ಹುಳಿಯಾರು
ಹುಳಿಯಾರು ಹೋಬಳಿ ಬರಕನಹಾಲ್ ಗ್ರಾಮದಲ್ಲಿ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ನಡೆಯುತ್ತಿರುವ ರಾಷ್ಟ್ರೀಯ ವಿಶೇಷ ಶಿಬಿರ ಕೆಲ ಹೊಸತನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅಲ್ಲದೆ ಶಿಬಿರರ್ಥಿಗಳಿಗೆ ಹೊಸ ಹುರುಪು ಮೂಡಿಸುತ್ತಿದೆ.
ಸಾಮಾನ್ಯವಾಗಿ ಎನ್ಎಸ್ಎಸ್ ಶಿಬಿರಗಳಲ್ಲಿ ರಸ್ತೆ, ಚರಂಡಿ ಹಾಗೂ ಅನೈರ್ಮಲ್ಯ ತಾಣಗಳನ್ನು ಸ್ವಚ್ಚ ಮಾಡುವುದು ನೋಡಿದ್ದೇವೆ. ಆದರೆ ಬರಕನಹಾಲ್ ಗ್ರಾಮದಲ್ಲಿ ನಡೆಯುತ್ತಿರುವ ಎನ್ಎಸ್ಎಸ್ ಶಿಬಿರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ವಿಶ್ವಭಾರತಿ ಪ್ರೌಢಶಾಲೆಯ ಆವರಣವನ್ನು ಸ್ವಚ್ಚ ಮಾಡಲಾಯಿತ್ತಲ್ಲದೆ ಶಿಬಿರಾರ್ಥಿಗಳೇ ಶಾಲಾ ಕೊಠಡಿ, ಅಡಿಗೆ ಕೋಣೆ ಹಾಗೂ ಕಾಂಪೌಂಡ್ಗಳಿಗೆ ಸುಣ್ಣ ಬಣ್ಣ ಬಳಿದು ಅಚ್ಚರಿ ಮೂಡಿಸಿದರು.
ಶಿಬಿರದ ಕಾರ್ಯಕ್ರಮದ ಪಟ್ಟಿಯಲ್ಲಿ ಬಣ್ಣ ಬಳಿಯುವ ಕಾರ್ಯಕ್ರಮ ಇರಲಿಲ್ಲ. ಆದರೆ ಊರಿಗೆ ಬಂದು ಶಿಬಿರ ಆರಂಭಿಸಿದಾಗ ಬಣ್ಣವಿಲ್ಲದೆ ಕಳೆಗುಂದಿದ್ದ ಕಾಂಪೌಂಡ್ ನೋಡಿ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಅವರೇ ಹೊಸದಾಗಿ ಬಣ್ಣ ಬಳಿಯುವ ಕಾರ್ಯಕ್ರಮ ಸೇರಿಸಿದರು. ಶಾಲೆಯ ಮುಖ್ಯಶಿಕ್ಷಕಿ ಪ್ರೇಮಲೀಲಾ ಅವರೂ ಸಹ ಸಹಕಾರ ನೀಡಿದ ಫಲವಾಗಿ ಬಣ್ಣ ಬಳಿದು ಶಾಲೆಗೆ ಹೊಸ ಕಳೆ ನೀಡಲಾಗಿದೆ ಎಂದು ಎನ್ಎಸ್ಎಸ್ ಶಿಬಿರಾಧಿಕಾರಿ ಮೋಹನ್ ತಿಳಿಸಿದರು.
ಬೀದಿಯ ಕಸ ಗುಡಿಸುವುದು, ಚರಂಡಿಯ ತ್ಯಾಜ್ಯ ಎತ್ತುವುದು, ಅನಗತ್ಯ ಗಿಡಗಂಟೆಗಳನ್ನು ಕೀಳುವುದು ಸುಲಭದ ಕೆಲಸ. ಆದರೆ ಸುಣ್ಣ ಬಣ್ಣ ಬಳಿಯುವುದು ಅಸಾಧ್ಯವಾದ ಎಲ್ಲರೂ ಮಾಡಲಾಗದ ವಿಶೇಷ ಕಲೆವುಳ್ಳ ಕಠಿಣ ಕೆಲಸವಾಗಿದೆ. ಸದಾ ಓದು, ಆಟದಲ್ಲಿ ತಲೀನರಾಗುವ ವಿದ್ಯಾರ್ಥಿಗಳು ಈ ಕಠಿಣ ಕೆಲಸ ಕೈಗೆತ್ತಿಕೊಂಡರು. ಎಚ್.ಎಂ.ಮೋಹನ್, ಪ್ರವೀಣ್ ಕುಮಾರ್, ಮಧು, ಪುನೀತ್, ಮಂಜುನಾಥ್, ನಟರಾಜ್, ಕುಮಾರ್, ಬೀರಪ್ಪ, ಸಿದ್ದರಾಜು ಅವರನ್ನೊಳಗೊಂಡ 8 ವಿದ್ಯಾರ್ಥಿಗಳ ತಂಡ ನೋಡನೋಡುತ್ತಿದ್ದಂತೆ ಮಾಸಿದ್ದ ಅಂಗನವಾಡಿ, ಪೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಕಾಂಪೌಡ್, ಗೋಡೆಗಳು ಕಂಗೊಳಿಸುವಂತೆ ಮಾಡಿದ್ದಾರೆ.
ಹಬ್ಬದ ಸಂದರ್ಭದಲ್ಲಿ ನಮ್ಮ ಮನೆ ಗೋಡೆಗೆ ಬಣ್ಣ ಬಳಿಯುತ್ತಾ ಬಳಿಯುತ್ತಾ ಅಲ್ಪಸ್ವಲ್ಪ ಬಣ್ಣ ಹೊಡೆಯುವುದನ್ನು ಕಲಿತೆ. ನಂತರ ಸ್ನೇಹಿತು, ನೆಂಟರಿಷ್ಟರ ಮನೆಗಳಿಗೂ ಹೋಗಿ ಬಣ್ಣ ಹೊಡೆದು ಕಲೆ ಸಿದ್ಧಿಸಿಕೊಂಡೆ. ಎನ್ಎಸ್ಎಸ್ ಶಿಬಿರಾರ್ಥಿಗಳಲ್ಲಿ ನಾನು ಮತ್ತು ವಿ.ಮಧು ಬಿಟ್ಟರೆ ಉಳಿದವರು ಎಂದೂ ಬ್ರೆಷ್ ಹಿಡಿದಿಲ್ಲ. ಆದರೂ ನಮ್ಮೊಂದಿಗೆ ಕೈ ಜೊಡಿಸಿದ ಫಲವಾಗಿ ಕೇವಲ ಎರಡು ದಿನದಲ್ಲಿ ಬಣ್ಣ ಬಳಿಯುವ ಕೆಲಸ ಮುಗಿಸಿದ್ದೇವೆ. ಶಿಬಿರದಲ್ಲಿ ಅದೂ ಶಾಲೆಗಳಿಗೆ ಬಣ್ಣ ಬಳಿದಿದ್ದು ನಮಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ಕಾಲೇಜ್ ಲೈಫ್ನಲ್ಲಿ ಎಂದೂ ಮರೆಯಲಾಗದೆ ಕ್ಷಣವಾಗಿದೆ ಎಂದು ಶಿಬಿರಾರ್ಥಿ ನವೀನ್ ಹೇಳಿಕೊಳ್ಳುತ್ತಾರೆ.
ಒಟ್ಟಾರೆ ಸದಾ ಹೊಸತಕ್ಕೆ ತುಡಿಯುವ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಎನ್ಎಸ್ಎಸ್ ಶಿಬಿರಗಳ ಕೆಲ ಅಲಿಖಿತ ನಿಯಮಗಳನ್ನು ಮೀರಿ ಹೊಸಹೊಸ ಪ್ರಯೋಗಗಳು ನಡೆಯುತ್ತಿವೆ. ಈ ವಿಭಿನ್ನ ಕಾರ್ಯಗಳು ಶಿಬಿರಾರ್ಥಿಗಳಲ್ಲದೆ ಗ್ರಾಮಸ್ಥರಲ್ಲಿ ಸ್ಪೂರ್ತಿ ಮತ್ತು ಕ್ರಿಯಾಶೀಲತೆ ತರುವ ಜೊತೆಗೆ ನೆನಪಿನಲ್ಲಿ ಉಳಿಯುವ ಕೆಲಸಗಳಾಗಿ ಮಾರ್ಪಟ್ಟವೆ. ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಹೇಳಿದಂತೆ ಗ್ರಾಮಸ್ಥರು ಶಿಬಿರಾರ್ಥಿಗಳು ಮಾಡಿದ ಕೆಲಸಗಳನ್ನು ಮುಂದುವರಿಸಿಕೊಂಡು ಹೋದಾಗ ಮಾತ್ರ ಶಿಬಿರ ಮಾಡಿದಕ್ಕೂ ಸಾರ್ಥಕತೆ ಬರುತ್ತದೆ.