ಚಳ್ಳಕೆರೆ
ಗ್ರಾಮೀಣ ಭಾಗಗಳಲ್ಲಿ ಮುಗ್ಧ ಮಕ್ಕಳ ಆರೋಗ್ಯವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಪೌಷ್ಠೀಕ ಆಹಾರವೂ ಸೇರಿದಂತೆ ಅಕ್ಷರ ಹಾಗೂ ಅನ್ನ ಜ್ಞಾನವನ್ನು ನೀಡುವ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ಈ ಕೂಡಲೇ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ಕನಿಷ್ಠ ವೇತನವೂ ಸೇರಿದಂತೆ ಸೇವಾ ಭದ್ರತೆಯನ್ನು ಒದಗಿಸಬೇಕೆಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫಡರೇಷನ್ ರಾಜ್ಯ ಸಂಚಾಲಕ ಸಿ.ವೈ.ಶಿವರುದ್ರಪ್ಪ ಸರ್ಕಾರವನ್ನು ಒತ್ತಾಯಿಸಿದ್ಧಾರೆ.
ಅವರು, ಸೋಮವಾರ ಇಲ್ಲಿನ ತಾಲ್ಲೂಕು ಕಚೇರಿ ಮುಂದೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ತಹಶೀಲ್ದಾರ್‍ಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಕನಿಷ್ಠ ವೇತನವನ್ನು 18 ಸಾವಿರ ನೀಡುವಂತೆ ಕಡ್ಡಾಯಗೊಳಿಸಿದ್ದರೂ ರಾಜ್ಯ ಸರ್ಕಾರ ಮಾತ್ರ ಕನಿಷ್ಠ ವೇತನ ನೀಡುತ್ತಿಲ್ಲ.
ಈಗಾಗಲೇ ಕಳೆದ ಹಲವಾರು ವರ್ಷಗಳಿಂದ ಮಾಸಿಕ ಪಿಂಚಣಿ ಯೋಜನೆ, ಸೇವಾ ಭದ್ರತೆ, ಹಾಲಿ ಕಾರ್ಯನಿರ್ವಹಿಸುವ ಎಲ್ಲರನ್ನೂ ಖಾಯಂಗೊಳಿಸುವಂತೆ ಒತ್ತಾಯಿಸಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಸಾರಸಗಟಾಗಿ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಯನ್ನು ಈಡೇರಿಸುವಲ್ಲಿ ನಿರ್ಲಕ್ಷ್ಯೆ ವಹಿಸಿದೆ.
ಈ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದು, ಬೇಡಿಕೆಯನ್ನು ಈಡೇರಿಸದೇ ಇದ್ದಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳುವ ಎಚ್ಚರಿಕೆ ಅವರು ನೀಡಿದರು.
ಜಿಲ್ಲಾ ಉಪಾಧ್ಯಕ್ಷೆ ಸಿ.ನಾಗರತ್ನಮ್ಮ ಮಾತನಾಡಿ, ರಾಜ್ಯದ ಪುಟ್ಟ ಮಕ್ಕಳ ಲಾಲನೆ, ಪೋಷಣೆಯ ಜವಾಬ್ದಾರಿ ಹೊತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸೌಲಭ್ಯ ನೀಡುವಲ್ಲಿ ಸರ್ಕಾರ ವಿಫಲವಾಗಿದ್ದು ಖಂಡನೀಯ. ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಮಕ್ಕಳ ಸೇವೆಯನ್ನು ಮಾಡುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಇನ್ನೂ ಹೆಚ್ಚಿನ ಸೌಲಭ್ಯವನ್ನು ಸರ್ಕಾರ ನೀಡಬೇಕಿದೆ. ಆದರೆ, ನಮ್ಮ ಮನವಿಯನ್ನು ಪುರಸ್ಕರಿಸುವ ಔದಾರ್ಯ ಈ ಸರ್ಕಾರಕ್ಕೆ ಇಲ್ಲವೆಂದರು.
ಜಿಲ್ಲಾ ಸಂಚಾಲಕ ದೊಡ್ಡ ಉಳ್ಳಾರ್ತಿ ಕರಿಯಣ್ಣ ಮಾತನಾಡಿ, ಮಕ್ಕಳ ಪೋಷಣೆಯಲ್ಲಿ ತಾಯಂದಿರ ಪಾತ್ರ ಅಪಾರವಾಗಿದ್ದು, ಈ ಪಾತ್ರವನ್ನು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಯಶಸ್ಸಿಯಾಗಿ ನಿರ್ವಹಿಸುತ್ತಾ ಬಂದಿದ್ಧಾರೆ. ಅವರು ಸರ್ಕಾರದಿಂದ ಹೆಚ್ಚಿನ ರೀತಿಯ ಯಾವುದೇ ಸೌಲಭ್ಯಗಳನ್ನು ನಿರೀಕ್ಷೆ ಮಾಡದೆ ಕೇವಲ ಬದುಕಲು ಅಗತ್ಯವಿರುವ ಕನಿಷ್ಠ ವೇತನವನ್ನು ಕೇಳುತ್ತಿದ್ದು, ಸರ್ಕಾರ ಈ ಮನವಿಯನ್ನು ಆದಷ್ಟು ಬೇಗ ಈಡೇರಿಸಬೇಕೆಂದರು.
ತಹಶೀಲ್ದಾರ್ ಪರವಾಗಿ ಮನವಿ ಸ್ವೀಕರಿಸಿದ ಶಿರಸ್ತೇದಾರ್ ಮಂಜುನಾಥ ಮಾತನಾಡಿ, ನಿಮ್ಮ ಬೇಡಿಕೆ ಈಡೇರಿಕೆಯ ಬಗ್ಗೆ ಪರಿಶೀಲನೆ ನಡೆಸಲು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷೆ ಆರ್.ವೇದಾವತಿ, ತಾಲ್ಲೂಕು ಸಂಚಾಲಕಿ ಎಚ್.ಗೌರಮ್ಮ, ತಾಲ್ಲೂಕು ಅಧ್ಯಕ್ಷ ಪಿ.ತಿಪ್ಪೇರುದ್ರಪ್ಪ, ಜೆ.ಸಿ.ಸರೋಜಮ್ಮ, ಪಿ.ಪದ್ಮಾವತಿ, ಜಿ.ದುರುಗಮ್ಮ, ಇಂದ್ರಮ್ಮ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.