ಕೋಟೆನಗರಿಯಲ್ಲಿ ಮಹಿಳೆಯರ ರಣಕಹಳೆ

ಚಿತ್ರದುರ್ಗ:

       ದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಗಾಂಧಿಗೆ ಸಂಪೂರ್ಣವಾಗಿ ಮದ್ಯಪಾನ ನಿಷೇಧಿಸಬೇಕೆಂಬ ಆಸೆಯಿತ್ತು. ಸಂವಿಧಾನದ ಆಶಯವೂ ಕೂಡ ಅದೆ ಆಗಿತ್ತು. ಆದರೆ ದೇಶವನ್ನಾಳುವ ನೇತಾರರು ಗಾಂಧಿಜಿ ಫೋಟೋ ನೇತುಹಾಕಿಕೊಂಡು ಸಂವಿಧಾನವನ್ನು ತಲೆ ಮೇಲೆ ಹೊತ್ತು ಮದ್ಯಪಾನದಿಂದ ಬರುವ ಆದಾಯದಿಂದಲೆ ಸರ್ಕಾರಕ್ಕೆ ಲಾಭ ಎಂದು ಹೇಳುತ್ತ ಗಾಂಧಿ ಕನಸಿಗೆ ಬೆಂಕಿ ಇಡುತ್ತಿದ್ದಾರೆ. ಸಂವಿಧಾನದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿದ್ದಾರೆಂದು ಹೊಸದುರ್ಗ ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯಸ್ವಾಮಿಗಳು ಜನಪ್ರತಿನಿಧಿಗಳ ವಿರುದ್ದ ಕಿಡಿಕಾರಿದರು.

        ಕರ್ನಾಟಕದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧಿಸುವಂತೆ ಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರು ಚಿತ್ರದುರ್ಗದಿಂದ ಬೆಂಗಳೂರಿಗೆ ಹೊರಟಿರುವ ಪಾದಯಾತ್ರೆಗೆ ಶನಿವಾರ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಚಾಲನೆ ನೀಡಿ ಮಾತನಾಡಿದರು.

     ದಪ್ಪ ಚರ್ಮವಿರುದ ರಾಜ್ಯ ಮತ್ತು ಕೇಂದ್ರ ಸರ್ಕಾರ ಕಿವುಡು, ಕುರುಡಾಗಿದೆ, ಹಾಗಾಗಿ ಮಹಿಳೆಯರ ಕಷ್ಟ ಗೊತ್ತಾಗುತ್ತಿಲ್ಲ. ಏನೇನೋ ಭರವಸೆಗಳನ್ನು ನೀಡುವ ಬದಲು ರಾಜ್ಯದ ಜನರಿಗೆ ದುಡಿದು ತಿನ್ನಲು ಮೊದಲು ಅವಕಾಶ ಮಾಡಿಕೊಟ್ಟು ನಂತರ ನಿಮ್ಮ ಭರವಸೆಗಳನ್ನು ಹಿಂದಕ್ಕೆ ಪಡೆಯಿರಿ. ವಿಧವೆಯರಿಗೆ ಪಿಂಚಣಿ ನೀಡುತ್ತೇವೆ, ವೃದ್ದರಿಗೆ ವೃದ್ದಾಪ್ಯ ವೇತನ ಕೊಡುತ್ತೇವೆ, ಕಡುಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತೇವೆಂದು ಸರ್ಕಾರ ಹೇಳುವುದು ಯಾವ ನೀತಿ? ಸ್ವಾಭಿಮಾನಿಗಳಾಗಿ ಬದುಕಬೇಕಾದರೆ ಸರ್ಕಾರಗಳು ನೀಡುವ ಪುಕ್ಕಟೆ ಯೋಜನೆಗಳ ವಿರುದ್ದ ಬಂಡಾಯವೆದ್ದು, ಹೋರಾಟದ ಗುಣ ರೂಢಿಸಿಕೊಂಡು ಚುನಾವಣೆಯಲ್ಲಿ ಅಭ್ಯರ್ಥಿಗಳು ತೋರುವ ಆಸೆ ಆಮಿಷಗಳಿಗೆ ಬಲಿಯಾಗದೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಯೋಗ್ಯರನ್ನು ಆಯ್ಕೆ ಮಾಡಿ ಎಂದು ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಮಹಿಳೆಯರನ್ನು ಎಚ್ಚರಿಸಿದರು.

