ಬೆಂಗಳೂರು
ರಾಜ್ಯದಲ್ಲಿ ಸರ್ಕಾರ ರಚಿಸಲು ಬೇಡುತ್ತಾ ಕೂರುವ ಅಗತ್ಯವಿಲ್ಲ.ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಿಸಿ,ಮರು ವಾರವೇ ಯಡಿಯೂರಪ್ಪ ನೇತೃತ್ವದ ಬಿಜೆಪಿ ಕರ್ನಾಟಕದ ಅಧಿಕಾರ ಗದ್ದುಗೆ ಹಿಡಿಯುತ್ತದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸ್ಥಳೀಯ ನಾಯಕರಿಗೆ ಹೇಳಿದ್ದಾರೆ.
ಫೆಬ್ರವರಿ ಇಪ್ಪತ್ತೊಂದರ ಗುರುವಾರ ರಾತ್ರಿ ನಡೆದ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅಮಿತ್ ಷಾ,ನೇರವಾಗಿಯೇ ಆಪರೇಷನ್ ಕಮಲ ಕಾರ್ಯಾಚರಣೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯವಾಗಿ ಕರ್ನಾಟಕದಲ್ಲಿ ನಾವೇ ಸರ್ಕಾರ ರಚಿಸಬೇಕಿತ್ತು. ಆದರೆ ಸಂವಿಧಾನಬದ್ದವಾಗಿ ಅದು ಸಾಧ್ಯವಾಗಲಿಲ್ಲ. ರಾಜ್ಯ ವಿಧಾನಸಭೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪ್ರತಿಪಕ್ಷವಾಗಿ ಕೂರುವ ಸ್ಥಿತಿ ಬಂದಿದ್ದರೂ ಅದೇನೂ ಶಾಶ್ಚತ ಸ್ಥಿತಿಯಲ್ಲ ಎಂದು ಹೇಳಿದರು.
ಅತ್ಯಂತ ದೊಡ್ಡ ಪಕ್ಷ ಎಂಬ ಕಾರಣಕ್ಕಾಗಿ ಸರ್ಕಾರ ನಾವೇ ರಚಿಸಬೇಕಾಗಿತ್ತು ಎಂಬುದು ಬಾವನಾತ್ಮಕವಾಗಿ ಸರಿ.ಆದರೆ ಸಂವಿಧಾನದ ಪ್ರಕಾರ ಪಕ್ಷಕ್ಕೇ ಆಗಲಿ,ಮೈತ್ರಿಕೂಟಕ್ಕೇ ಆಗಲಿ ಬಹುಮತ ಇರಬೇಕು.
ಅಂತಹ ಬಹುಮತವನ್ನು ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್-ಕಾಂಗ್ರೆಸ್ ಸಾಧಿಸಿ ತೋರಿಸಿವೆ. ಆದರೆ ಈ ಸರ್ಕಾರವನ್ನು ಕೆಡವಲು ಇಂತಹ ಕಾಲಘಟ್ಟದಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆ ಸರಿಯಲ್ಲ.
ಅಷ್ಟು ಬಾರಿ ಸಂಖ್ಯೆಯ ಶಾಸಕರನ್ನು ಬೇರೆ ಪಕ್ಷದಿಂದ ಕರೆತರುವಾಗ ಸಾರ್ವಜನಿಕವಾಗಿ ಅಪನಿಂದೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಸರ್ಕಾರ ರಚಿಸಲು ನಾವು ಬೇಡುವುದು ಬೇಡ.ಸಧ್ಯದಲ್ಲೇ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸೀಟು ಗೆಲ್ಲಿಸಿ, ಮರು ವಾರ ನಮ್ಮ ಸರ್ಕಾರವೇ ಇಲ್ಲಿ ಅಸ್ತಿತ್ವದಲ್ಲಿರುತ್ತದೆ ಎಂದು ಸ್ಪಷ್ಟವಾಗಿ ಹೇಳಿದರು.
ಲೋಕಸಭಾ ಚುನಾವಣೆ ನೀವಂದುಕೊಂಡಷ್ಟು ಸುಲಭವಲ್ಲ, ಮುಖ್ಯವಾಗಿ ರಾಜಧಾನಿ ಬೆಂಗಳೂರಿನ ಮೂರೂ ಲೋಕಸಭಾ ಕ್ಷೇತ್ರಗಳು ಆಪತ್ತಿನಲ್ಲಿವೆ. ಕಳೆದ ಚುನಾವಣೆಯಲ್ಲಿ ರಾಜ್ಯಧಾನಿಯ ಮೂರೂ ಲೋಕಸಭಾ ಕ್ಷೇತ್ರಗಳನ್ನು ನಾವು ಗೆದ್ದಿದ್ದೆವು.
ಆದರೆ ಈ ಬಾರಿ ಮೂರೂ ಕಡೆ ದೊಡ್ಡ ಮಟ್ಟದ ಸಂಘರ್ಷ ಅನಿವಾರ್ಯವಾಗಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ಕೈಗೂಡಿಸಿರುವುದರಿಂದ ಅವೆರಡೂ ಶಕ್ತಿಗಳನ್ನು ನಾವು ಏಕಾಂಗಿಯಾಗಿ ಎದುರಿಸಬೇಕಾಗುತ್ತದೆ.
ಪರಿಣಾಮವಾಗಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ ನಾವು ಗೆಲುವಿಗಾಗಿ ವಿಶೇಷ ಶ್ರಮ ವಹಿಸಬೇಕಾಗುತ್ತದೆ.ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿಕೂಟದ ಕ್ಯಾಂಡಿಡೇಟ್ ಆಗಿ ಮಾಜಿ ಪ್ರಧಾನಿ ದೇವೇಗೌಡರೇ ಕಣಕ್ಕಿಳಿಯುವ ಸೂಚನೆಗಳಿವೆ.
ಹೀಗಾಗಿ ಅಲ್ಲಿ ಹಾಲಿ ಸಂಸದ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಇದೇ ರೀತಿ ರಾಜ್ಯದ ಹಳೆ ಮೈಸೂರು ಭಾಗದಲ್ಲಿ ನಮ್ಮ ಗೆಲುವು ಸುಲಭ ಸಾಧ್ಯವಲ್ಲ.ಹೀಗಾಗಿ ಯಾವ ಕ್ಷೇತ್ರಗಳನ್ನೂ ಲಘುವಾಗಿ ಪರಿಗಣಿಸಬಾರದು ಎಂದು ಅವರು ಕೋರ್ ಕಮಿಟಿ ಸಭೆಯಲ್ಲಿ ಹೇಳಿದ್ದಾರೆ.
ಅಂದ ಹಾಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದವರ ಪೈಕಿ ಹದಿನಾರು ಮಂದಿ ಇನ್ನೂ ಸಂಸದರಾಗಿದ್ದಾರೆ.ಅವರಿಗೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡೋಣ.ಉಳಿದಂತೆ ಹನ್ನೆರಡು ಲೋಕಸಭಾ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕಿಳಿಸಬಹುದು ಎಂಬ ಕುರಿತು ನೀವೊಂದು ಪಟ್ಟಿ ನೀಡಿದ್ದೀರಿ. ಆದರೆ ಈ ಕ್ಷೇತ್ರಗಳಲ್ಲಿ ಯಾರನ್ನು ನಿಲ್ಲಿಸಬೇಕು?ನಿಲ್ಲಿಸಿದರೆ ಗೆಲುವು ಸಾಧಿಸುವುದು ಸುಲಭ?ಅನ್ನುವ ಕುರಿತು ನನ್ನ ಬಳಿ ಬೇರೆ ಪಟ್ಟಿ ಇದೆ.
ಹೀಗಾಗಿ ವಿವರವಾಗಿ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳೋಣ.ಆನಂತರ ಚುನಾವಣಾ ಆಯ್ಕೆ ಸಮಿತಿಗೆ ಪಟ್ಟಿ ಕಳಿಸೋಣ ಎಂದು ಅವರು ಇದೇ ಸಂದರ್ಭದಲ್ಲಿ ರಾಜ್ಯ ನಾಯಕರಿಗೆ ವಿವರಿಸಿದರು.ಚುನಾವಣೆಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ.ಈ ಬಾರಿ ಉತ್ತರ ಭಾರತದಲ್ಲಿ ಕಳೆದ ಬಾರಿಗಿಂತ ಕಡಿಮೆ ಸೀಟುಗಳು ಬರುವ ಲಕ್ಷಣಗಳಿರುವುದರಿಂದ ದಕ್ಷಿಣದ ರಾಜ್ಯಗಳ ಮೂಲಕ ಆ ಕೊರತೆಯನ್ನು ನೀಗಿಸಿಕೊಳ್ಳಬೇಕಾಗುತ್ತದೆ.
ಇದೇ ಕಾರಣಕ್ಕಾಗಿ ತಮಿಳ್ನಾಡಿನಲ್ಲಿ ಎಐಎಡಿಎಂಕೆ ಜತೆ ಕೈಗೂಡಿಸಿದ್ದೇವೆ.ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಶಕ್ತಿಗಳ ಜತೆಗೂಡಿ ಗಣನೀಯ ಸಂಖ್ಯೆಯ ಸೀಟುಗಳನ್ನು ಗೆದ್ದರೆ ಮರಳಿ ನರೇಂದ್ರಮೋದಿ ಅವರನ್ನು ಪ್ರಧಾನಿ ಹುದ್ದೆಗೇರಿಸಬಹುದು ಎಂದವರು ಹೇಳಿದ್ದಾರೆ.