ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಶಾಸಕರ ದಿಢೀರ್ ಭೇಟಿ

ತುರುವೇಕೆರೆ:

         ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನಧಿಕೃತವಾಗಿ ರಜೆ ಹೋಗುತ್ತಾರೆ ಹಾಗೂ ದಿನದ ಅವಧಿಗೆ ಮುನ್ನಾ ಕಛೇರಿಯಿಂದ ಹೊರ ಹೋಗುತ್ತಾರೆಂಬ ದೂರಿನ ಮೇರೆಗೆ ಶಾಸಕ ಮಸಾಲಾ ಜಯರಾಮ್ ರವರು ದಿಢೀರ್ ಆಗಿ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಭೇಟಿ ಮಾಡಿ ಹಾಜರಾತಿ ಪರಿಶೀಲಿಸಿದರು. 

          ತಾಲೂಕಿನ ವಿವಿಧೆಡೆ ಹಲವು ಅಭಿವೃಧ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿದ ನಂತರ ಧಿಡೀರನೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಅವರು ಭೇಟಿ ನೀಡಿದರು. ಸಿಬ್ಬಂದಿಯಿಂದ ಹಾಜರಾತಿ ಪುಸ್ತಕ ಪಡೆದುಕೊಂಡ ಅವರು ಕಛೇರಿಗೆ ಹಾಜರಾಗಿರುವ ಸಿಬ್ಬಂದಿಯ ವಿವರ ಪಡೆದುಕೊಂಡರು. ಕಛೇರಿಯಲ್ಲಿ ಒಟ್ಟು 19 ಹುದ್ದೆಗಳು ಇದ್ದು ಇದರಲ್ಲಿ ಮೂರು ಹುದ್ದೆ ಖಾಲಿ ಇದೆ. ಇಲ್ಲಿಗೆ ಪೂರ್ಣ ಪ್ರಮಾಣದ ಬಿಇಓ ರ ನೇಮಕವಾಗಿಲ್ಲದಿರುವ ಸಂಗತಿಯನ್ನು ಬಿಆರ್‍ಸಿ ವಸಂತಕುಮಾರ್ ಶಾಸಕರಿಗೆ ತಿಳಿಸಿದರು.

          8 ಮಂದಿ ಕಛೇರಿಯಲ್ಲಿ ಕಾರ್ಯನಿರತರಾಗಿದ್ದರೆ, ಉಳಿದ 8 ಮಂದಿ ವಿವಿಧ ಕೆಲಸಗಳ ನಿಮ್ಮಿತ್ತ ಬೇರೆಡೆಗೆ ತೆರಳಿದ್ದಾರೆ ಎಂಬ ಸಮಜಾಯಿಸಿ ಸಿಬ್ಬಂದಿಯಿಂದ ಬಂತು. ಶಾಲಾ ಭೇಟಿಗೆ ತೆರಳಿದ್ದಾರೆಂಬ ಮಾಹಿತಿಯನ್ವಯ ಆ ಶಾಲೆಯ ಶಿಕ್ಷಕರಿಗೆ ಫೋನಾಯಿಸಿ ಅಧಿಕಾರಿ ಶಾಲೆಗೆ ಭೇಟಿ ನೀಡಿದ ಬಗ್ಗೆ ಶಾಸಕರು ಮಾಹಿತಿ ಪಡೆದುಕೊಂಡರು.

           ಶಿಕ್ಷಕರ ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತಿಲ್ಲ. ಅಲ್ಲದೇ ಸಿಬ್ಬಂದಿ ಕಛೇರಿಗೆ ಪದೇ ಪದೇ ಅನಧಿಕೃತವಾಗಿ ಗೈರು ಹಾಜರಾಗುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಇದೆ. ಇದನ್ನು ಸರಿಪಡಿಸಿಕೊಳ್ಳಲು ಶಾಸಕ ಮಸಾಲಾ ಜಯರಾಮ್ ಬಿಇಓ ಕಚೇರಿಯ ಸಿಬ್ಬಂದಿಗೆ ಸೂಚಿಸಿದರು.

            ಚಕ್ಕರ್ ಹೊಡೆಯೋ ಶಿಕ್ಷಕರಿಗೆ ಎಚ್ಚರಿಕೆ – ತಾಲೂಕಿನ ಹಲವಾರು ಸರ್ಕಾರಿ ಶಾಲೆಗಳ ಶಿಕ್ಷಕರು ಸಂಘ ಸಂಸ್ಥೆಗಳ ಕಾರ್ಯಕ್ರಮಗಳ ಹೆಸರಿನಲ್ಲಿ ಹಾಗೂ ವಿವಿಧ ಕಾರಣಗಳ ನೆಪವೊಡ್ಡಿ ಗ್ರಾಮಾಂತರ ಪ್ರದೇಶದ ಶಾಲೆಗಳಿಗೆ ಅನಧಿಕೃತವಾಗಿ ಗೈರು ಹಾಜರಾಗುತ್ತಿದ್ದಾರೆ ಎಂಬ ಸಂಗತಿಯೂ ತಮ್ಮ ಕಿವಿಗೆ ಬಿದ್ದಿದೆ. ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇದೆ. ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎಂಬ ಕಾರಣಗಳಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯ ನಡುವೆ ಹಲವಾರು ಶಿಕ್ಷಕರು ಶಾಲೆಗಳಿಗೆ ಚಕ್ಕರ್ ಹಾಕಿ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಶಾಸಕರು ಆರೋಪಿಸಿದರು.

            ಇದರಿಂದ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಅನ್ಯಾಯ ಮಾಡಲಾಗುತ್ತಿದೆ. ಇಂತಹ ಪ್ರಕರಣಗಳೂ ತಮ್ಮ ಗಮನಕ್ಕೆ ಬಂದಿದೆ. ಈ ಪ್ರವೃತ್ತಿಯನ್ನು ತಾವು ಸಹಿಸುವುದಿಲ್ಲ. ಸರ್ಕಾರದಿಂದ ಸಂಬಳ ಸವಲತ್ತುಗಳನ್ನು ಪಡೆದು ಮಕ್ಕಳಿಗೆ ವಂಚಿಸುವುದು ದ್ರೋಹ. ಆದ್ದರಿಂದ ತಾವು ಮುಂಬರುವ ದಿನಗಳಲ್ಲಿ ತಾಲೂಕು ಪ್ರವಾಸ ಮಾಡುವ ವೇಳೆ ಶಾಲೆಗಳಿಗೆ ದಿಢೀರ್ ಭೇಟಿ ಮಾಡಿ ಮಕ್ಕಳ, ಗ್ರಾಮಸ್ಥರ ಹಾಗೂ ಪೋಷಕರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳವುದಾಗಿ ಶಾಸಕ ಮಸಾಲಾ ಜಯರಾಮ್ ಎಚ್ಚರಿಕೆ ನೀಡಿದರು.
ಶಾಸಕರ ಭೇಟಿ ವೇಳೆ ಬಿಆರ್‍ಸಿ ವಸಂತಕುಮಾರ್ ಸಿಬ್ಬಂದಿ ಲೋಕೇಶ್ ಸೇರಿದಂತೆ ಹಲವಾರು ಮಂದಿ ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link