ವಿದ್ಯಾರ್ಥಿಗಳ ಪರಿಶ್ರಮವೂ ಮುಖ್ಯ : ಶೋಭಾ

ಚಿತ್ರದುರ್ಗ:

        ಒಂದೊಂದು ನಿಮಿಷವೂ ಮುಖ್ಯವಾಗಿರುವುದರಿಂದ ಓದಿನ ಕಡೆ ಹೆಚ್ಚಿನ ಗಮನ ಕೊಡಿ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಸಿ.ಶೋಭ ವಿದ್ಯಾರ್ಥಿಗಳಿಗೆ ತಿಳಿಸಿದರು.

       ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕ್ರೀಡಾ, ಸಾಂಸ್ಕತಿಕ, ರೋವರ್ಸ್ ಹಾಗೂ ಎನ್.ಎಸ್.ಎಸ್.ಘಟಕಗಳ ಸಮಾರೋಪ ಸಮಾರಂಭದಲ್ಲಿ ರಾಜ್ಯ ರಾಷ್ಟ್ರಮಟ್ಟದ ಗುಡ್ಡಗಾಡು ಓಟದಲ್ಲಿ ಭಾಗವಹಿಸಿ ಜಯಶಾಲಿಯಾಗಿರುವ ವಿದ್ಯಾರ್ಥಿ ತಿಪ್ಪೇಶ್‍ಗೆ ಬಹುಮಾನ ವಿತರಿಸಿ ಮಾತನಾಡಿದರು.

      ದ್ವಿತೀಯ ಪಿ.ಯು.ಸಿ.ಫಲಿತಾಂಶದಲ್ಲಿ ಜಿಲ್ಲೆಗೆ ಕೀರ್ತಿ ಬರಬೇಕಾದರೆ ನಿಮ್ಮಗಳ ಶ್ರಮ ಅಡಗಿದೆ. ಉಪನ್ಯಾಸಕರು ಕಾಲ ಕಾಲಕ್ಕೆ ತಕ್ಕಂತೆ ಪಾಠಗಳನ್ನು ಬೋಧಿಸಿ ಅಗತ್ಯ ಮಾರ್ಗದರ್ಶನ ನೀಡಬೇಕು. ರಾಜ್ಯದಲ್ಲಿ ನಮ್ಮ ಜಿಲ್ಲೆ ಕಳಪೆ ಫಲಿತಾಂಶ ಪಡೆದುಕೊಳ್ಳುವ ಬದಲು ರ್ಯಾಂಕಿಂಗ್ ಮಟ್ಟದಲ್ಲಿ ಸುಧಾರಣೆಯಾಗಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

      ಬೃಹನ್ಮಠ ಬಸವತತ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಸಿ.ವಿ.ಸಾಲಿಮಠ ಮಾತನಾಡಿ ಶಿಕ್ಷಣ ಅಂಕಗಳಿಗಷ್ಟೆ ಸೀಮಿತವಾಗುವ ಬದಲು ಸಾಮಾಜಿಕ ಸಾಮರಸ್ಯದ ಬದುಕಿನ ಹೊಣೆ ಹೊರುವ ಜವಾಬ್ದಾರಿ ಕೂಡ ವಿದ್ಯಾರ್ಥಿಗಳಿಗೆ ಅಷ್ಟೆ ಮುಖ್ಯ. ಸಮಾಜಕ್ಕೆ ಉಪಕಾರಿಯಾಗಬೇಕೆ ವಿನಃ ಅಪಕಾರಿಯಾಗಬಾರದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

        ಉನ್ನತ ಶಿಕ್ಷಣ ಪಡೆದು ದೊಡ್ಡ ಹುದ್ದೆಗಳಿಗೆ ಹೋದಾಗ ನಿಮ್ಮ ತಂದೆ-ತಾಯಿ, ಗುರು, ಹಿರಿಯರು, ಓದಿದ ಶಾಲಾ-ಕಾಲೇಜನ್ನು ಮರೆಯಬೇಡಿ. ಯಾರು ವೃತ್ತಿಯನ್ನು ಗೌರವಿಸುತ್ತಾರೋ ಅವರು ಯಾರಿಗೂ ತಲೆಬಾಗುವುದು ಬೇಕಿಲ್ಲ. ವೃತ್ತಿಯನ್ನು ಯಾರು ಗೌರವಿಸುವುದಿಲ್ಲವೋ ಅವರು ಎಲ್ಲರಿಗೂ ತಲೆ ಬಾಗಬೇಕಾಗುತ್ತದೆಂದು ಕ್ಷಿಪಣಿ ತಜ್ಞ, ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್‍ಕಲಾಂ ಹೇಳಿದ್ದರು. ಸರ್ ಎಂ.ವಿಶ್ವೇಶ್ವರಯ್ಯ, ಕಲ್ಪನಾಚಾವ್ಲ ಇಂತಹವರುಗಳನ್ನು ವಿದ್ಯಾರ್ಥಿ ಜೀವನದಲ್ಲಿ ಆದರ್ಶವಾಗಿಟ್ಟುಕೊಳ್ಳಿ. ಅಧ್ಯಾಪಕರಿಗೆ ನಿಜವಾದ ಪ್ರಪಂಚವೆಂದರೆ ವಿದ್ಯಾರ್ಥಿಗಳು ಎಂದು ಮನಬಿಚ್ಚಿ ನುಡಿದರು.

        ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಮಾತನಾಡುತ್ತ ನಿಮ್ಮಲ್ಲಿರುವ ಪ್ರತಿಭೆಯನ್ನು ನೀವೆ ಗುರುತಿಸಿಕೊಂಡು ವಿದ್ಯಾರ್ಥಿ ಜೀವನದಲ್ಲಿ ಏನಾದರೂ ಸಾಧನೆ ಮಾಡಿ. ಕಾರ್ಮಿಕರ ಮಕ್ಕಳು ಒಂದನೆ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ಎರಡು ಸಾವಿರದಿಂದ ಐವತ್ತು ಸಾವಿರ ರೂ.ಗಳವರೆಗೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಹಣದ ನೆರವು ದೊರಕಲಿದೆ. ನಿಮ್ಮ ಅಪ್ಪ ಅಮ್ಮಂದಿರು ಕಾರ್ಮಿಕರಾಗಿದ್ದರೆ ಕಡ್ಡಾಯವಾಗಿ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಹೆಸರುಗಳನ್ನು ನೊಂದಾಯಿಸಿಕೊಳ್ಳುವಂತೆ ಹೇಳಿ ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.

       ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯರಾದ ಎಸ್.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಮಾಜಿ ಸದಸ್ಯ ಪ್ರಸನ್ನಕುಮಾರ್, ಸಮಾಜ ಸೇವಕ ಸೈಯದ್ ಅಬಿಲ್ ಷಾಹುಸೇನ್, ನಿವೃತ್ತ ಪ್ರಾಚಾರ್ಯರಾದ ಲಕ್ಷ್ಮಿನಾರಾಯಣ ವೇದಿಕೆಯಲ್ಲಿದ್ದರು.ಕಾಲ್ಕೆರೆ ಚಂದ್ರಪ್ಪ ಜಾನಪದ ಹಾಡುಗಳನ್ನು ಹೇಳಿ ರಂಜಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap