ತುಮಕೂರು :
ದೇಶದಲ್ಲೇ ಮೊದಲ ಬಾರಿಗೆ ಮೃತ ರೈತರ ಸಹಕಾರಿ ಸಾಲ ತೀರುವಳಿ ಯೋಜನೆ, ಕೋವಿಡ್ ಮೊದಲ ಅಲೆಯಲ್ಲಿ ಸಂಕಷ್ಟಕ್ಕೀಡಾದ ಬೀದಿ ಬದಿ ವ್ಯಾಪಾರಿಗಳಿಗೆ ಜಾಮೀನುರಹಿತ ಬಂಡವಾಳ ಸಾಲ, ಬರದ ಸಂದರ್ಭದಲ್ಲಿ ಗೋಶಾಲೆಯ ರೈತರಿಗೆ ಉಚಿತ ಉಪಹಾರ ಯೋಜನೆ.., ಹೀಗೆ ಹಲವು ಜನಕಲ್ಯಾಣ ಕಾರ್ಯಕ್ರಮಗಳನ್ನು ಸಹಕಾರ ಕ್ಷೇತ್ರಕ್ಕೆ ಪರಿಚಯಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರು, ಪ್ರಸಕ್ತ ಕೋವಿಡ್ ನಿಂದ ಮೃತರಾದ ರೈತ ಕುಟುಂಬದವರು ಸಹಕಾರಿ ಸಂಘಗಳಲ್ಲಿ ಪಡೆದ 1 ಲಕ್ಷದವರೆಗಿನ ಬೆಳೆಸಾಲ ಮನ್ನಾ ಯೋಜನೆ ಪ್ರಕಟಿಸುವ ಮೂಲಕ ಇಡೀ ರಾಷ್ಟ್ಟಕ್ಕೆ ತುಮಕೂರು ಡಿಸಿಸಿ ಬ್ಯಾಂಕ್ ಮತ್ತೊಮ್ಮೆ ಮಾದರಿ ಎನಿಸುವಂತಾಗಿದೆ.
ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಈ ವಿಶೇಷ ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಬ್ಯಾಂಕ್ ವ್ಯಾಪ್ತಿಯಲ್ಲಿ ಬರುವ ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘಗಳಲ್ಲಿ(ಪ್ಯಾಕ್ಸ್) ಕೋವಿಡ್‍ನಿಂದ ಮೃತರಾದ ರೈತ ಕುಟುಂಬದವರು ಯಾರೇ ಸಾಲ ಪಡೆದಿದ್ದರೂ ಅಂತಹವರ ಲಕ್ಷದವರೆಗಿನ ಬೆಳೆ ಸಾಲ ಮನ್ನಾ ಆಗಲಿದೆ. ಈ ಮೂಲಕ ಕೋವಿಡ್‍ನಿಂದ ಮನೆ ಸದಸ್ಯರನ್ನು ಕಳೆದುಕೊಂಡು ಕಂಗಾಲಾಗಿರುವ ರೈತಾಪಿ ಕುಟುಂಬಗಳ ಸಾಲದ ಹೊರೆ ಇಳಿಸುವ ಮಹತ್ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ವಿಶೇಷ ಯೋಜನೆ ಪ್ರಕಟಿಸಿರುವುದಕ್ಕೆ ರಾಜ್ಯದ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವು ರೈತ ಸಂಘಟನೆಗಳು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರನ್ನು ಅಭಿನಂದಿಸಿದ್ದಾರೆ.
