ಐ.ಡಿ.ಹಳ್ಳಿ
ಕ್ಷೇತ್ರದಲ್ಲಿ ಸತತವಾಗಿ ಬರಗಾಲ ಬಂದಿರುವುದರಿಂದ ಆಂಧ್ರದ ಗಡಿ ಭಾಗದ ರಸ್ತೆಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆಯನ್ನು ನೀಡುವುದಾಗಿ ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಅವರು ಐ.ಡಿ.ಹಳ್ಳಿ ಹೋಬಳಿಯ ತಾಡಿ ಗ್ರಾಮದಿಂದ ಮಾಲಗೊಂಡನಹಳ್ಳಿಯವರೆಗೂ ರಸ್ತೆ ಅಭಿವೃದ್ಧಿಗಾಗಿ ಎಸ್ಡಿಪಿ ಯೋಜನೆಯಡಿ ಸುಮಾರು 1 ಕೋಟಿ 40 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಹಿಂದೆ ಚುನಾವಣೆಯ ಸಮಯದಲ್ಲಿ ನೀಡಿದ್ದ ವಾಗ್ದಾನದಂತೆ ಆಂಧ್ರದ ಗಡಿ ಭಾಗದ ರಸ್ತೆಗಳ ಅಭಿವೃದ್ಧಿಗೆ ನಾನು ಕ್ರಮ ಕೈಗೊಂಡಿದ್ದೇನೆ. ಇಲ್ಲಿನ ಸಾರ್ವಜನಿಕರಿಗೆ ಅನುಕೂಲ ಮಾಡುವುದಕ್ಕೆ ಹಣ ಬಿಡುಗಡೆ ಮಾಡಿಸಿದ್ದೇನೆ. ಐ.ಡಿ.ಹಳ್ಳಿ ಆಂಧ್ರದ ಗಡಿ ಭಾಗದ ರಸ್ತೆಗಳು ತೀರಾ ಅವ್ಯವಸ್ಥೆಯಿಂದ ಕೂಡಿದ್ದು ಕಳೆದ ಅವಧಿಯಲ್ಲಿ ರಸ್ತೆಗಳು ಅಭಿವೃದ್ಧಿಯಾಗಿಲ್ಲ. ಇದನ್ನು ನನ್ನ ಅವಧಿಯಲ್ಲಿ ಪೂರೈಸುತ್ತೇನೆ. ಈ ಕಾಮಗಾರಿಯನ್ನು 2 ತಿಂಗಳಲ್ಲಿ ಎಸ್ಡಿಎಲ್ ಕಂಪನಿಯವರು ಪೂರ್ಣಗೊಳಿಸಲಿದ್ದಾರೆ. ಆದ್ದರಿಂದ ಈ ರಸ್ತೆ ಶೀಘ್ರವೇ ಸಾರ್ವಜನಿಕರ ಅನುಕೂಲಕ್ಕೆ ಬಳಕೆಯಾಗಲಿದೆ ಎಂದರು.
ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಎತ್ತಿನಹೊಳೆ ಯೋಜನೆಯ ಮೂಲಕ ನೀರಿನ ಪರಿಹಾರ ಕಾಣಲಿದೆ. ಅದಕ್ಕಾಗಿ ಸರ್ಕಾರ ಸಾಕಷ್ಟು ಅನುದಾನ ನೀಡಿದ್ದು, ಬಯಲುಸೀಮೆಯ ನಾಡಿನ ಕೆರೆಗಳಿಗೆ ಮರುಜೀವ ಬರಲಿದೆ. ನೀರು ಸಿಕ್ಕರೆ ರೈತರು ಯಾವುದೇ ಸಮಸ್ಯೆಯನ್ನಾಗಲಿ ಎದುರಿಸಬಹುದು. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿರವರ ಸರ್ಕಾರ ರೈತರಿಗೆ ನೀರು ಸಿಗುವ ನಿಟ್ಟಿನಲ್ಲಿ ಶ್ರಮ ವಹಿಸುತ್ತಿದ್ದಾರೆ. ಐ.ಡಿ.ಹಳ್ಳಿ ಗಡಿ ಭಾಗದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚುವರಿಯಾಗಿ 54 ಕೋಟಿ ರೂ. ಅನುದಾನ ಮಂಜೂರಾಗಿದೆ. ಆಗಲೇ ಟೆಂಡರ್ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಗಡಿ ಭಾಗದ ಎಲ್ಲಾ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಗೊಳಿಸಲಾಗುವುದು ಎಂದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ವೆಂಕಟರಂಗಾರೆಡ್ಡಿ ರವರು ಮಾತನಾಡಿ, ಈ ಭಾಗದಲ್ಲಿ ಚುನಾವಣಾ ಸಮಯದಲ್ಲಿ ನೀಡಿದ ಮಾತಿನಂತೆ ಶಾಸಕರು ನಡೆದುಕೊಂಡಿದ್ದಾರೆ. ಆದ್ದರಿಂದ ಇಲ್ಲಿನ ರಸ್ತೆಗಳು ಡಾಂಬರು ಕಾಣುತ್ತಿವೆ. ನಮ್ಮ ಹೋಬಳಿಯ ಗಡಿಭಾಗದಲ್ಲಿ ರಸ್ತೆಗಳಿಗೂ ಜೀವಕಳೆ ತನ್ನಿ, ನಿಮಗೆ ಹೆಚ್ಚಿನ ಬಹು ಮತ ನೀಡಿದ ಈ ಹೋಬಳಿಯ ಅಭಿವೃದ್ಧಿಗೆ ಹೆಚ್ಚಿನ ಕಾಳಜಿಯನ್ನು ವಹಿಸಿ ಎಂದು ಶಾಸಕರಲ್ಲಿ ಮನವಿ ಮಾಡಿ, ಐ ಡಿ ಹಳ್ಳಿಯಿಂದ ಆಂಧ್ರದ ಮಣೂರು ಗ್ರಾಮಕ್ಕೆ ಹೋಗುವ ರಸ್ತೆ ಶಿಥಿಲಗೊಂಡಿದ್ದು ಈ ರಸ್ತೆಯನ್ನು ಕೂಡ ದಯವಿಟ್ಟು ದುರಸ್ಥಿಗೊಳಿಸಿಕೊಡಿ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
