ಜಿಲ್ಲಾ ಮಟ್ಟದ ರೈತರ ಬೃಹತ್ ಸಮಾವೇಶ

ಹಾನಗಲ್ಲ :

           ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಕೋಡಿಹಳ್ಳಿ ಬಣ) ಫೆ.25 ರಂದು ಪಟ್ಟಣದ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ರೈತರ ಬೃಹತ್ ಸಮಾವೇಶವನ್ನು ಆಯೋಜಿಸಿದ್ದು, ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಸಂಚಾಲಕ ಮಾಲತೇಶ ಪೂಜಾರ ಹೇಳಿದರು.

            ಗುರುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸೋಮವಾರ ಪಟ್ಟಣದ ಪ್ರವಾಸಿಮಂದಿರದಿಂದ ಕ್ರೀಡಾಂಗಣದವರೆಗೆ ವಿವಿಧ ಕಲಾ ತಂಡದೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. “ಚಿತ್ರನಟ ಯಶ್”, ರಾಜ್ಯ ರೈತ ನಾಯಕರಾದ ಕಡಿದಾಳ್ ಶಾಮಣ್ಣ, ಎಚ್.ಆರ್.ಬಸವರಾಜಪ್ಪ, ಶಿವಪ್ಪ ಅಬ್ಬಣಿ ಎಲ್ಲ ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ 10 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದೆ. ಈಗಾಗಲೇ ಜಿಲ್ಲೆಯಾದ್ಯಂತ ಸಭೆಗಳನ್ನು ಕೈಗೊಂಡು ಸಮಾವೇಶದ ಯಶಸ್ಸಿಗೆ ಮುಂದಾಗಿದ್ದೇವೆ ಎಂದರು.

           ಸಿಎಂ ಕುಮಾರಸ್ವಾಮಿ ರಾಜ್ಯ ಬಜೆಟ್‍ನಲ್ಲಿ ಮಾಸೂರ ಕೆರೆ ಹೊರತುಪಡಿಸಿ ಜಿಲ್ಲೆಗೆ ಒಂದು ಪೈಸೆಯೂ ಅನುದಾನ ಒದಗಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ನೂರಾರು ಕೋಟಿ ಅನುದಾನ ಬಿಡುಗಡೆಗೊಳಿಸುವುದಾಗಿ ಸುಳ್ಳು ಭರವಸೆ ನೀಡಿ ಹೋಗಿದ್ದಾರೆ. ಇವರ ಮಾತನ್ನು ಸಮ್ಮಿಶ್ರದ ಸಿಎಂ ಕೇಳುತ್ತಿಲ್ಲ. ಹಲವು ವರ್ಷಗಳ ಬೇಡಿಕೆಯಾದ ಬಾಳಂಬೀಡ ಏತ ನೀರಾವರಿ ಪ್ರಸ್ತಾಪವಿಲ್ಲ. ಸಾಲಮನ್ನಾ ಹೇಳಿಕೆ ಹುಸಿಯಾಗಿದೆ. ಪ್ರತ್ಯೇಕ ಹಾಲು ಒಕ್ಕೂಟ ಹಾಗೂ ಡಿಸಿಸಿ ಬ್ಯಾಂಕ್ ಈ ಸರ್ಕಾರದಲ್ಲೂ ನೆನೆಗುದಿಗೆ ಬಿದ್ದಿವೆ. ಮೆಡಿಕಲ್ ಕಾಲೇಜ್ ಪ್ರಸ್ತಾಪಿಸಲಿಲ್ಲ.

