‘ಪಾಸ್’ ಆಗಲೇ ಇಲ್ಲ ನಗರದ ರೈಲ್ವೇ ಅಂಡರ್ ಪಾಸ್…!!

ತುಮಕೂರು:

       ನಗರದ ಶೆಟ್ಟಿಹಳ್ಳಿ ರೈಲ್ವೆ ಅಂಡರ್‍ಪಾಸ್ ಅನ್ನು ಆ ಭಾಗ ಜನ ಇದು ಅಂಡರ್ ಪಾಸ್ ಅಲ್ಲ, ಅಟ್ಟರ್ ಫೇಲ್ ಅಂತ ಗೇಲಿ ಮಾಡುತ್ತಾರೆ. ದಡ್ಡ ವಿದ್ಯಾರ್ಥಿ ಆನ್ಯೂಯಲ್, ಸಪ್ಲಿಮೆಂಟರಿಯಲ್ಲಿ ಒಂದೊಂದೇ ಸಬ್ಜೆಕ್ಟ್ ಪಾಸುಮಾಡಿಕೊಳ್ಳುವ ಪ್ರಯತ್ನದ ರೀತಿಯಲ್ಲಿರುವ ಈ ಅಂಡರ್‍ಪಾಸ್‍ನ ಒಟ್ಟಾರೆ ಫಲಿತಾಂಶ ಫೇಲ್ ಅಂತ ಜನ ಘೋಷಿಸಿಬಿಟ್ಟಿದ್ದಾರೆ. ಚಪ್ಪರ(ಮೇಲ್ಛಾವಣಿ) ಹಾಕಿಸಿಕೊಂಡಿರುವ ಅಪರೂಪದ ಅಂಡರ್‍ಪಾಸ್ ಅನ್ನುವ ನಗೆಪಾಟಲಿಗೂ ಈಡಾಗಿದೆ ಈ ಅಂಡರ್ ಪಾಸ್!

         ತುಮಕೂರು ನಗರಾಭಿವೃದ್ದಿ ಪ್ರಾಧಿಕಾರ 12 ಕೋಟಿ ರೂ ಗೂ ಹೆಚ್ಚು ಹಣ ವೆಚ್ಚ ಮಾಡಿ ನಿರ್ಮಿಸಿರುವ ಈ ಅಂಡರ್‍ಪಾಸ್ ಅಪ್ಪಟ ಅವೈಜ್ಞಾನಿಕ ಎಂದು ತಜ್ಞರೇ ಹೇಳುತ್ತಾರೆ. ಆರತಿ ತಗೊಂಡ್ರೆ ಉಷ್ಣ, ತೀರ್ಥ ತಗೊಂಡ್ರೆ ಶೀತಾ ಎನ್ನುವಂತೆ ಈ ಅಂಡರ್‍ಪಾಸ್‍ನಲ್ಲಿ ಬೇಸಿಗೆಯಲ್ಲೊಂದು, ಮಳೆಗಾಲದಲ್ಲೊಂದು ರೀತಿಯ ಸಮಸ್ಯೆ.

       ಮಳೆಗಾಲದಲ್ಲಿ ಅಂಡರ್‍ಪಾಸ್ ಒಳಗೆ ನೀರು ಸಂಗ್ರಹವಾಗುತ್ತದೆ. ಪ್ರವಾಹದ ಸಂದರ್ಭದಲ್ಲಿ ನದಿ ತೀರದ ಜನರನ್ನು ಸ್ಥಳಾಂತರಿಸುವಂತೆ, ಇಲ್ಲಿ ಮಳೆ ನೀರು ಸಂಗ್ರಹವಾಗಿ ಸಂಚಾರಕ್ಕೆ ಅಡ್ಡಿಯಾದಾಗ ಈ ಮಾರ್ಗದ ಸಂಚಾರ ಸ್ಥಗಿತಗೊಳಿಸಿ, ಪರ್ಯಾಯ ಮಾರ್ಗದಲ್ಲಿ ವಾಹನ ಬಿಡಬೇಕಾಗುತ್ತದೆ. ಬೇಸಿಗೆಯಲ್ಲಿ ಇನ್ನೊಂದು ರೀತಿಯ ಸಮಸ್ಯೆ. ಅಂಡರ್‍ಪಾಸ್‍ನಲ್ಲಿ ತುಂಬಿರುವ ಮಣ್ಣು ವಾಹನಗಳ ಓಡಾಟಕ್ಕೆ ಸಿಕ್ಕಿ ಧೂಳಾಗಿ ವಾಹನ ಸವಾರರನ್ನು ಉಸಿರುಕಟ್ಟಿಸುತ್ತದೆ. ದ್ವಿಚಕ್ರ ವಾಹನ ಸವಾರರು ಮುಖಗವಸು ಹಾಕಿಕೊಳ್ಳಬೇಕಾಗುತ್ತದೆ. ಕಾರಿನವರು ಕಿಟಕಿ ಗಾಜು ಏರಿಸಿ ಚಲಾಯಿಸಬೇಕಾಗುತ್ತದೆ.

        ಮೇಲ್ಛಾವಣಿ ಹೊದಿಸಿರುವ ಕಾರಣ ಅಂಡರ್‍ಪಾಸ್‍ನಲ್ಲಿ ಏಳುವ ಧೂಳು ಹೊರ ಹೋಗದೆ ಅಲ್ಲೇ ದಟ್ಟವಾಗಿ ಕವಿದುಬಿಡುತ್ತದೆ. ಅಂಡರ್ ಪಾಸ್ ಅನ್ನು ಪಾಸ್ ಆಗುವವರು ಉಸಿರು ಬಿಗಿಹಿಡಿದು ಹೋಗಬೇಕಾಗುತ್ತದೆ. ಅಸ್ತಮ ಸಮಸ್ಯೆ ಇರುವವರು ಅಂಡರ್‍ಪಾಸ್ ಒಳಗೆ ಇಳಿಯುವುದೇ ಬೇಡ.

        ಈ ಕೆಳ ಸೇತುವೆ ನಿರ್ಮಾಣಗೊಂಡು ಮೂವರು ಶಾಸಕರ ಅವಧಿ ಕಂಡಿದೆ. ಪ್ರತಿ ಬಾರಿಯ ತೊಂದರೆ ವೇಳೆ ನಿವಾರಣೆಗೆ ಅಧಿಕಾರಿಗಳು ತಮ್ಮ ಪ್ರಜ್ಞೆಗೆ ತೋಚಿದ್ದನ್ನು ಮಾಡಿ ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಒಂದು ಎಡವಟ್ಟು ರಿಪೇರಿ ಮಾಡಲು ಹೋಗಿ ಇನ್ನೊಂದು ಎಡವಟ್ಟು ಮಾಡಿಕೊಂಡಂತೆ ಅನ್ನುವಂತಾಗಿದೆ.

       ತನ್ನ ರಾಜಧಾನಿಯನ್ನ ದೇಹಲಿಯಿಂದ ದೇವಗಿರಿಗೆ, ದೇವಗಿರಿಯಿಂದ ದೆಹಲಿಗೆ ಬದಲಾಯಿಸಿದ ಆಗಿನ ರಾಜನೊಬ್ಬನ ಆಡಳಿತ ವೈಖರಿಯಂತಿದೆ ಅಂಡರ್‍ಪಾಸ್ ಸ್ಥಿತಿ ಎಂದು ಜನ ಆಡಿಕೊಂಡು ನಗುವಂತಾಗಿದೆ.ಸುತ್ತಮುತ್ತಲ ಹತ್ತಾರು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಜನರ ಬಹುನಿರೀಕ್ಷೆಯ ಅಂಡರ್ ಪಾಸ್ ಕಾಮಗಾರಿ ಮುಗಿದು ಸಂಚಾರ ಆರಂಭವಾದಾಗ ಜನ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದರು. ಆದರೆ, ಉದ್ಘಾಟನೆ ದಿನವೇ ಮಳೆ ಬಂದು ಅಂಡರ್ ಪಾಸ್ ನಲ್ಲಿ ನೀರು ತುಂಬಿಕೊಂಡು ಜನರ ಆಶಯ ಕೊಚ್ಚಿಕೊಂಡುಹೋಯಿತು.

        ಆಗಿನಿಂದ ಅಂಡರ್ ಪಾಸ್‍ನ ನೀರು ನಿವಾರಣೆಗೆ ಪರಿಣಿತರೆಲ್ಲಾ ತಲೆ ಕೆಡಿಸಿಕೊಂಡು, ಅಂಡರ್ ಪಾಸ್ ಪಕ್ಕ, ಇದಕ್ಕಿಂತಾ ಆಳದ ಬಾವಿ ತೆಗೆದು ಸೇತುವೆಯಲ್ಲಿ ಸಂಗ್ರಹವಾಗುವ ನೀರನ್ನು ಬಾವಿಗೆ ಹರಿಸಿ, ನಂತರ ಪಂಪ್ ಮೋಟಾರ್ ಬಳಸಿ ನೀರೆತ್ತಿ ಹೊರ ಬಿಡುವ ಯೋಜನೆ ರೂಪುಗೊಂಡು ರಸ್ತೆ ನಡುವೆ ಬಾವಿ ತೆಗೆದರು.

         ಅದು ಪೂರ್ಣ ವಿಫಲವಾಯಿತು. ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಇದೇ ಪರಿಣಿತರು, ಇಡೀ ಅಂಡರ್ ಪಾಸ್ ಗೆ ಮೇಲ್ಛಾವಣಿ ಹೊದಿಸಿ ಮಳೆ ನೀರನ್ನ ತಡೆದರೆ ಹೇಗೆ ಎಂದು ಹೊಸ ಐಡಿಯಾ ಕೊಟ್ಟರು. ಆ ಐಡಿಯಾ ಚಲಾವಣೆಗೆ ಬಂದು ಒಂದೂಕಾಲುಕೋಟಿ ರೂ ಖರ್ಚು ಮಾಡಿ ಚಾವಣಿ ಹಾಕಿಸಿದ್ದೂ ಆಯಿತು. ಅಲ್ಲಿಗೆ ಸಮಸ್ಯೆ ಬಗೆಹರಿಯಿತು ಎಂದು ಕೊಂಡಾಗ ಮತ್ತೊಂದು ಮಳೆ ಸುರಿದು ರಸ್ತೆ ನೀರೆಲ್ಲಾ ಅಂಡರ್ ಪಾಸ್ ಒಳಗೆ ನುಗ್ಗಿ ಮತ್ತದೇ ಅವಾಂತರ ಸೃಷ್ಠಿಸಿತು. ಇನ್ನೂ ಒಂದು ಐಡಿಯಾ ಎನ್ನುವಂತೆ ಅಂಡರ್ ಪಾಸ್‍ನ ದಕ್ಷಿಣ ಭಾಗದ ರಸ್ತೆಯಲ್ಲಿ ಹಂಪ್ಸ್ ಹಾಗೂ ಚರಂಡಿಗೆ ಜಾಲರಿ ನಿರ್ಮಿಸಿ ನೀರು ಒಳನುಗ್ಗುವ ಪ್ರಯತ್ನ ತಡೆಯವ ಪ್ರಯತ್ನ ಮಾಡಲಾಗಿದರೂ ಇಂದಿಗೂ ಮಳೆ ಬಂದರೆ ಅದೇ ಅವಾಂತರ.

        ಇಷ್ಟು ಸಾಲದು ಎಂಬಂತೆ ಅಂಡರ್ ಪಾಸ್‍ನ ಸಂಪರ್ಕ ರಸ್ತೆಗಳು ನಿಮಾಣವಾಗಿಲ್ಲ. ಸರ್ವೀಸ್ ರಸ್ತೆಯೂ ಇಲ್ಲ. ರಾಘವೇಂದ್ರ ಮಠದ ಭಾಗದಲ್ಲಿ ಫುಟ್ ಪಾತ್ ಅಗಲದಷ್ಟು ರಸ್ತೆ ಮಾಡಿ ಕೈಬಿಡಲಾಗಿದೆ. ಉಪ್ಪಾರಹಳ್ಳಿ ಫೈಓವರ್ ಕಡೆಯಿಂದ ಬರುವ ವಾಹನಗಳಿಗೆ ಈ ರಸ್ತೆಯೇ ದಿಕ್ಕು. ಕಿರಿದಾದ ರಸ್ತೆಯಲ್ಲಿ ವಾಹನಗಳು ಮಖಾಮುಖಿ ಓಡಾಡಬೇಕಾದ ಫಜೀತಿ ಪರಿಸ್ಥಿತಿ.

         ಇನ್ನು, ಅಂಡರ್ ಪಾಸ್ ಪ್ರವೇಶಿಸುವ ಕಿರಿದಾದ ಕೆಂಪಣ್ಣ ಅಂಗಡಿ ವೃತ್ತದಲ್ಲಿ ಯಾವ ವಾಹನಗಳು ಯಾವ ಕಡೆ ಹೋಗಬೇಕು ಎಂಬ ಗೊಂದಲ ಉಂಟಾಗುತ್ತದೆ. ಹಬ್ಬಹರಿದಿನಗಳಲ್ಲಿ ಈ ವೃತ್ತ ಮಾರುಕಟ್ಟೆಯಾಗಿಬಿಡುತ್ತದೆ, ಆಗಿನ ಪರಿಸ್ಥಿತಿ ಅನುಭವಿಸಿವರಿಗೇ ಗೊತ್ತು. ಇಲ್ಲಿ ಸಂಚಾರ ನಿಯಂತ್ರಿಸುವ ಯಾವುದೇ ಪ್ರಯತ್ನ ಆಗಿಲ್ಲ. ದಿನೇದಿನೆ ಇಲ್ಲಿ ಸಂಚಾರ ಒತ್ತಡ ಹೆಚ್ಚಾಗಿ ಸಮಸ್ಯೆಯೂ ಹೆಚ್ಚುತ್ತಿದೆ. ಪರಿಹಾರ ಹೇಗೋ, ಯಾವತ್ತೋ ಗೊತ್ತಿಲ್ಲ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link