ತುಮಕೂರು :
ಕೇಂದ್ರ ಸರ್ಕಾರವು ಆಗಸ್ಟ್ 25ರಂದು ಹೆಸರು ಕಾಳಿಗೆ ಬೆಂಬಲ ಬೆಲೆ ನಿಗದಿಗೊಳಿಸಿ ಆದೇಶ ಹೊರಡಿಸಿದ್ದು, ಜಿಲ್ಲೆಯಲ್ಲಿ ರೈತರು ಬೆಳೆದ ಹೆಸರು ಕಾಳು ಖರೀದಿಗೆ ಅತಿ ಶೀಘ್ರವಾಗಿ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತಾನಾಡಿದ ಅವರು, ಜಿಲ್ಲೆಯಲ್ಲಿ ಹೆಸರು ಕಾಳಿಗೂ ಬೆಂಬಲ ಬೆಲೆ ನೀಡಲು ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಹೆಸರು ಕಾಳು ಖರೀದಿಗಾಗಿ ಕೇಂದ್ರ ಸರ್ಕಾರ ನಫೆಡ್ ಸಂಸ್ಥೆ ಹಾಗೂ ಕರ್ನಾಟಕ ಸಹಕಾರ ಮಹಾ ಮಂಡಳಿಯನ್ನು ಖರೀದಿ ಸಂಸ್ಥೆಯನ್ನಾಗಿ ಗುರ್ತಿಸಿದ್ದು, ಸೆಪ್ಟಂಬರ್ 13 ರಿಂದ ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ಅಲ್ಲದೇ ಗರಿಷ್ಠ ಪ್ರಮಾಣ ಪ್ರತಿ ಎಕರೆಗೆ 4 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ 6 ಕ್ವಿಂಟಾಲ್ ಖರೀದಿ ಪ್ರಮಾಣವನ್ನು ನಿಗದಿಗೊಳಿಸಬೇಕೆಂದು ಅವರು ಸೂಚನೆ ನೀಡಿದರು.
ರೈತರು ಫ್ರೂಟ್ ಐಡಿ ಯಲ್ಲಿ ಹೆಸರುಕಾಳು ಖರೀದಿಗೆ ಸಂಬಂಧಿಸಿದಂತೆ ನೋಂದಣಿಗೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ರಚಿಸಿರುವ ಟಾಸ್ಕ್ ಪೋರ್ಸ್ ಕಮಿಟಿಯು ಪರಿಶೀಲನೆ ನಡೆಸಿ ದೋಷಗಳು ಕಂಡು ಬಂದಲ್ಲಿ ಸಂಬಂಧಿಸಿದ ತಹಶೀಲ್ದಾರ್ ಗಮನಕ್ಕೆ ತರಬೇಕು. ಪ್ರತಿ ದಿನ ಖರೀದಿ ಕುರಿತ ಮಾಹಿತಿಯನ್ನು ಕಾಲ ಕಾಲಕ್ಕೆ ಒದಗಿಸಬೇಕೆಂದು ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಎ.ಪಿ.ಎಂ.ಸಿ ಉಪ ನಿರ್ದೇಶಕ ದ್ವಾರಕ ಪ್ರಸಾದ್, ಶಾಖಾ ವ್ಯವಸ್ಥಾಪಕ ಕಿರಣ್ ಹೆಚ್., ಕಾರ್ತಿಕ್ ಜಿ.ಬಿ. ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
