ಹಾನಗಲ್ಲ
ತಾಲೂಕಿನಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮೂರು ಕುಟುಂಬಗಳಿಗೆ ಸರ್ಕಾರ ಬಿಡುಗಡೆಗೊಳಿಸಿದ ತಲಾ 5 ಲಕ್ಷರೂಗಳ ಚಕ್‍ನ್ನು ಶಾಸಕ ಸಿ.ಎಂ.ಉದಾಸಿ ರೈತರ ಕುಟುಂಬಗಳವರಿಗೆ ಹಸ್ತಾಂತರಿಸಿದರು.
ಶನಿವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಫಲಾನುಭವಿಗಳಿಗೆ ಚಕ್ ವಿತರಿಸಲಾಯಿತು. ತಾಲೂಕಿನ ಮಾರನಬೀಡ ಗ್ರಾಮದ ರೈತ ಮಲ್ಲಪ್ಪ ಶೇಕಪ್ಪ ಪೂಜಾರ ಕಳೆದ ವರ್ಷ ಎಪ್ರಿಲ್-30ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ಗ್ರಾಮದ ಇನ್ನೋರ್ವ ರೈತ ಚಂದ್ರಪ್ಪ ಯಶವಂತಪ್ಪ ಕರೆಯಪ್ಪನವರ ಮೇ.5 ರಂದು ವಿಷ ಸೇವಿಸಿ ಸಾವಿಗೆ ಶರಣಾಗಿದ್ದರು. ಹೋತನಹಳ್ಳಿ ಗ್ರಾಮದ ಶಿವಪುತ್ರಪ್ಪ ಹನುಮಂತಪ್ಪ ಶಡಗರವಳ್ಳಿ ಕಳೆದ ಜನೆವರಿ 22 ರಂದು ವಿಷ ಸೇವಿಸಿ ಸಾವನ್ನಪ್ಪಿದ್ದರು. ಈ ಎಲ್ಲ ರೈತರ ಕುಟುಂಬಗಳವರಿಗೆ ರಾಜ್ಯ ಸರ್ಕಾರದ `ರೈತ ಆತ್ಮಹತ್ಯೆ ಪರಿಹಾರ ಯೋಜನೆಯಡಿ’ ತಲಾ 5 ಲಕ್ಷರೂಗಳ ಪರಿಹಾರ ಮಂಜೂರಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಎಂ.ಉದಾಸಿ, ಪರಿಹಾರ ಹಣ ಬಿಡುಗಡೆಗೆ ಯಾವುದೇ ಮಧ್ಯವರ್ತಿಗಳೂ ಪ್ರಯತ್ನವಿರುವುದಿಲ್ಲ. ಈ ಹಣ ಬಿಡುಗಡೆಗಾಗಿ ಯಾರಿಗೂ ಹಣ ನೀಡಬಾರದು. ಯಾರಾದರೂ ಹಣ ನೀಡುವಂತೆ ಕೇಳಿದಲ್ಲಿ ತಮ್ಮನ್ನು ಸಂಪರ್ಕಿಸಬೇಕೆಂದು ಫಲಾನುಭವಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ಗಂಗಪ್ಪ, ಸಹಾಯಕ ಕೃಷಿ ನಿರ್ದೇಶಕ ಸಂಗಮೇಶ ಹಕ್ಲಪ್ಪನವರ, ರೈತ ಸಂಘದ ಮಹಲಿಂಗಪ್ಪ ಅಕ್ಕಿವಳ್ಳಿ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
