ಪರಿಸರ ಸ್ನೇಹಿ ಗಣಿಗಾರಿಕೆ ನಿಯಮ ರೂಪಿಸಲಾಗುವುದು:ರಾಜಶೇಖರ್.ಬಿ. ಪಾಟೀಲ್

ಬೆಂಗಳೂರು

          ಕಲ್ಲು ಗಣಿಗಾರಿಕೆ ಹಾಗೂ ಗ್ರಾನೈಟ್ ಉದ್ದಿಮೆದಾರರ ಸಮಸ್ಯೆ ಪರಿಹಾರಕ್ಕಾಗಿ ಈಗಾಗಲೇ ಸರ್ಕಾರ ಸಮಿತಿಯೊಂದನ್ನು ರಚಿಸಿ, ಬೇರೆ ರಾಜ್ಯಗಳಲ್ಲಿನ ಉದ್ಯಮದ ಬಗ್ಗೆ ವರದಿ ಪಡೆದಿದ್ದು, ಶೀಘ್ರವೇ ಪರಿಶೀಲಿಸಿ ಉತ್ತಮ ಉದ್ಯಮ, ಪರಿಸರ ಸ್ನೇಹಿ ಹಾಗೂ ಸರ್ಕಾರದ ಬೊಕ್ಕಸಕ್ಕೆ ಉತ್ತಮ ಆದಾಯ ಗಳಿಸುವಂತಹ ಗಣಿಗಾರಿಕೆ ನಿಯಮ ರೂಪಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್.ಬಿ. ಪಾಟೀಲ್ ತಿಳಿಸಿದ್ದಾರೆ.

          ಅಲಂಕಾರಿಕ ಶಿಲ್ಪ, ಕಲ್ಲು ಗಣಿಗಾರಿಕೆ ಮತ್ತು ಸಂಸ್ಕರಣಾ ಉದ್ಯಮಕ್ಕೆ ಎದುರಾಗಿರುವ ಸಮಸ್ಯೆಗಳ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಮತ್ತು ಸಂವಾದದಲ್ಲಿ ಮಾತನಾಡಿದ ಅವರು, ಕಲ್ಲು ಗಣಿಗಾರಿಕೆ ಉದ್ಯಮಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜ.11 ರಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ನೇತೃತ್ವದಲ್ಲಿ ಸಮಿತಿ ಸಲ್ಲಿಸಿದ ವರದಿಯ ಕುರಿತು ಚರ್ಚಿಸಲಾಗುವುದು. ರಾಜಸ್ತಾನ ಮಾದರಿಯಲ್ಲಿ ನಿಯಮ ರೂಪಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ ಎಂದರು.

        ಚಾಮರಾಜ ನಗರದಲ್ಲಿ ಕಪ್ಪು ಶಿಲೆ, ಇಳಕಲ್ ನಲ್ಲಿ ಪಿಂಕ್ ಗ್ರಾನೈಟ್ ಹಾಗೂ ಶಿರಾದಲ್ಲಿ ಗ್ರೇ ಗ್ರಾನೈಟ್ ಉಳ್ಳ ಶಿಲೆಗಳು 1990ರಲ್ಲಿ ಪ್ರಸಿದ್ಧಿ ಪಡೆದಿದ್ದವು. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶಿಯ ಗ್ರಾನೈಟ್ ಗಳಿಗೆ ಬಹು ಬೇಡಿಕೆ ಇದ್ದು, ಗ್ರಾನೈಟ್ ಗಣಿಗಾರಿಕೆಯನ್ನು ರಾಜ್ಯದ ನಿಯಮದಂತೆ ಪರಿಸರ ಸ್ನೇಹಿ ಹಾಗೂ ವೈಜ್ಞಾನಿಕವಾಗಿ ಸಂಶೋಧಿಸಿ ಹೆಚ್ಚು ಉತ್ಪಾದನೆ ಮಾಡುವುದು ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

        ರಾಜ್ಯದಲ್ಲಿ ಅಲಂಕಾರಿಕ ಶಿಲೆಗೆ ಸಂಬಂಧಿಸಿದಂತೆ ಅಂದಾಜು 798 ಮಿಲಿಯನ್ ಕ್ಯೂಬಿಕ್ ಮೀಟರ್ ನಿಕ್ಷೇಪಗಳಿವೆ. ಒಟ್ಟು 450 ಅಲಂಕಾರಿಕ ಶಿಲೆ ಕಲ್ಲು ಗಣಿ ಗುತ್ತಿಗೆ ಮಂಜೂರು ಮಾಡಲಾಗಿದ್ದು, ಪ್ರಸ್ತುತ 242 ಕಲ್ಲು ಗಣಿ ಗುತ್ತಿಗೆಗಳು ಚಾಲ್ತಿಯಲ್ಲಿವೆ. ಗ್ರಾನೈಟ್ ಮತ್ತು ಕಲ್ಲು ಗಣಿಗಾರಿಕೆ ನಿಯಂತ್ರಿಸಲು ರಾಜ್ಯದಲ್ಲಿ ಕೆ.ಎಂ.ಎಂ.ಸಿ.ಆರ್ ನಿಯಮ ಜಾರಿಯಲ್ಲಿದ್ದು, ಇದರನ್ವಯ ಸರ್ಕಾರಿ ಹಾಗೂ ಪಟ್ಟಾ ಜಮೀನುಗಳಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

         ಭಾರತದ ಗಣಿ ಸಚಿವಾಲಯದ ನಿರ್ದೇಶಕರಾದ ಡಾ.ವೀಣಾ ಕುಮಾರಿ ದೇರ್ಮಾಳ್, ಚೀನಾ ದೇಶದ ನಂತರ ಅತಿದೊಡ್ಡ ಗಣಿಗಾರಿಕೆ ನಡೆಸುತ್ತಿರುವ ದೇಶ ಭಾರತ. ಸುಮಾರು 200 ವಿವಿಧ ಗ್ರಾನೈಟ್ ಗಳು ದೇಶದಲ್ಲಿ ದೊರೆಯುತ್ತವೆ. ಗ್ರಾನೈಟ್ ಸಂರಕ್ಷಣೆ ಮತ್ತು ಅಭಿವೃದ್ಧಿ ನಿಯಮಗಳನ್ನು1999ರಲ್ಲಿ ರೂಪಿಸಲಾಯಿತು. ಸೆ.2018ರಿಂದ ಜಿಡಿಸಿ ಉಪ ಸಮಿತಿ ರಚಿಸಿದ್ದು, ಸಮಿತಿ ಸಲಹೆ ಸೂಚನೆಯಂತೆ ಗಣಿ ಉದ್ಯಮದ ಸಮಸ್ಯೆಗಳನ್ನು ಪರಿಗಣಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಪಸಮಿತಿ ಮಾಡಿದ ಶಿಫಾರಸ್ಸುಗಳನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಅದರಂತೆ ನಿಯಮಗಳಲ್ಲಿ ತಿದ್ದುಪಡಿ ತರಲಾಗುವುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

          ಈ ಸಂದರ್ಭದಲ್ಲಿ ಗುಜರಾತ್ ಗಣಿ ಹಾಗೂ ಗ್ರಾನೈಟ್ ಉದ್ಯಮಗಳ ಉಪಕಾರ್ಯದರ್ಶಿ ಡಿ.ಜಿ.ಚೌಧರಿ, ವಿಚಾರ ಸಂಕಿರಣ ಮತ್ತು ಸಮ್ಮೇಳನದ ಉಪಸಮಿತಿ ಅಧ್ಯಕ್ಷ ಗುರು ಶಾಸ್ತ್ರಿನಾಥ್, ಐಎಎಸ್ ರಾಜೇಂದ್ರ ಕುಮಾರ್ ಕಟಾರಿಯಾ, ಸಂದೀಪ್ ಕುಮಾರ್ ಗುಪ್ತಾ, ವಿ.ಎಸ್.ಪಾಂಡೆ ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link