ಕಾನೂನು ಸುವ್ಯವಸ್ಥೆ ಪಾಲನೆಗೆ ಆದ್ಯತೆ :ಡಾ. ಕೆ.ವಂಶಿಕೃಷ್ಣ

ತುಮಕೂರು

       ಅಪರಾಧ ಪ್ರಕರಣಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದ್ದು, ಮುಂದಿನ ವಾರ ರೌಡಿಶೀಟರ್‍ಗಳ ಪೆರೇಡ್ ಮಾಡಿ ಎಚ್ಚರಿಕೆ ನೀಡಲಾಗುವುದು, ಅವರ ಚಟುವಟಿಕೆಗಳ ಬಗ್ಗೆ ನಿಗಾವಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ವಂಶಿಕೃಷ್ಣ ತಿಳಿಸಿದರು.

       ಈ ತಿಂಗಳ 10ರಂದು ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಅವರು, ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗೆ ಆದ್ಯತೆ ನೀಡಲಾಗುವುದು ಎಂದ ಅವರು, ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳ ತಡೆಗೆ ಪರಿಣಿತ ಪೊಲೀಸರ ತಂಡ ರಚಿಸುವ ಉದ್ದೇಶವಿದ್ದು, ಇದಕ್ಕಾಗಿ ತಂಡ ಮಾಡಿ ಹೈದರಾಬಾದ್‍ನಲ್ಲಿ ವಿಶೇಷ ತರಬೇತಿ ಕೊಡಿಸುವ ಉದ್ದೇಶವಿದೆ ಎಂದರು.

       ಅಧಿಕಾರ ವಹಿಸಿಕೊಂಡ ಮರುದಿನವೇ ಜಿಲ್ಲೆಯ ಎಲ್ಲಾ ಠಾಣೆಗಳ ಸಬ್‍ಇನ್‍ಸ್ಪೆಕ್ಟರ್‍ಗಳ ಸಭೆ ನಡೆಸಿ ಠಾಣೆಗಳಲ್ಲಿ ಬಾಕಿ ಇರುವ ಪ್ರಕರಣಗಳ ಬಗ್ಗೆ ಚರ್ಚೆ ಮಾಡಿದ್ದಾಗಿ ಹೇಳಿದ ಎಸ್ಪಿ ವಂಶಿಕೃಷ್ಣ, ತುಮಕೂರಿನ ಪ್ರಮುಖ ರಸ್ತೆಗಳಲ್ಲಿ ತಾವು ಬೈಕ್‍ನಲ್ಲಿ ಸಂಚಾರ ಮಾಡಿ ನಗರದ ಟ್ರಾಫಿಕ್ ಸಮಸ್ಯೆ ತಿಳಿದಿದ್ದು, ಸುಗಮ ಸಂಚಾರ ಕುರಿತಂತೆ ಆರ್‍ಟಿಓ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಸವಾರರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಾರೆ. ಕೆಲವರು ದ್ವಿಚಕ್ರ ವಾಹನದ ಸೈಲೆನ್ಸರ್ ಹಾಗೂ ಹಾರ್ನ್‍ಗಳಿಂದ ಶಬ್ದ ಮಾಲಿನ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಕಠಿಣಕ್ರಮ ತೆಗೆದುಕೊಂಡು ಸಂಚಾರ ವ್ಯವಸ್ಥೆ ನಿಯಂತ್ರಿಸಬೇಕಾಗಿದೆ ಎಂದರು.

ನೂತನ ಗಸ್ತು ವ್ಯವಸ್ಥೆ:

       ನಗರದಲ್ಲಿ ಈಗಾಗಲೇ ರಾತ್ರಿ ಗಸ್ತು ವ್ಯವಸ್ಥೆ ಜಾರಿಯಲ್ಲಿದ್ದು, ಅದನ್ನು ಮತ್ತಷ್ಟು ಪ್ರಬಲಗೊಳಿಸಲಾಗುವುದು. ಕಾನ್‍ಸ್ಟೆಬಲ್‍ಗಳಿಂದ ಅಧಿಕಾರಿಗಳವರೆಗೆ ಗಸ್ತು ಕಾರ್ಯಕ್ಕೆ ನಿಯೋಜಿಸಲಾಗುವುದು. ಆಯಾ ವಾರ್ಡ್‍ಗಳಲ್ಲಿನ ಪ್ರಮುಖರೊಂದಿಗೆ ಸದಾ ಸಂಪರ್ಕದಲ್ಲಿರುವ ಗಸ್ತು ಸಿಬ್ಬಂದಿ, ಅಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ಇದರಿಂದ ಅನಧಿಕೃತ ಚಟುವಟಿಕೆಗಳನ್ನು ತಡೆಯಲು ಅನುಕೂಲವಾಗುತ್ತದೆ ಎಂದರು.

ಸೈಬರ್ ಕ್ರೈಮ್ ಬಗ್ಗೆ ತರಬೇತಿ:

        ಇಂದಿನ ದಿನಗಳಲ್ಲಿ ಕಳ್ಳತನ, ದರೋಡೆ, ಕೊಲೆಗಳಿಗಿಂತ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಅವುಗಳನ್ನು ತಡೆಯಲು ಸೂಕ್ತ ತರಬೇತಿ ಅವಶ್ಯಕತೆಯಿದೆ. ಇದಕ್ಕಾಗಿ ಕೆಲ ತಂಡಗಳನ್ನು ಮಾಡಿ ಅವರಿಗೆ ನಿಗದಿತ ವೇಳೆಯಲ್ಲಿ ಹೈದರಾಬಾದ್‍ನಲ್ಲಿ ವಿಶೇಷ ತರಬೇತಿ ಕೊಡಿಸಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 42 ಪೊಲೀಸ್ ಠಾಣೆಗಳಿವೆ. ರಾಜ್ಯದಲ್ಲಿ ಅತಿ ಹೆಚ್ಚು ಪೊಲೀಸ್ ಠಾಣೆಗಳನ್ನು ಹೊಂದಿರುವ ಜಿಲ್ಲೆ ತುಮಕೂರು. ಹಾಗಾಗಿ ಇಲ್ಲಿಂದಲೇ ಪೊಲೀಸರಿಗೆ ಸೈಬರ್ ಕ್ರೈಮ್ ತಡೆಯುವುದರ ಬಗ್ಗೆ ತರಬೇತಿ ದೊರಕಿಸಿಕೊಡಲಾಗುವುದು ಎಂದು ಎಸ್ಪಿ ಹೇಳಿದರು.

ವಿವಿಧ ಅಕ್ರಮ ಚಟುವಟಿಕೆಗಳಿಗೆ ಸೂಕ್ತ ಕ್ರಮ:

        ನಗರದ ಕೆಲ ಕಡೆಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ, 18 ವರ್ಷಕ್ಕಿಂತ ಕಿರಿ ವಯಸ್ಸಿನವರು ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು, ಮಟ್ಕಾ, ಜೂಜಾಟ, ಹೆಚ್ಚಾದ ಆಟೋಗಳ ಹಾವಳಿ ಸೇರಿದಂತೆ ಮುಂತಾದ ಅಕ್ರಮ ಚಟುವಟಿಕೆಗಳ ಬಗ್ಗೆ ಗಮನಹರಿಸಿ ಅದಕ್ಕಾಗಿಯೇ ಪೊಲೀಸ್ ತಂಡವನ್ನು ರಚನೆ ಮಾಡಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

 

Recent Articles

spot_img

Related Stories

Share via
Copy link