ಸೃತಿ ಸಂಗೀತೋತ್ಸವ ಉದ್ಘಾಟನೆ

ಹಾನಗಲ್ಲ :

     ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಸಂಗೀತಾಸಕ್ತಿ ಹುಟ್ಟುಹಾಕಿದರೆ ದುರಭ್ಯಾಸಗಳಿಂದ ದೂರವಿದ್ದು, ಸುಸಂಸ್ಕøತವಾದ ಸಮಾಜ ನಿರ್ಮಾಣವಾಗಬಲ್ಲದು ಎಂದು ಅಕ್ಕಿಆಲೂರು ವಿರಕ್ತಮಠದ ಶಿವಬಸವ ಸ್ವಾಮೀಜಿ ನುಡಿದರು.

       ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆ, ಉದಾತ್ತ ಕಲಾ ಅಕಾಡೆಮಿ, ಸರಸ್ವತಿ ಸಂಗೀತ ವಿದ್ಯಾಲಯ ಇವುಗಳ ಸಹಯೋಗದಲ್ಲಿ ಆಯೋಜಿಸಿದ ಪದ್ಮಭೂಷಣ ಪಂ.ಬಸವರಾಜ ರಾಜಗುರು ಸೃತಿ ಸಂಗೀತೋತ್ಸವ ಉದ್ಘಾಟಿಸಿ ಅವರು ಮಾತನಾಡಿದ ಅವರು, ಸಸ್ಯ, ಪ್ರಾಣಿಗಳಿಗೂ ಸಂಗೀತ ಅಪ್ಯಾಯಮಾನವಾಗುತ್ತದೆ ಎಂಬುದು ಅಧ್ಯಯನದ ಮೂಲಕ ಧೃಢಪಟ್ಟಿದೆ.

        ಪಾಲಕರು ಮಕ್ಕಳನ್ನು ಸಂಗೀತ ಕ್ಷೇತ್ರದಲ್ಲಿ ಬಹುಬೇಗ ಜನಪ್ರೀಯತೆ ಗಳಿಸುವುದನ್ನು ಬಯಸುತ್ತಾರೆ. ಇಂಥ ಆತುರತೆಯಿಂದ ಮಕ್ಕಳು ಗುಣಮಟ್ಟದ ಸಂಗೀತವನ್ನು ಅಭ್ಯಸಿಸುವಲ್ಲಿ ವಿಫಲರಾಗುವ ಆತಂಕವಿರುತ್ತದೆ. ಚಲನಚಿತ್ರ ಗೀತೆಗಳಿಂದ ದೂರದರ್ಶನಗಳ ಕಾರ್ಯಕ್ರಮಕ್ಕೆ ಹಾತೊರೆಯದೇ ಶಾಸ್ತ್ರೀಯ ಸಂಗೀತ ಕಲಿಕೆಗೆ ಒತ್ತು ನೀಡುವುದು ಉತ್ತಮ ಎಂದು ಸಲಹೆ ಮಾಡಿದ ಅವರು,
ಮನಸ್ಸಿನ ನೋವುಗಳನ್ನು ದೂರಗೊಳಿಸಿ, ಪ್ರಸನ್ನಗೊಳಿಸುವ ಶಕ್ತಿ ಸಂಗೀತಕ್ಕಿದೆ. ಒತ್ತಡದ ಬದುಕಿಗೆ ನಿರಾಳತೆಯನ್ನುಂಟು ಮಾಡುವ ಶಾಸ್ತ್ರೀಯ ಸಂಗೀತ ಔಷಧವಿದ್ದಂತೆ ಎಂದರು.

