ಬೆಂಗಳೂರು:
ದೌರ್ಜನ್ಯ ತಡೆ ಅಧಿನಿಯಮದಡಿಯಲ್ಲಿ ಕೊಲೆ ಪ್ರಕರಣಗಳಲ್ಲಿ ತಡ ಮಾಡದೆ ಅನುಕಂಪದ ಸರ್ಕಾರಿ ನೌಕರಿ ನೀಡುವಂತೆ ಸಿಎಂ ಸಿದ್ಧರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಮೂಲಕ ಅನುಕಂಪದ ಆಧಾರದ ಅಡಿಯಲ್ಲಿ ಸರ್ಕಾರಿ ನೌಕರಿ ನಿರೀಕ್ಷೆಯಲ್ಲಿದ್ದಂತವರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಇಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದಂತ ಅವರು, ಸಿಂಧುತ್ವ ಪ್ರಮಾಣಪತ್ರ ವಿಚಾರದಲ್ಲಿ ಅಸಡ್ಡೆ ಬೇಡ. ಅರ್ಹರಾಗಿದ್ದರೆ ತಕ್ಷಣ ಕೊಡಿ, ಅರ್ಹತೆ ಇಲ್ಲದಿದ್ದರೆ ಸ್ಪಷ್ಟವಾಗಿ ತಿಳಿಸಿ. ಸತಾಯಿಸಬೇಡಿ ಅಂತ ಖಡಕ್ ಸೂಚನೆ ನೀಡಿದ್ದಾರೆ.
ದೌರ್ಜನ್ಯ ತಡೆ ಅಧಿನಿಯಮದ ಅಡಿ ದಾಖಲಾಗಿರುವ ಒಟ್ಟು 26 ಕೊಲೆ ಪ್ರಕರಣಗಳಲ್ಲಿ ಕುಟುಂಬದ ಅವಲಂಬಿತರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಬೇಕಾಗಿದ್ದು, ಆದಷ್ಟು ಬೇಗನೆ ನೌಕರಿ ಒದಗಿಸಬೇಕು. ಜಿಲ್ಲೆಯಲ್ಲಿ ಉಪ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನು ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ನಡೆಸಬೇಕು ಎಂದು ಸೂಚಿಸಿದ್ದಾರೆ.
ಸಿಂಧುತ್ವ ಪ್ರಮಾಣ ಪತ್ರವನ್ನು ಒಂದು ತಿಂಗಳ ಒಳಗಾಗಿ ನೀಡಬೇಕು. ಪ್ರಸ್ತುತ 2684 ಅರ್ಜಿಗಳು ಬಾಕಿಯಿದ್ದು, ಅರ್ಹತೆ ಇದ್ದವರಿಗೆ ತಕ್ಷಣ ಪ್ರಮಾಣ ಪತ್ರ ನೀಡಬೇಕು. ವಿನಾಕಾರಣ ಸಿಂಧುತ್ವ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದರೆ ಜಿಲ್ಲಾಧಿಕಾರಿ ಅವರನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಂಬೇಡ್ಕರ್ ಭವನ ನಿರ್ಮಾಣ ಕಾಮಮಗಾರಿ ಹಲವು ಕಡೆ ಅರ್ಧದಲ್ಲಿ ನಿಂತಿದ್ದು, ಕಾಮಗಾರಿ ಪೂರ್ಣಗೊಳಿಸುವ ಕುರಿತು ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