ಹೊಸಪೇಟೆ :
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕಂಪ್ಲಿ ಶಾಸಕ ಗಣೇಶರವರು ಅತಿ ಶೀಘ್ರದಲ್ಲೇ ಸಚಿವರಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಮಾಜಿ ಸಚಿವ ರಮೇಶ ಜಾರಕಿಹೋಳಿ ಹೇಳಿದರು.
ಇಲ್ಲಿನ ಮೃತ್ಯುಂಜಯ ನಗರದ ಶಾಸಕ ಗಣೇಶ ಅವರ ನಿವಾಸದಲ್ಲಿ ಮಂಗಳವಾರ ಈ ಕುರಿತು ಪತ್ರಕರ್ತರೊಂದಿಗೆ ಮಾತಾಡಿದ ಅವರು, ಮಾನವೀಯತೆ ದೃಷ್ಟಿಯಿಂದ ಸಹೋದರಿ ಜೆ.ಎನ್. ಶ್ರೀದೇವಿ ಮತ್ತು ಮಕ್ಕಳನ್ನು ಮಾತನಾಡಿಸಲು ಬಂದಿದ್ದೇನೆ. ಶಾಸಕ ಆನಂದಸಿಂಗ್ ಮತ್ತು ಗಣೇಶ ನಡುವಿನ ಗಲಾಟೆಯಲ್ಲಿ ಗಣೇಶ ಯಾವುದೇ ತಪ್ಪು ಮಾಡಿಲ್ಲ. ಸುಮ್ಮನೇ ಅವರನ್ನು ಬಲಿಪಶು ಮಾಡಲಾಗಿದೆ. ಗಲಾಟೆ ನಡೆದಾಗ ಭೀಮಾನಾಯ್ಕ್, ಗಣೇಶ ಮತ್ತು ಆನಂದಸಿಂಗ್ ಈ ಮೂವರೇ ಇದ್ದರು. ಈಗ ಭೀಮನಾಯ್ಕ್ ಅವರೇ ಸತ್ಯವನ್ನು ಹೊರಹಾಕಬೇಕಿದೆ ಎಂದರು.
ಗಣೇಶ್ ಅವರ ವಿರುದ್ದ ನೀಡಿದ ದೂರನ್ನು ಆನಂದಸಿಂಗ್ ವಾಪಸ್ ಪಡೆಯಬೇಕು. ಯಾಕೆಂದರೆ ಜಾತಿನಿಂದನೆ ದೂರು ನೀಡುವುದಾಗಿ ಗಣೇಶ್ ಅವರು ಹೇಳಿದ್ದರು. ಆದರೆ ನಾನು ಹಾಗೆ ಮಾಡಬೇಡ ಎಂದು ತಿಳಿಸಿದ್ದೆ. ಪಕ್ಷದ ವರಿಷ್ಠರು ಸಹ ದೂರು ಆನಂದಸಿಂಗ್ ವಿರುದ್ದ ದೂರು ನೀಡದಂತೆ ತಡೆದಿದ್ದರು. ಹೀಗಾಗಿ ನ್ಯಾಯಾಲಯಕ್ಕೆ ಶರಣಾಗುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಗಣೇಶ ತಪ್ಪು ಮಾಡಿದ್ದರೆ ಆತನಿಗೂ ಶಿಕ್ಷೆಯಾಗಲಿ. ಆದರೆ ಗಣೇಶನಿಗೆ ಅನ್ಯಾಯವಾದರೆ ಸಮಾಜ ಸುಮ್ಮನೆ ಕೂರುವುದಿಲ್ಲ ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಆದರೆ ಸರ್ಕಾರದ ಬಗ್ಗೆ ಸ್ವಲ್ಪ ಅಸಮಧಾನವಿದೆ ನಿಜ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸಂಘಟನೆಗಾಗಿ ಶ್ರಮಿಸುವೆ. ಗಣೇಶನನ್ನು ಸಚಿವರನ್ನಾಗಿ ಮಾಡಿದರೆ ನಾನು ತ್ಯಾಗಕ್ಕೆ ಸಿದ್ದನಾಗಿದ್ದೇನೆ ಎಂದರು.
ಮುಖಂಡರಾದ ಗಿರಿಮಲ್ಲಪ್ಪ, ಗುಜ್ಜಲ ಶಿವರಾಮಪ್ಪ, ಜೆ.ಎನ್.ಪರಶುರಾಮ, ಜೆ. ಸತ್ಯನಾರಾಯಣ, ಬ್ಯಾಂಕ್ ಚಂದ್ರಪ್ಪ, ಜೆ.ಎನ್.ವೆಂಕಟೇಶ, ಜೆ.ವಸಂತ, ವೆಂಕೋಬಪ್ಪ, ರಾಮಣ್ಣ, ಜೆ.ಆನಂದ, ನಾಣಿಕೇರಿ ತಿಮ್ಮಯ್ಯ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