ನೆರವಿನ ಅರ್ಜಿ ಸಲ್ಲಿಸಲು ಹತ್ತು ದಿನ ಕಾಲಾವಕಾಶ:
ಕೋವಿಡ್‍ನಿಂದ ಜಿಲ್ಲೆಯ ರೈತಾಪಿ ವರ್ಗದ ಕುಟುಂಬ ಸದಸ್ಯರು ಯಾರೇ ಮೃತಪಟ್ಟಿದ್ದರೂ ಆ ಮರಣ ಹೊಂದಿದ ಕುಟುಂಬ ಸದಸ್ಯರು ಜಿಲ್ಲಾ ಬ್ಯಾಂಕ್ ವ್ಯಾಪ್ತಿಯಲ್ಲಿ ಬರುವ ಪ್ಯಾಕ್ಸ್‍ಗಳಲ್ಲಿ ಬೆಳೆಸಾಲ ಪಡೆದಿದ್ದರೆ, ಗರಿಷ್ಠ ಲಕ್ಷ ರೂ. ಮಿತಿಯೊಳಗೆ ಅಂತಹವರ ಸಾಲ ಮನ್ನಾ ಆಗಲಿದೆ. ಇದರ ಪ್ರಯೋಜನ ಪಡೆಯಲು ರೈತಾಪಿ ವರ್ಗದ ಕುಟುಂಬವರ್ಗದವರು, ಸಹಕಾರಿಯಲ್ಲಿ ಪಡೆದಿರುವ ಬೆಳೆ ಸಾಲದ ವಿವರ, ಅಗತ್ಯ ಮರಣ ಪತ್ರವನ್ನು ಹತ್ತು ದಿನಗಳ ಒಳಗಾಗಿ ಡಿಸಿಸಿ ಬ್ಯಾಂಕ್ ಶಾಖೆಗಳಿಗೆ ಸಲ್ಲಿಸಬೇಕೆಂದು ತಿಳಿಸಲಾಗಿದೆ.
ರೈತರಿಗೆ ಸಹಾಯಹಸ್ತ ಚಾಚುವಲ್ಲಿ ಜಿಲ್ಲೆ ಡಿಸಿಸಿ ಬ್ಯಾಂಕ್ ಸದಾ ಮುಂಚೂಣಿ:
ರಾಜ್ಯದ ಸಹಕಾರಿ ವಲಯದ ಯಾವುದೇ ಬ್ಯಾಂಕುಗಳೂ ತೆಗೆದುಕೊಳ್ಳಲಾಗದಂತಹ ಮಹತ್ವದ ಯೋಜನೆಗಳನ್ನು ಪ್ರಕಟಿಸಿರುವ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಬೆಳೆ ಸಾಲಗಳನ್ನು ರೈತರಿಗೆ ಸಕಾಲಕ್ಕೆ ಒದಗಿಸುವಲ್ಲೂ ಮುಂಚೂಣಿಯಲ್ಲಿದೆ. 2020-21ನೇ ಸಾಲಿನಲ್ಲಿ 1,10,131 ಮಂದಿಗೆ 520.2ಕೋಟಿಯಷ್ಟು ಅಲ್ಪಾವಧಿ ಬೆಳೆ ಸಾಲ ವಿತರಿಸಿದ್ದು, ಪ್ರಸಕ್ತ ಸಾಲಿನಲ್ಲೂ 1.4.2021ರಿಂದ ಇಲ್ಲಿಯವರೆಗೆ 14,732 ಮಂದಿಗೆ 81.84 ಕೋಟಿಯಷ್ಟು ಬೆಳೆಸಾಲವನ್ನು ಪ್ಯಾಕ್ಸ್‍ಗಳ ಮೂಲಕ ವಿತರಣೆ ಮಾಡಿದೆ.
ಕಳೆದ ಸಾಲಿನಲ್ಲಿ ಮಧ್ಯಮಾವಧಿ ಕೃಷಿ ಸಾಲವನ್ನುಕಳೆದ ಸಾಲಿನಲ್ಲಿ 273ಮಂದಿಗೆ 21.45 ಕೋಟಿಯಷ್ಟು ವಿತರಿಸಿದ್ದು, ಪ್ರಸಕ್ತ ಸಾಲಿನಲ್ಲಿ ಏ.1ರಿಂದ ಈವರೆಗೆ 17 ಮಂದಿಗೆ 2.49ಕೋಟಿ ಸಾಲ ವಿತರಿಸಲಾಗಿದೆ. ಕಳೆದ ಕೋವಿಡ್ ಮೊದಲ ಅಲೆಯಲ್ಲಿ ಸಂಕಷ್ಟಕ್ಕೀಡಾಗಿ ದುಡಿಯುವ ಬಂಡವಾಳವೂ ಇಲ್ಲದೆ ಪರದಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆಯಡಿ ದುಡಿಯುವ ಬಂಡವಾಳ ಒದಗಿಸಿದ್ದ ಡಿಸಿಸಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲೂ ಪಿಎಂ ಸ್ವನಿಧಿ ಯೋಜನೆಯಡಿ ಶ್ರಮಿಕ ವರ್ಗಗಳಿಗೆ ಸಹಾಯಹಸ್ತ ಚಾಚಲು ಮುಂದಾಗಿದೆ.