        ರಾಯಚೂರು, ಗುಲ್ಬರ್ಗ, ಬೀದರ್‍ನಿಂದ ಸಾವಿರಾರು ಮಹಿಳೆಯರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವುದು ಸುಲಭವಲ್ಲ. ಇದು ಹೃದಯದ ಕಲೆ, ನೋವಿನ ಕಲೆ, ನಿಮ್ಮ ಹೋರಾಟ ಯಶಸ್ವಿಯಾಗಲಿ. ನಿಮ್ಮ ಜೊತೆ ಸದಾ ನಾವುಗಳಿರುತ್ತೇವೆ ಎಂದು ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಿದರು.

      ಸಿರಿಗೆರೆಯ ಜಗದ್ಗುರುಗಳು ಹಿಂದೆ ಮದ್ಯಪಾನ ನಿಷೇಧಿಸುವಂತೆ ಹೋರಾಟ ನಡೆಸಿದ್ದರೂ. ಆದರೆ ಆಳುವ ಸರ್ಕಾರಗಳು ನಿಷೇಧ ಮಾಡಲಿಲ್ಲ. ಕೆಲವು ಸ್ವಾಮಿಗಳು ಎಣ್ಣೆ ಹಾಕುವವರಿದ್ದಾರೆ. ಮಹಿಳೆಯರ ಪಾದಯಾತ್ರೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಸರ್ಕಾರ ನಡೆಸಲು ಬೇರೆ ಮೂಲಗಳಿಂದ ಆದಾಯ ಕಂಡುಕೊಳ್ಳಲಿ ಮದ್ಯಪಾನದಿಂದ ಬರುವ ಆದಾಯಕ್ಕೆ ಕಾಯುವುದು ಬೇಡ ಎಂದು ಆಗ್ರಹಿಸಿದರು

         ಮುರುಘಾಮಠದ ಡಾ.ಶಿವಮೂರ್ತಿ ಶರಣರು ಮಾತನಾಡಿ ಮದ್ಯಪಾನ ಮಾನವನ ಬದುಕನ್ನ ಅಸ್ತವ್ಯಸ್ಥಗೊಳಿಸುತ್ತಿರುವುದರಿಂದ ಚಟಾಧೀನರಾಗುತ್ತಿದ್ದಾರೆ. ಇದರಿಂದ ಮಹಿಳೆ ಮತ್ತು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆಳುವ ಸರ್ಕಾರಗಳು ಮಾಂಗಲ್ಯ ಭಾಗ್ಯ ಯೋಜನೆ ಜಾರಿಗೆ ತರುವ ಪ್ರಯತ್ನ ಮಾಡುತ್ತಿದ್ದರೆ ಮತ್ತೊಂದು ಕಡೆ ಮದ್ಯ ಮಾರಾಟದ ಮೂಲಕ ಮಾಂಗಲ್ಯ ಹರಿಯುವ ಕೆಲಸ ಮಾಡುತ್ತಿದೆ. ಇಂತಹ ದ್ವಿಮುಖ ನೀತಿಯ ವಿರುದ್ದ ಹೋರಾಡುತ್ತಿರುವ ನಿಮ್ಮಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಪಾದಯಾತ್ರೆ ಹೊರಟಿರುವ ಸಾವಿರಾರು ಮಹಿಳೆಯರಿಗೆ ನೈತಿಕ ಶಕ್ತಿ ತುಂಬಿದರು.

        ಮಹಿಳೆಯರ ಹೋರಾಟಕ್ಕೆ ಯಾವ ಸರ್ಕಾರಗಳಾದರೂ ಬಗ್ಗಬೇಕು. ಆದ್ದರಿಂದ ನಿಮ್ಮ ಹೋರಾಟಕ್ಕೆ ಜಯ ಸಿಕ್ಕೆ ಸಿಗುತ್ತದೆ. ನೀವುಗಳು ಪಾದಯಾತ್ರೆ ಹೊರಟಿರುವುದರಿಂದ ಸರ್ಕಾರಕ್ಕೆ ನಡುಕು ಶುರುವಾಗಿದೆ. ನಿಮ್ಮ ಹೋರಾಟ ಎಷ್ಟು ಪ್ರಭಾವಶಾಲಿಯಾಗಿರುತ್ತದೆ. ಅಷ್ಟು ಬೇಗ ಸರ್ಕಾರ ನಿಮ್ಮ ಬಳಿಗೆ ಬರುತ್ತದೆ. ಮದ್ಯಪಾನ ನಿಷೇಧಿಸುವಂತೆ ನಿಮ್ಮೆಲ್ಲರ ಹಕ್ಕೊತ್ತಾಯ ನಮ್ಮೆಲ್ಲರ ಹಕ್ಕೊತ್ತಾಯ. ಮದ್ಯಪಾನ ನಿಷೇಧಕ್ಕಾಗಿ ಹೋರಾಡುತ್ತಿರುವುದು ತಾತ್ಕಾಲಿಕ ಹೋರಾಟವಾಗಬಾರದು. ನಿರಂತರವಾಗಿರಬೇಕು. ಅತಂತ್ರದ ನಡುವೆ ಆಂದೋಲನ ಆರಂಭಿಸಿದ್ದೀರಿ. ಎಲ್ಲಾ ಪಕ್ಷಗಳಿಗೂ ಇದು ಎಚ್ಚರಿಕೆಯ ಸಂದೇಶವಾಗಿರುವುದರಿಂದ ನಿಮ್ಮ ಹೋರಾಟ ಜಾಗೃತವಾಗಿರಲಿ ಎಂದು ಮಹಿಳೆಯರಿಗೆ ಹೇಳಿದರು.

