ಬೆಂಗಳೂರು
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ನಿನ್ನೆ ನೀಡಿದ್ದ ವಿವಾದಾತ್ಮಕ ಹೇಳಿಕೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಹೆಗಡೆ ನಡುವೆ ಟ್ವೀಟ್ ಕಾದಾಟ ಮುಂದುವರಿದಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಇಂದು ವೈಯಕ್ತಿಕ ವಿಷಯ ಪ್ರಸ್ತಾಪಿಸಿ ಟ್ವೀಟ್ ಮಾಡಿದ್ದಾರೆ.
“ನಾನು ದಿನೇಶ್ ಗುಂಡೂರಾವ್ ಅವರ ಎಲ್ಲ ಪ್ರಶ್ನೆಗಳಿಗೆ ಖಂಡಿತ ಉತ್ತರ ಕೊಡುತ್ತೇನೆ. ಅದಕ್ಕೂ ಮೊದಲು ಅವರ ಸಾಧನೆಗಳ ಹಿಂದಿರೋದು ಯಾರು ಎಂಬುದನ್ನು ಬಹಿರಂಗ ಪಡಿಸಬೇಕು. ಈ ವ್ಯಕ್ತಿ ಒಬ್ಬ ಮುಸ್ಲಿಂ ಮಹಿಳೆಯ ಹಿಂದೆ ಓಡಿ ಹೋದವರು ಎಂಬುದು ನನಗೆ ಚೆನ್ನಾಗಿ ಗೊತ್ತು” ಎಂದು ದಿನೇಶ್ ವಿರುದ್ಧ ಅನಂತ್ ಕುಮಾರ್ ಹೆಗಡೆ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸಚಿವನಾದ ಮೇಲೆ ಅಥವಾ ಸಂಸದನಾದ ನಂತರ ನಿಮ್ಮ ಸಾಧನೆಗಳೇನು ಎಂದು ಅನಂತಕುಮಾರ್ ಹೆಗಡೆಯವರನ್ನು ದಿನೇಶ್ ಗುಂಡೂರಾವ್ ನಿನ್ನೆ ಟ್ವೀಟ್ ಮೂಲಕ ಪ್ರಶ್ನಿಸಿದ್ದರು.ಅನಂತಕುಮಾರ್ ಹೆಗಡೆಯವರ ಪ್ರಚೋದನಕಾರಿ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ದಿನೇಶ್ ಗುಂಡೂರಾವ್, ಯಾರು ಯಾರದೇ ಹೆಣ್ಣುಮಕ್ಕಳ ಮೇಲೆ ಕೈ ಹಾಕಿದರೆ ಅಂತಹವರಿಗೆ ರಕ್ಷಣೆ ಇರಬಾರದು. ಇದು ಒಂದು ಕೋಮಿಗೆ ಸೀಮಿತವಾಗಬಾರದು ಎಂದು ದಿನೇಶ್ ಗುಂಡೂರಾವ್ ನಿನ್ನೆ ಹೆಗಡೆಯವರ ವಿವಾದಾತ್ಮಕ ಹೇಳಿಕೆಗೆ ತಿರುಗೇಟು ನೀಡಿದ್ದರು.
ಇದಕ್ಕೆ “ಹಲವು ಬಾರಿ ಪ್ರಚೋದನೆಯ ಹೇಳಿಕೆ ನೀಡಿ ಅನಂತರ ಕ್ಷಮೆ ಬೇಡುವ ಚಾಳಿ ಇರುವ ಈ ವ್ಯಕ್ತಿಗೆ ಯಾಕಿಷ್ಟು ತುರಿಕೆ ರೋಗ” ಎಂದು ಅನಂತಕುಮಾರ್ ಹೆಗಡೆ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.ಕೊಡಗಿನ ಮಾದಾಪುರದಲ್ಲಿ ನಿನ್ನೆ ಪರಿವರ್ತನ ಟ್ರಸ್ಟ್, ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ಹಿಂದೂ ಐಕ್ಯ ಸಮ್ಮೇಳನದಲ್ಲಿ, “ಹಿಂದೂ ಹುಡುಗಿ ಮೈ ಮುಟ್ಟಿದ ಕೈ ಇರಬಾರದು, ಪೌರುಷ ಇದ್ದರೆ ಇತಿಹಾಸ ಬರೆಯಿರಿ” ಎಂದು ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.