           ಬಜೆಟ್‍ನಿಂದ ಉತ್ತರ ಕರ್ನಾಟಕದ ಹೆಬ್ಬಾಗಿಲಿಗೆ ಯಾವುದೇ ಪ್ರಯೋಜನವಾಗಿಲ್ಲ. ಸಾಲಮನ್ನಾ ಹೆಸರಲ್ಲಿ ಅಭಿವೃದ್ಧಿಶೂನ್ಯವಾಗಿ ಕಾಲಕಳೆಯುತ್ತಿದ್ದಾರೆ. ಋಣಮುಕ್ತ ಪತ್ರ ಇನ್ನೂ ನೋಡೇಯಿಲ್ಲ. ಆದರೆ ಬ್ಯಾಂಕ್ ಅಧಿಕಾರಿಗಳು ರೈತರ ಮನೆಗೆ ವಸೂಲಿಗೆ ಬರುವುದೂ ತಪ್ಪಿಲ್ಲ. ರೈತರ ಆತ್ಮಹತ್ಯೆಗೆ ಸರ್ಕಾರವೇ ದಾರಿ ಮಾಡಿಕೊಡುತ್ತಿದೆ. ಕೇಂದ್ರ ಸ್ವಾಮಿನಾಥನ್ ವರದಿ ಜಾರಿಗೊಳಿಸಲಿಲ್ಲ.

           ರೈತರ ಕಣ್ಣೊರೆಸಲು ವಾರ್ಷಿಕ 6 ಸಾವಿರ ಸಹಾಯಧನ ನೀಡುವ ಬದಲು ಬೆಂಬಲಬೆಲೆ ಘೋಷಿಸಲಿ. ಬೇಡ್ತಿನದಿ-ವರದಾನದಿ ಜೋಡಣೆಗೊಳಿಸಿ ಹಾನಗಲ್ಲ, ಶಿಗ್ಗಾವಿ, ಸವಣೂರ, ಹಾವೇರಿ ತಾಲೂಕುಗಳ ನೂರಾರು ಗ್ರಾಮಗಳಿಗೆ ನೀರಾವರಿಯೊದಗಿಸಲಿ. ಸಿಎಂ ಕೇವಲ ರಾಮನಗರ, ಹಾಸನ, ಮಂಡ್ಯಗಳಿಗೆ ಮುಖ್ಯಮಂತ್ರಿಯಂತೆ ನಡೆದುಕೊಳ್ಳುತ್ತಿದ್ದಾರೆ. ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದ್ದಾರೆ. ಹೀಗಾಗಿ ನಾವು ಪ್ರತ್ಯೇಕ ರಾಜ್ಯ ಬೇಡಿಕೆ ಇಡಬೇಕಾದ ಅನಿವಾರ್ಯವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

            ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಮಾತನಾಡಿ, ಸಂಗೂರ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವುದು ಮುಗಿಯುತ್ತ ಬಂದಿದ್ದರೂ ದರ ನಿಗದಿಯಾಗಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲಿ. ಕಾರ್ಖಾನೆಯನ್ನು ದಕ್ಷಿಣ ಕರ್ನಾಟಕ ವ್ಯಾಪ್ತಿಗೆ ಸೇರಿಸಿದ್ದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

        ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ದೀಪಕ್ ಗಂಟಿಸಿದ್ದಪ್ಪನವರ, ತಾಲೂಕು ಅಧ್ಯಕ್ಷ ರುದ್ರಪ್ಪ ಬಳಿಗಾರ, ಜಿಲ್ಲಾ ಮುಖಂಡ ಭುವನೇಶ್ವರ, ವೀರಭದ್ರಪ್ಪ ಅಗಡಿ, ತಾಲೂಕು ಗೌರವಾಧ್ಯಕ್ಷ ಜಿಲಾನಿಸಾಬ ನೆಗಳೂರ, ಕಾರ್ಯಾಧ್ಯಕ್ಷ ರಶೀದ ವಾಗಿನಕೊಪ್ಪ, ಚನಬಸಪ್ಪ ಹಾವಣಗಿ, ಬಸವಲಿಂಗಯ್ಯ ಕಂಬಾಳಿಮಠ, ಜಾಫರ್‍ಸಾಬ ವಾಲಿಕಾರ ಇತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link