ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಪೂರ್ಣಗೊಂಡಿದೆ. ಈಗಲಾದರೂ ಸಂಪುಟ ವಿಸ್ತರಣೆ ಮಾಡದಿದ್ದರೆ ಹೇಗೆ ಎಂದು ಮಾಜಿ ಸಚಿವ ಹಾಗೂ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಸಹ ಅಸಮಾಧಾನ ಹೊರಹಾಕಿರುವುದು ಅತೃಪ್ತರಿಗೆ ಬಲ ತಂದುಕೊಟ್ಟಿದೆ.
ನನ್ನನ್ನು ಮಂತ್ರಿ ಮಾಡಿ ಎಂದು ನಾನು ಹೇಳುತ್ತಿಲ್ಲ. ಕಾಂಗ್ರೆಸ್ ಪಾಲಿನ ಆರು ಸ್ಥಾನ ಖಾಲಿ ಇವೆ. ಯಾರನ್ನು ಬೇಕಾದರೂ ಸಚಿವರನ್ನಾಗಿ ಮಾಡಿ ಆದರೆ ಸಂಪುಟ ವಿಸ್ತರಣೆ ಆಗಬೇಕು ಅಷ್ಟೇ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ಸಂಪುಟ ವಿಸ್ತರಣೆ ಆಗ, ಈಗ ಎಂದು ಹೇಳಿ ಸಂಪುಟ ವಿಸ್ತರಣೆಯನ್ನು ಮುಂದೂಡುವುದು ಸರಿಯಲ್ಲ. ಹಲವರು ಪಕ್ಷಕ್ಕಾಗಿ ದುಡಿದಿದ್ದಾರೆ. ಹಾಗಾಗಿ ಸಂಪುಟ ವಿಸ್ತರಣೆಯನ್ನು ಮುಂದೂಡದೆ ಆದಷ್ಟು ಶೀಘ್ರ ಸಂಪುಟ ವಿಸ್ತರಣೆ ಮಾಡುವುದು ಒಳ್ಳೆಯದು ಎಂದು ಅವರು ಹೇಳಿದರು.