          ಮದ್ಯಪಾನದಿಂದ ಬರುವ ಆದಾಯವನ್ನು ಅವಲಂಭಿಸದೆ ಬೇರೆ ಬೇರೆ ಮೂಲಗಳಿಂದ ಆದಾಯಗಳನ್ನು ಕಂಡುಕೊಂಡು ಸರ್ಕಾರವನ್ನು ನಡೆಸಬೇಕಿದೆ. ಮದ್ಯಪಾನ ನಿಷೇಧಿಸುವ ಮೂಲಕ ಶುದ್ದವಾದ ಆಡಳಿತನ್ನು ಸರ್ಕಾರ ಕೊಡಬೇಕು. ಮದ್ಯಪಾನ ಕೌಟುಂಬಿಕ ತಲ್ಲಣ ಉಂಟು ಮಾಡುತ್ತದೆ. ಕುಡಿಯುವ ಹವ್ಯಾಸ ಕಡಿಮೆಯಾಗಬೇಕು. ಆದರೆ ಜಾಸ್ತಿಯಾಗುತ್ತಿದೆ. ನಿಮ್ಮ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ. ಇದು ಜನಪರ ಚಳುವಳಿಯಾಗಬೇಕು. ಹೋರಾಟಕ್ಕೆ ಜಯ ತಂದುಕೊಡಲು ನಿಮ್ಮ ಸಂಗಡ ಗಟ್ಟಿಯಾಗಿ ನಿಲ್ಲುತ್ತೇವೆ ಎಂದು ಮದ್ಯಪಾನ ನಿಷೇಧಕ್ಕಾಗಿ ಹನ್ನೆರಡು ದಿನಗಳ ಪಾದಯಾತ್ರೆ ಹೊರಟಿರುವ ಮಹಿಳೆಯರಿಗೆ ಧೈರ್ಯ ತುಂಬಿದರು.

        ಹೊಸದುರ್ಗ ಭಗೀರಥಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡುತ್ತ ಜನರ ಆರೋಗ್ಯ ಕಾಪಾಡುವಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಬೇಕಾದರೆ ಮಹಿಳೆಯರಲ್ಲಿ ಜಾಗೃತಿ ಮೂಡಬೇಕು. ಔಷಧೋಪಚಾರ ಒಂದು ಕಡೆಯಾದರೆ ಇನ್ನೊಂದು ಕಡೆ ಸರ್ಕಾರ ಮದ್ಯಪಾನದ ಮೂಲಕ ಆದಾಯ ಗಳಿಸಿ ಬಡ ಜನರಿಗೆ ವಿಷ ಉಣಿಸುತ್ತಿದೆ. ಹದಿನೆಂಟು ಸಾವಿರ ಕೋಟಿ ಮದ್ಯಪಾನದಿಂದ ರಾಜ್ಯ ಸರ್ಕಾರಕ್ಕೆ ಆದಾಯ ಸಿಗುತ್ತದೆ. ಎರಡು ಲಕ್ಷ ಇಪ್ಪತ್ತು ಸಾವಿರ ಕೋಟಿ ರೂ.ಬಜೆಟ್‍ನಲ್ಲಿ ಕೇವಲ ಹದಿನೆಂಟು ಸಾವಿರ ಕೋಟಿ ರೂ. ಹೊರೆಯೇನಲ್ಲ. ಅದಕ್ಕಾಗಿ ಸಂಪೂರ್ಣವಾಗಿ ಮದ್ಯಮಾರಾಟ ನಿಷೇಧಿಸಬೇಕು ಎನ್ನುವುದು ಕೂಡ ನಮ್ಮ ಒತ್ತಾಯ ಎಂದರು.

