ಬ್ಯಾಡಗಿ:
‘ಕನ್ನಡದ ತೇರನ್ನು ಏಳೆಯಲು ನೀವೂ ಬನ್ನಿ ನಿಮ್ಮವರನ್ನೂ ಕರೆ ತನ್ನಿ’ ಎಂಬ ಘೋಷ ವಾಕ್ಯದೊಂದಿಗೆ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಸಮ್ಮೇಳನದ ಸಂಚಾಲಕ ಬಸವರಾಜ ಛತ್ರದ 11 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಬಿಡುಗಡೆಗೊಳಿಸಿದರು.
ಪಟ್ಟಣದಲ್ಲಿ ಬರುವ ಜ.19 ಹಾಗೂ 20 ಎರಡು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಗಳನ್ನು ಸ್ಥಳೀಯ ತಾಲ್ಲೂಕ ಪಂಚಾಯತ್ ಆವರಣದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ಬಳಿಕ ಮಾತನಾಡಿದ ಬಸವರಾಜ ಛತ್ರದ, ಜಿಲ್ಲೆಯಾದ ಬಳಿಕ ತಾಲೂಕಿನಲ್ಲಿ ಮೊದಲ ಸಮ್ಮೇಳನ ನಡೆಯುತ್ತಿರುವುದು ಪಟ್ಟಣಕ್ಕೆ ಹೆಮ್ಮೆಯ ವಿಷಯ ಕನ್ನಡದ ಮನಸ್ಸುಗಳು ಒಂದಾಗಿ ಸೇರುವಂತಹ ಅವಕಾಶ ಒದಗಿಸಿಕೊಟ್ಟ ಎಲ್ಲರಿಗೂ ಧನ್ಯವಾದಗಳು, ಅಲ್ಲದೇ ಎಲ್ಲರೂ ಸೇರಿದಾಗ ಮಾತ್ರ ಕನ್ನಡದ ಜಾತ್ರೆಗೊಂದು ಅರ್ಥ ಬರಲಿದೆ ಎಂದರು.
ತಪ್ಪಿದ್ದರೇ ಕ್ಷಮಿಸಿ:ಪಟ್ಟಣದಲ್ಲಿ ನಡೆಯುತ್ತಿರುವ ಇದು ಮೊದಲ ಸಮ್ಮೇಳನವಾಗಿದ್ದರಿಂದ ಆಯೋಜಕರಲ್ಲಿಯೂ ಅನುಭವದ ಕೊರತೆಯಿದೆ, ಆದಾಗ್ಯೂ ಕೂಡ ಆಮಂತ್ರಣ ಪತ್ರಿಕೆಯಲ್ಲಿನ ಮುದ್ರಣ ದೋಷ ಅಥವಾ ಹೆಸರಿನ ದೋಷಗಳನ್ನು ವಿವಾದಕ್ಕೆ ಎಳೆಯದೇ ಪ್ರತಿಯೊಬ್ಬರೂ ಆಗಿರುವಂತಹ ತಪ್ಪುಗಳನ್ನು ಮನ್ನಿಸಿ ಇದು ಕನ್ನಡಿಗರ ಹೆಮ್ಮೆಯ ಹಬ್ಬವೆಂದು ಭಾವಿಸುವಂತೆ ಮನವಿ ಮಾಡಿದರು.
ಪ್ರತಿಯೊಬ್ಬರಿಗೂ ತಲುಪಿಸಲು ಸಾಧ್ಯವಾಗುತ್ತಿಲ್ಲ: ಜಿಲ್ಲಾಧ್ಯಕ್ಷ ಲಿಂಗಯ್ಯ ಮಾತನಾಡಿ, ಆಮಂತ್ರಣ ಪತ್ರಿಕೆಗಳನ್ನು ಜಿಲ್ಲೆಯಲ್ಲಿಒರುವ ಸುಮಾರು 10 ಸಾವಿರಕ್ಕೂ ಹೆಚ್ಚು ಆಜೀವ ಸದಸ್ಯರಿಗೆ ತಲುಪಿಸುವ ವಿಚಾರವನ್ನು ಕೆಲವರು ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಖರ್ಚಿನ ದೃಷ್ಟಿಯಿಂದ ಇದು ಸಮ್ಮೇಳನದ ಆಯೋಜಕರಿಗೆ ಸುಮಾರು 1 ಲಕ್ಷ ರೂ. ಹೊರೆಯಾಗುತ್ತಿರುವದನ್ನು ಮನಗಂಡು ಪ್ರತಿ ತಾಲ್ಲೂಕ ಘಟಕೆಗಳಿಗೆ 300 ಆಮಂತ್ರಣ ಪತ್ರಿಕೆಗಳನ್ನು ನೀಡಲಾಗುತ್ತಿದೆ, ಇನ್ನುಳಿದಂತೆ ಪತ್ರಿಕಾ ಮಾದ್ಯಮಗಳು ಮೂಲಕ ಎಲ್ಲರನ್ನೂ ಸಮ್ಮೇಳನಕ್ಕೆ ಸ್ವಾಗತಿಸುತಿದ್ದು, ಸದಸ್ಯರು ಇದನ್ನು ಅನ್ಯತಾ ಭಾವಿಸದಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ತಾಲೂಕಾಧ್ಯಕ್ಷ ಬಿ.ಎಂ.ಜಗಾಪೂರ, ಎಸ್.ಎನ್.ಯಮನಕ್ಕನವರ, ಸುರೇಶ ಆಸಾದಿ, ವಿರೇಂದ್ರ ಶೆಟ್ಟರ, ಐ.ಎಂ.ಪಠಾಣ, ಎಸ್.ಎಸ್.ಅಜಗಣ್ಣವರ, ರಾಜಶೇಖರ ಹೊಸಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಐ.ಬಿ.ಮುದಿಗೌಡ್ರ ಸ್ವಾಗತಿಸಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