ಬೆಂಗಳೂರು:
ಒಎಲ್‍ಎಕ್ಸ್‍ನಲ್ಲಿ ದ್ವಿಚಕ್ರವಾಹಗಳನ್ನು ಮಾರಾಟ ಮಾಡುವುದಾಗಿ ನಕಲಿ ಸೈನಿಕನೊಬ್ಬ ವಂಚನೆ ನಡೆಸಿದ್ದು ಈ ಸಂಬಂಧ ಸಾರಿಗೆ ಇಲಾಖೆಯಲ್ಲಿ ದೂರು ದಾಖಲಿಸಲಾಗಿದೆ.
ಸೈನಿಕ ಎಂದು ಹೇಳಿಕೊಂಡಿರುವ ವಿಕಾಸ್ ಪಟೇಲ್ ಎಂಬಾತ ಒಎಲ್‍ಎಕ್ಸ್‍ನಲ್ಲಿ ವಾಹನ ಮಾರಾಟ ಮಾಡುವುದಾಗಿ ಹಲವರಿಗೆ ಮೋಸ ಮಾಡಿದ್ದಾನೆ.ನಗರದ ಆರ್ ಟಿಓ ಕಚೇರಿಯಲ್ಲಿ ನೊಂದಣಿಯಾಗಿರುವ ಸ್ಕೂಟರ್‍ನ್ನು ಒಎಲ್‍ಎಕ್ಸ್‍ನಲ್ಲಿ ಮಾರಾಟ ಮಾಡಿದ್ದು, ಈಗಾಗಲೇ ಸಾಕಷ್ಟು ವಾಹನಗಳನ್ನು ಒಎಲ್‍ಎಕ್ಸ್‍ನಮಾರಾಟ ಮಾಡುವುದಾಗಿ ಹಲವರನ್ನು ವಂಚಿಸಿದ್ದಾನೆ.
ನಕಲಿ ಸೈನಿಕ ವಿಕಾಸ್ ಪಟೇಲ್ ವಾಹನವನ್ನು ಒಎಲ್‍ಎಕ್ಸ್‍ನಲ್ಲಿ ಮಾರಾಟಕ್ಕಿಡುತ್ತಿದ್ದ ನೋಡಿದ ಗ್ರಾಹಕರು ಖರೀದಿ ಮಾಡಲು ಮುಂದಾಗುತ್ತಾರೆ. ಬಳಿಕ ನೀವು ಪೇಟಿಯಂ ಮೂಲಕ ಹಣ ಕಳುಹಿಸಿ, ನಾನು ಸೈನಿಕನಾಗಿರುವುದರಿಂದ ತುರ್ತು ಕೆಲಸದಲ್ಲಿದ್ದೇನೆ. ಟ್ರಾನ್ಸ್ ಪೋರ್ಟ್ ಮೂಲಕ ನಿಮಗೆ ವಾಹನ ಕಳಿಸುವೆ ಎನ್ನುತ್ತಾನೆ.
ಅಷ್ಟೇ ಅಲ್ಲದೇ ಜನರನ್ನು ನಂಬಿಸಲು ತನ್ನ ನಕಲಿ ಆರ್ಮಿಕಾರ್ಡ್, ಫೋಟೋ, ಪಾನ್ ಕಾರ್ಡ್ ಜೊತೆಗೆ ಸೇನೆಯಲ್ಲಿರುವ ಫೋಟೋವನ್ನು ಕಳಿಸುತ್ತಾನೆ. ಯೋಧ ಮೋಸ ಮಾಡಲಾರ ಎಂದು ನಂಬಿದ ಜನ ಈತನಿಗೆ ಪೇಟಿಯಂ ಮೂಲಕ ಹಣ ಕಳಿಸುತ್ತಾರೆ. ತನ್ನ ಖಾತೆಗೆ ಹಣ ಬರುತ್ತಿದ್ದಂತೆ ತನ್ನ ನಂಬರನ್ನು ಬದಲಾಯಿಸುತ್ತಿದ್ದನು.
ಬೆಂಗಳೂರು ಮೂಲದವ ಅಂತ ಹೇಳಿಕೊಂಡಿರುವ ವಿಕಾಸ್, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಕೆಲಸ ಮಾಡುವುದಾಗಿ ಹೇಳಿ ಜನರಿಗೆ ಮೋಸ ಮಾಡಿದ್ದಾನೆ. ಈತ ಮಾರಾಟಕ್ಕಿಟ್ಟಿರುವ ವಾಹನ ಬೆಂಗಳೂರು ಆರ್‍ಟಿಓದಲ್ಲಿ ನೋಂದಾಣಿಯಾಗಿದ್ದು ಈಗಾಗಲೇ ಗುರುಮೂರ್ತಿ ಹಾಗೂ ಫೈಜಲ್ ಸೇರಿದಂತೆ ಅನೇಕರು ಈತನನ್ನು ನಂಬಿ ಲಕ್ಷಾಂತರ ದುಡ್ಡು ಕಳೆದುಕೊಂಡಿದ್ದಾರೆ. ಸದ್ಯ ನಕಲಿ ಸೈನಿಕನ ವಿರುದ್ಧ ಸಾರಿಗೆ ಇಲಾಖೆಯಲ್ಲಿ ದೂರು ದಾಖಲಿಸಲಾಗಿದೆ.