ಸಾಲ ತೀರುವಳಿ ಯೋಜನೆಯಡಿ 8107 ರೈತ ಕುಟುಂಬಗಳಿಗೆ ನೆರವು :
2014-15ನೇ ಸಾಲಿನಿಂದ ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೆ.ಎನ್.ರಾಜಣ್ಣ ಅವರು ಜಾರಿಗೆ ತಂದ ಮೃತ ರೈತರ ಲಕ್ಷ ರೂ.ವರೆಗಿನ ಸಾಲ ತೀರುವಳಿ ಯೋಜನೆಯಡಿ ಈವರೆಗೆ 8107 ರೈತ ಕುಟುಂಬಗಳು ನೆರವು ಪಡೆದಿದ್ದು, ಮೃತ ರೈತ ಸದಸ್ಯರು ಪಡೆದಿದ್ದ ಸಾಲದ ಹೊಣೆಗಾರಿಕೆಯಿಂದ ಋಣಮುಕ್ತರಾಗಿದ್ದಾರೆ.
ತುಮಕೂರು ಮಾದರಿಯನ್ನೂ ಇತರೆ ಡಿಸಿಸಿ ಬ್ಯಾಂಕ್‍ಗಳು ಅನುಸರಿಸಲಿ: ಸಚಿವ ಎಸ್.ಟಿ.ಸೋಮಶೇಖರ್
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸರಕಾರದಂತೆಯೇ ಸಹಕಾರ ವಲಯವೂ ನೊಂದವರ ಸಂಕಷ್ಟಕ್ಕೆ ಮಿಡಿಯುವ ಕಾರ್ಯ ಮಾಡಲು ಮುಂದಾಗುತ್ತಿರುವುದು ಶ್ಲಾಘನೀಯ. ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರು ಇನ್ನೂ ಒಂದು ಹೆಜ್ಜೆ ಮುಂದೆಇಟ್ಟು ರೈತ ಕುಟುಂಬದಲ್ಲಿ ಯಾರೇ ಕೋವಿಡ್‍ನಿಂದ ಮೃತಪಟ್ಟರೆ ಕುಟುಂಬ ಸದಸ್ಯರ ಸಹಕಾರಿ ಕೃಷಿ ಸಾಲವನ್ನು ಒಂದುಲಕ್ಷದ ಮಿತಿಯೊಳಗೆ ಮನ್ನಾ ಮಾಡುವುದಾಗಿ ಘೋಷಿಸಿರುವುದು ಸ್ವಾಗತಾರ್ಹ. ರಾಜ್ಯದ ಇತರೆ ಡಿಸಿಸಿ ಬ್ಯಾಂಕ್‍ಗಳು ತಮ್ಮ ಲಾಭಾಂಶವನ್ನು ಆಧರಿಸಿ ಈ ಯೋಜನೆಯನ್ನು ಜಾರಿಗೊಳಿಸುವುದು ಸೂಕ್ತ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದ್ದಾರೆ.
ಕೋವಿಡ್‍ನಿಂದಾಗಿ ಎಷ್ಟೋ ರೈತಾಪಿ ಕುಟುಂಬಗಳು ಮನೆಯ ದುಡಿಯುವ ಸದಸ್ಯರನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಅಂತಹ ರೈತ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ಬೆಳೆ ಸಾಲ ಮನ್ನಾ ಯೋಜನೆ ಘೋಷಿಸಲಾಗಿದೆ. ಮೃತ ರೈತರ ಕುಟುಂಬದ ಯಾವುದೇ ಸದಸ್ಯರು ಡಿಸಿಸಿ ಬ್ಯಾಂಕ್ ವ್ಯಾಪ್ತಿಯ ಸಹಕಾರ ಸಂಘಗಳಲ್ಲಿ ಬೆಳೆ ಸಾಲಪಡೆದಿದ್ದರೆ ಲಕ್ಷ ರೂ.ಗಳವರೆಗಿನ ಅವರ ಸಾಲಮನ್ನಾ ಮಾಡಲಾಗುವುದು. ಸಂತ್ರಸ್ತ ರೈತ ಕುಟುಂಬಗಳು ಹತ್ತಿರದ ಡಿಸಿಸಿ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸುವುದು. ರಾಜ್ಯವ್ಯಾಪಿ ಈ ಯೋಜನೆ ಜಾರಿಗೆ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿಯಲ್ಲೂ ಚರ್ಚಿಸುವೆ.
-ಕೆ.ಎನ್.ರಾಜಣ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