ಹೊನ್ನಾಳಿ:
ಪ್ರಧಾನಮಂತ್ರಿ ಉಜ್ವಲಾ ಯೋಜನೆಯಿಂದಾಗಿ ಹೊನ್ನಾಳಿ ಕ್ಷೇತ್ರವು ಹೊಗೆ ಮುಕ್ತವಾಗಿದ್ದು, ಮಹಿಳೆಯರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಭಾನುವಾರ ಬಿಪಿಎಲ್ ಕಾರ್ಡ್ನ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಇತರ ಪರಿಕರ ವಿತರಿಸಿ ಅವರು ಮಾತನಾಡಿದರು.ಅಧಿಕ ಸಂಖ್ಯೆಯ ಫಲಾನುಭವಿಗಳಿಗೆ ಈಗಾಗಲೇ ಈ ಸೌಲಭ್ಯ ನೀಡಲಾಗಿದೆ. ಬಾಕಿ ಉಳಿದ ಅರ್ಹ ಪಲಾನುಭವಿಗಳು ಗ್ಯಾಸ್ ವಿತರಕರ ಬಳಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಮಾಜದ ಎಲ್ಲಾ ವರ್ಗಗಳ ಜನರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ರೈತರ ಹಿತಕ್ಕಾಗಿ ಫಸಲ್ ಬೀಮಾ ಯೋಜನೆ ಜಾರಿಗೆ ತಂದಿದ್ದು, ಇದರಿಂದ ದೇಶದ ಕೋಟ್ಯಂತರ ರೈತರು ಪ್ರಯೋಜನ ಪಡೆದಿದ್ದಾರೆ. ಆದರೆ, ರಾಜ್ಯ ಸರಕಾರ ಕೇಂದ್ರ ನೀಡಿದ ಅನುದಾನವನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ತಡ ಮಾಡುತ್ತಿದೆ. ತನ್ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.
ಬಿಪಿಎಲ್ ಕಾರ್ಡ್ದಾರರು, ಕಾರ್ಮಿಕರು, ರೈತರು, ಜನಸಾಮಾನ್ಯರಿಗೆ ಈ ಬಾರಿಯ ಮಧ್ಯಂತರ ಬಜೆಟ್ನಲ್ಲಿ ಅನೇಕ ಕೊಡುಗೆಗಳನ್ನು ಕೇಂದ್ರ ಸರಕಾರ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಬಡ ಜನತೆಗೆ ಮತ್ತು ರೈತರ ಕಲ್ಯಾಣಕ್ಕಾಗಿ ರೂಪಿಸಿದ ಅನೇಕ ಯೋಜನೆಗಳು ವರದಾನವಾಗಿವೆ. ಜನತೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.ಜಿಪಂ ಸದಸ್ಯ ಸಿ. ಸುರೇಂದ್ರನಾಯ್ಕ, ತಾಪಂ ಸದಸ್ಯೆ ಕವಿತಾ ಪ್ರಭುಗೌಡ, ಹಿರೇಗೋಣಿಗೆರೆ ಗ್ರಾಪಂನ ಎಲ್ಲಾ ಸದಸ್ಯರು, ಮುಖಂಡರಾದ ಪ್ರಭುಗೌಡ, ಬಸವರಾಜ್, ರಮೇಶ್, ಭರ್ಮಣ್ಣ, ರಮೇಶ್, ಶಿವಣ್ಣ, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.