ಮಾಜಿ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಬಿಜೆಪಿ ಸೇರ್ಪಡೆ…!

ಬೆಂಗಳೂರು:

    ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಬಿಜೆಪಿ ಪಕ್ಷಕ್ಕೆ ಬುಧವಾರ ಸೇರ್ಪಡೆಯಾಗಿದ್ದು, ನನ್ನದಲ್ಲದ ತಪ್ಪಿಗೆ ಮನೆ ಸುಟ್ಟು ಹಾಕಿದ್ದರು ಎಂದು ಹೇಳಿದ್ದಾರೆ.

   ಕಳೆದ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಆ ಬಳಿಕ ಬಿಎಸ್​ಪಿ ಪಕ್ಷದಿಂದ ಟಿಕೆಟ್​ ಪಡೆದು ಪುಲಿಕೇಶಿನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋಲುಂಡಿದ್ದರು.

    ಇದೀಗ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅಖಂಡ ಶ್ರೀನಿವಾಸಮೂರ್ತಿ ಅವರ ಸೇರ್ಪಡೆಯಿಂದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರಿಗೆ ಅನುಕೂಲ ಆಗಲಿದೆ ಎನ್ನಲಾಗಿದೆ.

   ಅಖಂಡ ಶ್ರೀನಿವಾಸ್ ರನ್ನು ಬಿಜೆಪಿ ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಇಂದು ನಮ್ಮ ಮಾಜಿ ಶಾಸಕರಾದ ಅಖಂಡ ಶ್ರೀನಿವಾಸ್ ಮೂರ್ತಿ ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗ್ತಿದ್ದಾರೆ. ಶ್ರೀನಿವಾಸ್ ಮೂರ್ತಿ ಅವರು ಬೆಂಬಲಿಗರೊಂದಿಗೆ ಬರ್ತಿದ್ದಾರೆ. ಇದು ಪಕ್ಷಕ್ಕೆ ಹೆಚ್ಚು ಶಕ್ತಿ ನೀಡಲಿದೆ. ಶೋಭಾ ಕರಂದ್ಲಾಜೆ ಅವರು ಎರಡೂವರೆ ಲಕ್ಷ ಅಂತರದಿಂದ ಗೆಲ್ಲೋದು ನಿಶ್ಚಿತ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸಂಧರ್ಭದಲ್ಲಿ ಶ್ರೀನಿವಾಸ್ ಮೂರ್ತಿ ಅವರ ಮನೆ ಸುಟ್ಟು ಹಾಕಿದ್ದರು. ಆಗ ಕಾಂಗ್ರೆಸ್ ಇವರಿಗೆ ಬೆಂಬಲ ನೀಡಲಿಲ್ಲ. ನಾವು ಆಗ ಇವರ ಬೆಂಬಲಕ್ಕೆ ನಿಂತೆವು, ಅವರ ಆಗಮನ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ತಿಳಿಸಿದ್ದಾರೆ.

    ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅಖಂಡ ಶ್ರೀನಿವಾಸ್ ಮೂರ್ತಿ, ಶ್ರೀರಾಮ ನವಮಿಯಂದು ಪಕ್ಷ‌ ಸೇರ್ಪಡೆಯಾಗಲು ಅವಕಾಶ ನೀಡಿದ್ದಾರೆ. ನಾನು ಬಿಜೆಪಿ ಸೇರಲು ಕಾರಣ ಶ್ರೀರಾಮನ ಆಶೀರ್ವಾದ. ಯಡಿಯೂರಪ್ಪ ಮತ್ತು ಶೋಭ ಕರಂದ್ಲಾಜೆ ಅವರ ಆಶೀರ್ವಾದ ಕಾರಣ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಲು ನಾನು ಸಿದ್ಧ. 2018ರಲ್ಲಿ ಅತಿ ಹೆಚ್ಚು ವೋಟು ಪಡೆದು ಗೆದ್ದವನು ನಾನು, ನನಗೆ ಟಿಕೆಟ್ ತಪ್ಪಿಸಿದ್ದು ಕಾಂಗ್ರೆಸ್. ನನ್ನದಲ್ಲದ ತಪ್ಪಿಗೆ ನನ್ನ ಮನೆ ಸುಟ್ಟು ಹಾಕಿದ್ದರು.

    ನಮ್ಮ ಕ್ಷೇತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಒಗ್ಗಟ್ಟಾಗಿದ್ದೇವೆ. ಮುಸ್ಲಿಂ ಬಾಂದವರಿಗೆ ಮನವಿ ಮಾಡ್ತೀನಿ. ಅಮಾಯಕರು ಜೈಲಲ್ಲಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಅದಕ್ಕೆ ನಾನು ಕಾರಣ ಅಲ್ಲ, ನಿಜವಾಗಿ ಬೆಂಕಿ ಹಚ್ಚಿದವರು ಹೊರಗೆ ಓಡಾಡಿಕೊಂಡು, ಪಕ್ಷದಲ್ಲಿ ಪದವಿ ಪಡೆದುಕೊಂಡಿದ್ದಾರೆ. ನನಗೆ ಕಾಂಗ್ರೆಸ್ ನಲ್ಲಿ ಟಿಕೆಟ್ ತಪ್ಪಿಸಿದ್ದು ಒಳ್ಳೆಯದಾಯ್ತು. ಇದರಿಂದ ನಾನು ಬಿಜೆಪಿಗೆ ಬರುವಂತಾಗಿದೆ. ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು.

   ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ ಕೊಡಿಸೋಣಾ, ನಾವೆಲ್ಲರೂ ಒಗ್ಗಟ್ಟಾಗಿ ಲೀಡ್ ಕೊಟ್ಟು ಶೋಭಾ ಕರಂದ್ಲಾಜೆ ಅವರನ್ನು ಗೆಲ್ಲಿಸೋಣ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap