ಹಗರಿಬೊಮ್ಮನಹಳ್ಳಿ:
ಶಾಂತಿ ಮತ್ತು ಸುಸಂಸ್ಕøತಕ್ಕೆ ಹೆಸರಾದ ಭಾರತೀಯರ ಮೇಲೆ ರಣಹೇಡಿಗಳು ಮಾಡುವ ಪೈಶಾಚಿಕ ಕೃತ್ಯದಂತಿರುವ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 78ಬೆಂಗಾವಲು ಪಡೆಯವಾಹನದ ಮೇಲೆ ಐಇಡಿ ದಾಳಿ ನಡೆಸಿ, ವೀರಯೋಧರಾದ ಭಾರತೀಯ ಮಕ್ಕಳು ಸುಮಾರು 44 ಸಿ.ಆರ್.ಪಿ.ಎಫ್.ಯೋಧರು ಮೃತಪಟ್ಟಿರುವುದು ದುರದೃಷ್ಟಕರ ಎಂದು ಮಾಜಿ ಸೈನಿಕ ಗದ್ದಿಕೆರೆಯ ರಾಮರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಸವೇಶ್ವರ ಪುತ್ಥಳಿಯ ಬಳಿ ಯುವಬ್ರಿಗೇಡ್ ನೇತೃತ್ವದಲ್ಲಿ ಸಾರ್ವಜನಿಕರು ಸೇರಿ ಉಗ್ರರ ಸೈನೈಡ್ ಸ್ಪೋಟ ಖಂಡಿಸಿ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾರತೀಯ ಸೇನೆಯ ಮೇಲೆ ನಡೆದಿರುವ ಅತಿದೊಡ್ಡ ದಾಳಿಗಳಲ್ಲಿ ಇದೂ ಒಂದಾಗಿದೆ. ದೇಶದ ಹಾಗೂ ನಮ್ಮನಿಮ್ಮೆಲ್ಲರ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ಹೋರಾಡುತ್ತಿರುವ ಸೈನಿಕರನ್ನು, ಜಾತಿಭೇದ ಮರೆತು, ಪಕ್ಷಾತೀತವಾಗಿ ದೇಶದ ಪ್ರತಿಯೊಬ್ಬ ಪ್ರಜೆಯು ಸ್ಮರಿಸಲೇ ಬೇಕು. ನಮ್ಮ ಕೆಚ್ಚೆದೆಯ ಯೋಧರ ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲ. ಇಂತಹ ಅದೆಷ್ಟೇ ಕುತಂತ್ರಿ ಉಗ್ರರು ಬಂದರೂ ಭಾರತ ದೇಶ ತಲೆಭಾಗುವುದಿಲ್ಲ ಎಂಬುದು ಆ ಕುತಂತ್ರಿ ಬುದ್ದಿಗಳಿಗೆ ಗೊತ್ತಾಗಬೇಕು. ದೇಶಕ್ಕಾಗಿ ಪ್ರಾಣ ಕೊಟ್ಟ ವೀರ ಸೈನಿಕರ ಆತ್ಮಕ್ಕೆ ಭಗವಂತ ಶಾಂತಿ ಕೊಡಲಿ ಎಂದರು
ಸಂಘಟನೆಯ ಸಂಚಾಲಕರಾದ ವೈ.ಕೆ.ಸುನೀಲ್ ಮಾತನಾಡಿ, ನಮಗೆ ಸೈನಿಕರೊಂದಿಗೆ ಸೇರಿ ದೇಶವನ್ನು ಕಾಯುವ ಯೋಗವಂತು ಇಲ್ಲ, ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ದೇಶದ ಹೆಮ್ಮೆಯ ವೀರ ಯೋಧರ ಕುಟುಂಬವರ್ಗಕ್ಕೆ ಧೈರ್ಯತುಂಬುವ ಕೆಲಸವನ್ನು ನಾವು ಮಾಡಬೇಕು ಎಂದರು.
ಸಂಚಾಲಕರಾದ ವಿಶ್ವೇಶ್ವರಗೌಡ ಮತ್ತು ಸುಭಾಷ್ ಮಾತನಾಡಿ, ಗಡಿಯಲ್ಲಿ ಸೈನಿಕರು ಹಗಲಿರುಳು ಎನ್ನದೆ ಪ್ರಾಣದ ಅಂಗುತೊರೆದು ದೇಶವನ್ನು ಕಾಯುತ್ತಿದ್ದಾರೆ ಎಂಬ ಕಾರಣಕ್ಕಾಗಿಯೇ ನಾವು ನೆಮ್ಮದಿಯಿಂದ ಮಲಗುತ್ತಿದ್ದೇವೆ, ಇಂತಹ ವೀರಯೋಧರನ್ನೇ ಕುತಂತ್ರದಿಂದ ಬಲಿ ತೆಗೆದುಕೊಳ್ಳುತ್ತಿರುವುದು ಖಂಡನೀಯ. ಇಂತಹವರನ್ನು ಹಿಡಿದು ನೇಣಿಗೆ ಹಾಕಬೇಕು. ಹುತಾತ್ಮರಾದ ವೀರಯೋಧರ ಮನೆಯವರಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕ ಕೊಟ್ರೇಶ್, ಕೋರಗಲ್ ಗಿರಿರಾಜ್, ದೀಪಕ್ ಕಠಾರೆ, ಟಿ.ಮಹೇಂದ್ರ, ಅಂಬಾಡಿ ನಾಗರಾಜ್, ಕೋರಗಲ್ ಅರುಣ್, ಹೊಳಗುಂದಿ ಶಂಭುಲಿಂಗ, ರಾಘವೇಂದ್ರ ಶೆಟ್ಟಿ, ರಾಜರಾವ್, ಬಿ.ಅನಿಲ್, ಪರಶುರಾಮ್ ದಲಭಂಜನ್, ನಾಗಭೂಷಣ, ಗಣೇಶ, ಬಿ.ಎಂ.ನಾಗಯ್ಯ, ಡಿಶ್ ಸುರೇಶ್ ಮತ್ತಿತರ ಸಾರ್ವಜನಿಕರು ಪಾಲ್ಗೊಂಡಿದ್ದರು.