ಬೆಂಗಳೂರು :
ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ನಾಲ್ವರು ಕನ್ನಗಳ್ಳರನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು 2 ಲಕ್ಷ 30 ಸಾವಿರ ಮೌಲ್ಯದ ಚಿನ್ನಾಭರಣಗಳು ಬೈಕ್‍ನ್ನು ವಶಪಡಿಸಿಕೊಂಡಿದ್ದಾರೆ.
ಹಾಸನದ ಶಾಂತಿ ಗ್ರಾಮದ ಗಣೇಶ (39), ತಿಪಟೂರಿನ ಕುಮಾರ (30), ಕೆಂಗೇರಿಯ ರಿಯಾಜ್ ಅನೀಫ್ (33) ಹಾಗೂ ನಂದಿನಿ ಲೇಔಟ್‍ನ ಹಲ್ತಾಪ್ ಸಯೀದ್ ಅಬ್ದುಲ್ಲ (30) ಬಂಧಿತ ಆರೋಪಿಗಳಾಗಿದ್ದಾರೆ.
ಶ್ರೀರಾಂಪುರದ ಜಕ್ಕರಾಯನ ಕೆರೆಯ ಆಮ್ಮಗಂ ಎಂಬುವವರು ಕಳೆದ ಜ. 16 ರಂದು ಮನೆಗೆ ಬೀಗ ಹಾಕಿಕೊಂಡು ತಮಿಳುನಾಡಿಗೆ ಹೋಗಿದ್ದಾಗ ಬೀಗ ಮುರಿದು ಒಳ ನುಗ್ಗಿದ್ದ ಆರೋಪಿಗಳಾದ ಗಣೇಶ್, ಕುಮಾರ್ ಹಾಗೂ ರಿಯಾಜ್ 60 ಗ್ರಾಂ ತೂಕದ 1 ಲಕ್ಷ 80 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಮನೆಕಳವು
ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿದ ಶ್ರೀರಾಂಪುರ ಪೊಲೀಸ್ ಇನ್ಸ್‍ಪೆಕ್ಟರ್ ಶಿವಾಜಿರಾವ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಾದ ಗಣೇಶ ಹಾಗೂ ಕುಮಾರ್ ಹಿಂದೆ ಶ್ರೀರಾಂಪುರ ಹಾಗೂ ಶೇಷಾದ್ರಿಪುರಗಳಲ್ಲಿ ಮನೆಗಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.
ಮೋಜಿನ ಜೀವನ ಹಾಗೂ ದುಶ್ಚಟಗಳಿಗಾಗಿಯೇ ಮೂವರು ಗ್ಯಾಂಗ್ ಕಟ್ಟಿಕೊಂಡು ಕನ್ನಗಳವು ಮಾಡುತ್ತಿದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
ಗಾಂಜಾ ವ್ಯಸನಿ
ನಂದಿನಿ ಲೇಔಟ್‍ನ ಜಯಮ್ಮ ಎಂಬುವರು ಮನೆಗೆ ಬೀಗ ಹಾಕಿಕೊಂಡು ಕಳೆದ ಜ. 15 ರಂದು ಹೊರ ಹೋಗಿದ್ದಾಗ ಬೀಗ ಮುರಿದು ಒಳ ನುಗ್ಗಿ ಕಳವು ಮಾಡಿದ್ದ ಆರೋಪಿ ಅಲ್ತಾಫ್ ಸಯೀದ್ ಪಾಷಾನಿಂದ 42 ಗ್ರಾಂ ತೂಕದ ಒಂದೂವರೆ ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ಬಂಧನದಿಂದ ನಂದಿನಿ ಲೇಔಟ್‍ನ 5 ಹಗಲು ಹಾಗೂ ರಾತ್ರಿ ಕನ್ನಗಳವು ಪ್ರಕರಣಗಳು ಪತ್ತೆಯಾಗಿವೆ. ಗಾಂಜಾ ವ್ಯಸನಿಯಾಗಿದ್ದ ಆರೋಪಿಯು ದುಶ್ಚಟಗಳಿಗಾಗಿ ಮನೆಗಳವು ಕೃತ್ಯಗಳಲ್ಲಿ ಭಾಗಿಯಾಗಿದ್ದು, ಆರೋಪಿಯನ್ನು ಕಾರ್ಯಾಚರಣೆ ನಡೆಸಿ ಇನ್ಸ್‍ಪೆಕ್ಟರ್ ಲೋಹಿತ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