ಪಾರಂಪರಿಕ ಗುಡಿಕೈಗಾರಿಕೆಗೆ ಪ್ರೋತ್ಸಾಹಿಸಿ : ಡಾ.ಎಂ.ವಿ.ವೆಂಕಟೇಶ್

ಹಾವೇರಿ

       ನಮ್ಮ ಪರಂಪರೆಯಿಂದ ಬಂದಿರುವ ದೇಸಿ ಉದ್ಯಮವಾದ ಗುಡಿಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು. ದೇಸಿ ಉದ್ಯಮವನ್ನು ಬೆಳೆಸಬೇಕೆಂದು ಗ್ರಾಹಕರಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಕರೆ ನೀಡಿದರು.

       ಗುರುವಾರ ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಇವರ ಸಹಯೋಗದಲ್ಲಿ ಆಯೋಜಿಸಲಾದ ಮೂರು ದಿನಗಳ ಜಿಲ್ಲಾ ಮಟ್ಟದ ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

         ದೇಶದ ಅಭಿವೃದ್ಧಿಗೆ ಸಣ್ಣ ಕೈಗಾರಿಕೆ ಪಾತ್ರ ಪ್ರಮುಖವಾಗಿವೆ. ಗುಡಿ ಕೈಗಾರಿಕೆ, ಕರಕುಶಲ ಉದ್ಯಮದ ಬೆಳವಣಿಗೆಗೆ ನಾವೆಲ್ಲ ಸಹಕರಿಸಬೇಕಾಗಿದೆ. ಪಾರಂಪರಿಕವಾಗಿ ಬಂದಂತಹ ಗುಡಿ ಕೈಗಾರಿಕೆ ಪ್ರಸಕ್ತ ಜಾಗತೀಕ ಸನ್ನಿವೇಶದಲ್ಲಿ ನಶಿಸಿ ಹೋಗುತ್ತಿವೆ. ಇಂತಹ ಉದ್ಯಮವನ್ನು ಪ್ರೋತ್ಸಾಹಿಸಿ ಬೆಳೆಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಗುಡಿ ಕೈಗಾರಿಕೆಗಳ ಉತ್ಪನ್ನಗಳ ಖರೀದಿಗೆ ನಾವೆಲ್ಲ ಮುಂದಾಗಬೇಕು ಎಂದು ಹೇಳಿದರು.

         ಸಣ್ಣ ಕೈಗಾರಿಕೆಗಳನ್ನು ಗುಡಿ ಕೈಗಾರಿಕೆಗಳನ್ನು , ಕರಕುಶಲ ಉದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಉದ್ಯಮದಲ್ಲಿ ತೊಡಗಿದ ಸಾವಿರಾರು ಜನರಿಗೆ ಉದ್ಯೋಗ ದೊರಕಿಸಲು ಇವರು ಉತ್ಪಾದನೆ ಮಾಡಿದ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸಲು ಮೂರುದಿನಗಳ ಕಾಲ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಸರ್ಕಾರದ ವತಿಯಿಂದ ಆಯೋಜಿಸಲಾಗಿದೆ. ಇಲ್ಲಿ ಪ್ರದರ್ಶನಗೊಂಡ ಪ್ರತಿ ವಸ್ತುವೂ ಅತ್ಯಂತ ಗುಣಮಟ್ಟದಿಂದ ಕೂಡಿವೆ. ಈ ವಸ್ತುಗಳನ್ನು ಖರೀದಿಸುವ ಮೂಲಕ ಸಣ್ಣ ಉದ್ಯಮವನ್ನು ಬೆಳೆಸುವಂತೆ ಮನವಿ ಮಾಡಿಕೊಂಡರು.

        ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ವಿರುಪಾಕ್ಷಪ್ಪ ಕಡ್ಲಿ, ಸಿದ್ಧರಾಜ ಕಲಕೋಟಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ಧರಾಜು ಅವರು ಮಾತನಾಡಿದರು. ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗದ ಉಪನಿರ್ದೇಶಕ ಎ.ಕೆ.ತಿಮ್ಮಾಪೂರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಗಮನ ಸೆಳೆದ ಮಳಿಗೆಗಳು: ಜಿಲ್ಲಾ ಮಟ್ಟದ ಕೈಗಾರಿಕಾ ವಸ್ತುಪ್ರದರ್ಶನದಲ್ಲಿ 40 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ವಸ್ತು ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಉದ್ಘಾಟಿಸಿ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಉತ್ಪನ್ನಗಳನ್ನು ಪರಿಶೀಲಿಸಿದರು.

        ಮೈಸೂರು, ಶಿವಮೊಗ್ಗ, ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ಗದಗ ಸೇರಿದಂತೆ ರಾಜ್ಯ ನಾನಾ ಭಾಗಗಳಿಂದ ಆಗಮಿಸಿರುವ ಗುಡಿ ಕೈಗಾರಿಕೆ ಉತ್ಪನ್ನಗಳಾದ ಇಳಕಲ್ ಸೀರೆ, ಆಟಿಕೆ ಸಾಮಾನುಗಳು, ಕಂಬಳಿ ಉತ್ನನ್ನಗಳು, ಉಣ್ಣೆ ಉತ್ಪನ್ನಗಳು, ಯಂತ್ರೋಪಕರಣ, ಕೃಷಿ ಉತ್ಪನ್ನಗಳು, ಸಿಹಿ ತಿಂಡಿ ಪದಾರ್ಥ ಸೇರಿದಂತೆ ವಿವಿಧ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link