          ಅಧಿಕಾರ ಹಿಡಿಯಲು ನಂತರ ಸಿಕ್ಕ ಅಧಿಕಾರವನ್ನು ಕಳೆದುಕೊಳ್ಳಬಾರದೆನ್ನುವ ಕಾರಣಕ್ಕಾಗಿ ರೆಸಾರ್ಟ್‍ಗೆ ಹೋಗುವವರಿಗೆ ರಾಜ್ಯದ ಜನರ ಕಷ್ಟ ಹೇಗೆ ಗೊತ್ತಾಗಬೇಕು. ಚುನಾವಣೆಯಲ್ಲಿ ಏನೇನೋ ಆಸೆ ತೋರಿಸಿ ಮತದಾರರನ್ನು ಮರಳು ಮಾಡುತ್ತಾರೆ. ಬಸವಾದಿ ಶರಣರು, ಅನೇಕ ಮಹಾತ್ಮರು ಹಿರಿಯರು ಜನರ ಬದುಕು ಸುಧಾರಣೆಗೆ ಕಲ್ಯಾಣ ಕ್ರಾಂತಿಯನ್ನು ಮಾಡಿದರು. ಕಣ್ಣಿದ್ದು, ಕುರುಡಾಗಿರುವ, ಕಿವಿಯಿದ್ದು, ಕಿವುಡಾಗಿರುವ ಸರ್ಕಾರಗಳಿಗೆ ಇಂತಹ ಆಂದೋಲನಗಳ ಮೂಲಕ ಎಚ್ಚರಗೊಳಿಸಬೇಕು ಎಂದು ಪಾದಯಾತ್ರೆಯಲ್ಲಿ ತೊಡಗಿರುವ ಮಹಿಳೆಯರಿಗೆ ಕರೆ ನೀಡಿದರು.

         ನಿಜಗುಣಾನಂದ ಮಹಾಸ್ವಾಮಿ ಮಾತನಾಡಿ ಕೇವಲ ಕರ್ನಾಟಕ ರಾಜ್ಯದಲ್ಲಷ್ಟೆ ಅಲ್ಲ. ಕೇಂದ್ರ ಸರ್ಕಾರವೂ ದೇಶದಲ್ಲಿ ಸಂಪೂರ್ಣವಾಗಿ ಮದ್ಯಪಾನ ನಿಷೇಧಿಸುವತ್ತ ಗಮನ ಕೊಡಬೇಕು. ಕೆಲವು ಕಡೆ ದೇವರುಗಳಿಗೂ ಸರಾಯಿ ಇಟ್ಟು ಪೂಜಿಸಿ ಭಕ್ತರಿಗೆ ನೈವೇದ್ಯವನ್ನಾಗಿ ಕೊಡುತ್ತಾರೆ. ಇಂತಹ ಮೂಢನಂಬಿಕೆಗಳಿಂದ ಜನ ಮೊದಲು ಹೊರಬರಬೇಕು. ನಾಥಪಂಥದ ಸ್ವಾಮಿಗಳು ಮದ್ಯ ಕುಡಿಯುವರಿದ್ದಾರೆ. ಅಜ್ಞಾನ ತುಂಬಿ ತುಳುಕುತ್ತಿರುವುದರಿಂದ ಎಲ್ಲರಲ್ಲಿಯೂ ಧರ್ಮದ ತಿಳುವಳಿಕೆ ಮೂಡಬೇಕು. ಮುಂದಿನ ದಿನಗಳಲ್ಲಿ ಪ್ರೇಮಾಭಟ್ಟರು ಪುರುಷರನ್ನು ಕಟ್ಟಿಕೊಂಡು ಮದ್ಯಪಾನ ನಿಷೇಧಕ್ಕಾಗಿ ಹೋರಾಡಬೇಕು. ಮದುವೆ ಮನೆಗಳಲ್ಲಿಯೂ ಕುಡಿತ ಇಲ್ಲದಿದ್ದರೆ ಜಗಳ ತೆಗೆಯುವವರು ಇದ್ದಾರೆ. ಶುಭ ಅಶುಭಗಳಲ್ಲಿಯೂ ಮದ್ಯ ಇರಲೇಬೇಕು. ಹಾಗಾಗಿ ಮಹಿಳೆಯರು ಪಾದಯಾತ್ರೆ ಮೂಲಕ ಮದ್ಯಪಾನ ನಿಷೇಧಕ್ಕೆ ಹೋರಾಟ ನಡೆಸುತ್ತಿರುವುದು ಯಶಸ್ವಿಯಾಗಿ ಗೆಲುವು ಸಿಗಲಿ ಎಂದು ಹಾರೈಸಿದರು.ಮುಸ್ಲಿಂ ಧರ್ಮಗುರುಗಳಾದ ಸರ್‍ಖಾಜಿ ಸೈಯದ್ ಶಂಷುದ್ದಿನ್ ಮದ್ಯಪಾನ ನಿಷೇಧ ಕುರಿತು ಮಾತನಾಡಿದರು.ನರೇನಹಳ್ಳಿ ಅರುಣ್‍ಕುಮಾರ್, ಬೀಬಿಜಾನ್ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link