      ಮಂಥನ ವೇದಿಕೆ ಅಧ್ಯಕ್ಷ ಉದಯ ನಾಸಿಕ ಮಾತನಾಡಿ, ಸ್ಥಳೀಯ ಸರಸ್ವತಿ ಸಂಗೀತ ವಿದ್ಯಾಲಯವು ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರುಮುಖವಾಗುತ್ತಿರುವುದನ್ನು ಗಮನಿಸಿದರೆ ಪಾಲಕರಲ್ಲಿಯೂ ಸಂಗೀತಾಸಕ್ತಿ ಹೆಚ್ಚುತ್ತಿರುವ ದ್ಯೋತಕವಾಗಿದೆ. ಇಂಥ ವಾತಾವರಣ ನಿರ್ಮಾಣಗೊಳಿಸಿದ ಸಂಗೀತ ವಿದ್ಯಾಲಯ, ಹಲವು ಉದಯೋನ್ಮುಖ ಕಲಾವಿದರನ್ನು ಹುಟ್ಟುಹಾಕುವುದರಲ್ಲಿ ಯಶಸ್ವಿಯಾಗುತ್ತಿದೆ. ಇಂಥ ಕಾರ್ಯಕ್ರಮಗಳ ಮೂಲಕ ರಾಷ್ಟ್ರಮಟ್ಟದ ಕಲಾವಿದರನ್ನು ಹಾನಗಲ್ಲಿಗೆ ಪರಿಚಯಿಸಿ ಸಂಗೀತಾಸಕ್ತರ ಮನ ತಣಿಸಲು ಶ್ರಮಿಸುತ್ತಿದೆ ಎಂದರು.

        ಉದಾತ್ತ ಕಲಾ ಅಕಾಡೆಮಿ ನಿರ್ದೇಶಕ, ರಾಜಗುರು ಅವರ ಶಿಷ್ಯರಾದ ಡಾ,ಶಾಂತಾರಾಮ ಹೆಗಡೆ ಮಾತನಾಡಿ, ಕುಮಾರ ಶಿವಯೋಗಿಗಳು ಪಂ.ಪಂಚಾಕ್ಷರರು, ಪುಟ್ಟರಾಜರಿಗೆ ಸಂಗೀತ ಕ್ಷೇತ್ರದಲ್ಲಿ ಮಾರ್ಗದರ್ಶನ ನೀಡಿದ್ದರ ಫಲವಾಗಿ ಸಂಗೀತ ಕ್ಷೇತ್ರದಲ್ಲಿ ಅವರ ಹೆಸರುಗಳು ಅಜರಾಮರವಾದವು. ಅದರಂತೆ ಪಂಚಾಕ್ಷರರ ಶಿಷ್ಯರಾದ ಪಂ.ರಾಜಗುರು ಅವರ ಶಿಷ್ಯ ಬಳಗವೂ ಇಡೀ ದೇಶಾದ್ಯಂತ ಹಬ್ಬಿದೆ. ಅವರು ಸಂಗೀತ ಕ್ಷೇತ್ರಕ್ಕೆ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿದ್ದರು. ಹಾನಗಲ್ಲಿಗೂ ಇಂದು ನರಸಿಂಹ ಕೋಮಾರ ಅವರ ಮೂಲಕ ಗುರು ಪರಂಪರೆ ಮುಂದುವರಿದಿರುವುದು ವಿಶೇಷ ಎಂದರು.

     ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ ಮಾತನಾಡಿದರು. ಸರಸ್ವತಿ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು. ಸಂಗೀತ ಶಿಕ್ಷಕ ನರಸಿಂಹ ಕೋಮಾರ ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು. ಗಿರೀಶ ದೇಶಪಾಂಡೆ ಸ್ವಾಗತಿಸಿದರು. ಸ್ಥಳೀಯ ಕಲಾವಿದ ಶಾಂತೇಶ ಕರಗುದರಿ ವಂದಿಸಿದರು.

        ನಂತರ ನಡೆದ ಸೃತಿ ಸಂಗೀತೋತ್ಸವದಲ್ಲಿ ಕಲಾವಿದರಾದ ಡಾ.ಅರಣ್ಯಕುಮಾರ ಅವರಿಂದ ಸಿತಾರ್ ವಾದನ, ಡಾ.ಶಾಂತಾರಾಮ ಹೆಗಡೆ ಹಾಗೂ ವಿವೇಕ್ ಹೆಗಡೆ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಂಡಿತು. ಅಲ್ಲಮಪ್ರಭು ಕಡಕೋಳ, ಶ್ರೀಪಾದ ಅಕ್ಕಿವಳ್ಳಿ ತಬಲಾಸಾಥ ನೀಡಿದರು. ವಿದ್ವಾನ್ ದತ್ತಾತ್ರೇಯ ಗಾಂವ್ಕರ್ ಹಾರ್ಮೊನಿಯಂ ಸಾಥ್ ನೀಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link