ದಾವಣಗೆರೆ:
ಮಾಸಿಕ 5 ಸಾವಿರ ರೂ. ಮಾಶಾಸನ ನೀಡುವುದರ ಜೊತೆಗೆ, 5 ಲಕ್ಷ ಮೌಲ್ಯದ ಹಿತ್ತಲು ಸಮೇತ ಮನೆ ನಿರ್ಮಿಸಿಕೊಡುವ ಮೂಲಕ ಗೌರವಯುತ ಬದುಕು ಕಟ್ಟಿಕೊಡಬೇಕೆಂಬುದು ಸೇರಿದಂತೆ ವಿವಿಧ ಹಕ್ಕೋತ್ತಾಯಗಳಿಗಾಗಿ ಆಗ್ರಹಿಸಿ, ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನೇತೃತ್ವದಲ್ಲಿ ದೇವದಾಸಿ ಮಹಿಳೆಯರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ದೇವದಾಸಿ ಮಹಿಳೆಯರು, ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಗೌರವ ಸಲಹೆಗಾರ ಕೆ.ಎಲ್.ಭಟ್, ಸಮಾಜದಲ್ಲಿ ಜಾರಿಯಲ್ಲಿರುವ ಅನಿಷ್ಟ ದೇವದಾಸಿ ಪದ್ಧತಿಯಿಂದಾಗಿ, ವ್ಯವಸ್ಥೆಯ ಕುತಂತ್ರಕ್ಕೆ ಬಲಿಯಾಗಿರುವ ತಳ ಸಮುದಾಯದ ಮಹಿಳೆಯರು ದೇವದಾಸಿಗಳಾಗಿ ಯಾವುದೇ ಘನತೆ, ಗೌರವ ಇಲ್ಲದೇ, ನಿಕೃಷ್ಟವಾಗಿ ಬದುಕುತ್ತಿದ್ದಾರೆ. ಹೀಗಾಗಿ ಈ ಮಹಿಳೆಯರಿಗೆ ಗೌರವಯುತ ಬದುಕು ಕಟ್ಟಿಕೊಡಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದರು.
ದೇವದಾಸಿ ಮಹಿಳೆಯರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹಲವು ಬಾರಿ ಪ್ರತಿಭಟನೆ, ಹೋರಾಟಗಳನ್ನು ನಡೆಸುವ ಮೂಲಕ ಅಧಿಕಾರಿಗಳಿಗೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಸಹ ಸರ್ಕಾರ ಸ್ಪಂದಿಸದೇ, ಈ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ರಾಜ್ಯಾಧ್ಯಕ್ಷೆ ಟಿ.ವಿ.ರೇಣುಕಮ್ಮ ಮಾತನಾಡಿ, ದೇವದಾಸಿ ಮಹಿಳೆಯರು ಮತ್ತವರ ಕುಟುಂಬಗಳ ಪರಿತ್ಯಕ್ತ ಮಹಿಳೆಯರಿಗೆ ಮಾಸಿಕ 5 ಸಾವಿರ ರು. ಮಾಸಾಶನ ನೀಡಬೇಕು. ದೇವದಾಸಿ ಮಹಿಳೆಯರು, ಮತ್ತವರ ಕುಟುಂಬಗಳ ಸದಸ್ಯರ ಗಣತಿ ಕಾರ್ಯ ನಡೆಸಬೇಕು. ಇವರ ಕುಟುಂಬದ ಸದಸ್ಯರ ಪುನರ್ವಸತಿಗಾಗಿ ಭೂಮಿ ಕೊಡಿಸಲು ಕನಿಷ್ಟ 5 ಸಾವಿರ ಕೋಟಿ ರೂ. ಅನುದಾನ ಕಾಯ್ದಿರಿಸಬೇಕು.
10 ಸೆಂಟ್ಸ್ ಸ್ಥಳದಲ್ಲಿ ಹಿತ್ತಲ ಸಮೇತ 5 ಲಕ್ಷ ರು. ಮೌಲ್ಯದ ಮನೆ ಕಟ್ಟಿಸಿಕೊಡಬೇಕು. ದೇವದಾಸಿ ಮಹಿಳೆಯರು, ಅಂತಹವರ ಕುಟುಂಬ ಸದಸ್ಯರ ಎಲ್ಲಾ ಸಾಲ ಮನ್ನಾ ಮಾಡಬೇಕು. ಹೊಸ ಸಾಲ ಸಿಗುವಂತೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಉದ್ಯೋಗ ನಷ್ಟ ಪರಿಹಾರವಾಗಿ ತಲಾ 25 ಸಾವಿರ ರು.ಗಳ ಪರಿಹಾರ ನೀಡಬೇಕು. ಮಕ್ಕಳ ವಿದ್ಯಾಭಾಸ, ಉದ್ಯೋಗಕ್ಕೆ ನೆರವು ನೀಡಬೇಕು.
ದೇವದಾಸಿ ಪದ್ಧತಿ ನಿಷೇಧ ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡಿ, ಇಂತಹ ದೌರ್ಜನ್ಯಕ್ಕೆ ತುತ್ತಾದ ಮಹಿಳೆಯರ ಮಕ್ಕಳಿಗೆ ತಂದೆ ಆಸ್ತಿಯಲ್ಲಿ ಪಾಲು ಕೊಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ವರ್ಷಕ್ಕೆ ಕನಿಷ್ಟ 200 ಮಾನವ ದಿನಗಳನ್ನು ಸೃಷ್ಟಿಸಿ, ನಗರ ಪ್ರದೇಶಕ್ಕೂ ವಿಸ್ತರಿಸಬೇಕು. ಅಲ್ಲದೆ, 600 ರು.ಗಳ ದಿನದ ಕೂಲಿ ನಿಗದಿಪಡಿಸಬೇಕು. ದಲಿತರು, ಕೂಲಿಕಾರರು, ದೇವದಾಸಿ ಮಹಿಳೆಯರು, ಮತ್ತವರ ಕುಟುಂಬದ ಸದಸ್ಯರಿಗೆ ಉದ್ಯೋಗ ಖಾತರಿ ಕೆಲಸ ನೀಡಬೇಕು. ಉದ್ಯೋಗ ಖಾತರಿ ಕೆಲಸ ನಿರಾಕರಣೆಯನ್ನು ಜಾತಿ ತಾರತಮ್ಯದ ಹಾಗೂ ಅಸ್ಪೃಶ್ಯತಾಚರಣೆಯ ದೌರ್ಜನ್ಯದ ಭಾಗವೆಂದು ಪರಿಗಣಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಆನಂದರಾಜ, ಹಿರಿಯಮ್ಮ, ಎನ್.ಮೈಲಮ್ಮ, ಸೀತಮ್ಮ, ಚನ್ನಮ್ಮ, ಹೊನ್ನಮ್ಮ, ಎ.ಕೆ.ಕೆಂಚಮ್ಮ, ಮೈಲಮ್ಮ, ಹುಚ್ಚಮ್ಮ, ಅಂಜಿನಮ್ಮ, ದೇವೀರಮ್ಮ, ಜಯಮ್ಮ, ಭರಮಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








