ಚಿತ್ರದುರ್ಗ:
ಭಯೋತ್ಪಾದಕ ಸಂಘಟನೆಗಳನ್ನು ಮಟ್ಟ ಹಾಕಿ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ಕೊಡಬೇಕಾದರೆ ನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನ ಮಂತ್ರಿಯಾಗಬೇಕಾಗಿರುವುದರಿಂದ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಒಂದೊಂದು ಮತದಾನವೂ ಅತ್ಯಮೂಲ್ಯವಾಗಿರುವುದರಿಂದ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಬಿಜೆಪಿ.ಶಕ್ತಿ ಕೇಂದ್ರದ ಪ್ರಮುಖರಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಿವಿಮಾತು ಹೇಳಿದರು.
ನಾಳೆ ನಡೆಯಲಿರುವ ಶಕ್ತಿ ಕೇಂದ್ರದ ಪ್ರಮುಖರ ಸಭೆಯ ಕುರಿತು ರೆಡ್ಡಿ ಹಾಸ್ಟೆಲ್ ಬಿಲ್ಡಿಂಗ್ನಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು ಅರ್ಹ ಅಭ್ಯರ್ಥಿಗೆ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಲು ನಾಯಕರುಗಳು ಟಿಕೇಟ್ ನೀಡಲಿದ್ದಾರೆ. ಎರಡು ಲಕ್ಷ ಮತಗಳ ಅಂತರದಿಂದ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕಾಗಿರುವುದರಿಂದ ಪ್ರತಿ ಮನೆ ಮನೆಗೆ ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಕಾರ್ಯಕರ್ತರು ಭೇಟಿ ನೀಡಿ ನಾಲ್ಕುವರೆ ವರ್ಷಗಳಲ್ಲಿ ಮೋದಿರವರು ಮಾಡಿರುವ ಸಾಧನೆಯನ್ನು ಜನತೆಗೆ ತಿಳಿಸಬೇಕು ಎಂದು ಕರೆ ಕೊಟ್ಟರು.
ಅರವತ್ತು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಮಾಡದ ಸಾಧನೆಯನ್ನು ಕೇವಲ ನಾಲ್ಕುವರೆ ವರ್ಷಗಳಲ್ಲಿ ಮೋದಿ ಸಾಧಿಸಿದ್ದಾರೆ. ಸಣ್ಣ ರೈತರಿಗೆ ಮೋದಿರವರು ಪ್ರೋತ್ಸಾಹ ಧನ ನೀಡುತ್ತಿರುವುದು ಸಾಲ ಮನ್ನಾಕ್ಕಿಂತ ಮುಖ್ಯವಾದುದು. ಹಿಂದಿನ ಕಾಂಗ್ರೆಸ್ ಸರ್ಕಾರ ಹತ್ತು ವರ್ಷದಲ್ಲಿ 52 ಸಾವಿರ ಕೋಟಿ ರೂ.ಸಾಲ ಮನ್ನ ಮಾಡಿದೆ.
ಒಂದೆ ವರ್ಷದಲ್ಲಿ ಮೋದಿರವರು 75 ಸಾವಿರ ಕೋಟಿ ರೂ.ಗಳನ್ನು ರೈತರಿಗೆ ನೀಡಿದ್ದಾರೆ. ಸಣ್ಣ ರೈತರಿಗೆ ಪ್ರತಿ ವರ್ಷ ಹದಿನೈದು ಸಾವಿರ ಕೋಟಿ ರೂ.ನೀಡುತ್ತಿದ್ದಾರೆ. ಇದಕ್ಕಿಂತಲೂ ಒಳ್ಳೆ ಪ್ರಧಾನಿ ನಮ್ಮ ದೇಶಕ್ಕೆ ಇನ್ಯಾರು ಬೇಕು ಎಂದು ವಿರೋಧಿಗಳನ್ನು ಪ್ರಶ್ನಿಸಿದ ಶಾಸಕರು ಎಲ್ಲಾ ಯೋಧರುಗಳು ಇನ್ನು ಮುಂದೆ ರಜೆ ಹೋಗಲು, ರಜೆಯಿಂದ ಕರ್ತವ್ಯಕ್ಕೆ ಹಾಜರಾಗಲು ವಿಮಾನದಲ್ಲಿ ಉಚಿತವಾಗಿ ಪ್ರಯಾಣಿಸುವ ಅನುಕೂಲ ಕಲ್ಪಿಸಿದ್ದಾರೆ. ಕಾಂಗ್ರೆಸ್ನವರಿಗೆ ದೇಶಾಭಿಮಾನವಿಲ್ಲ. ಬಿಜೆಪಿ.ಗೆ ದೇಶ ಮೊದಲು ನಂತರ ರಾಜಕೀಯ ಎಂದು ಭಯೋತ್ಪಾದಕತೆಯನ್ನು ಸಮರ್ಥಿಸಿಕೊಳ್ಳುವ ಎದುರಾಳಿಗಳ ಹೇಳಿಕೆಯನ್ನು ಖಂಡಿಸಿದರು.
ಪಾರ್ಲಿಮೆಂಟ್ ಚುನಾವಣೆಯಲ್ಲಿ ಅಣ್ಣ ಡಿ.ಎಂ.ಕೆ.ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಉತ್ತರ ಪ್ರದೇಶದಲ್ಲಿ ಬಹುಮತಗಳಿಂದ ಗೆಲ್ಲುವುದಾಗಿ ಅಮಿತ್ಷಾ ಹೇಳಿದ್ದಾರೆ. ಚುನಾವಣೆಯ ತಂತ್ರಗಾರಿಕೆಯನ್ನು ಹೇಗೆ ನಡೆಸಬೇಕೆಂದು ಕರ್ನಾಟಕದಲ್ಲಿ ನಮಗೂ ಚಾಟಿ ಬೀಸಿದ್ದಾರೆ.
ಜಿಲ್ಲೆಯ ಐದು ಕ್ಷೇತ್ರ ಶಿರಾ,ಪಾವಗಡದಲ್ಲೂ ಹೆಚ್ಚಿನ ಮತಭೇಟೆಯಾಗಬೇಕು. ಕಳೆದ ಬಾರಿ ಸೋತಿದ್ದ ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕೋಡಿ, ಚಿತ್ರದುರ್ಗ, ರಾಯಚೂರು ಜಿಲ್ಲೆಯಲ್ಲಿ ಈ ಸಾರಿ ಗೆಲ್ಲುತ್ತೇವೆ. ಮಾ.2 ರಂದು ಚಿತ್ರದುರ್ಗದಲ್ಲಿ ಐದು ಸಾವಿರ ಬೈಕ್ ರ್ಯಾಲಿ ನಡೆಸಬೇಕಿದೆ. ಕಾರ್ಯಕರ್ತರ ಪ್ರತಿ ಮನೆಗಳ ಮೇಲೆ ಬಿಜೆಪಿ.ಭಾವುಟ ಹಾರಾಡಬೇಕು. ಪ್ರಧಾನಿ ಮೋದಿರವರ ಸಾಧನೆಗಳುಳ್ಳ ಸ್ಟಿಕರ್ಗಳನ್ನು ಮನೆಗಳಿಗೆ ಅಂಟಿಸಬೇಕು. ಒಂದೊಂದು ಸೀಟು ಮೋದಿರವರಿಗೆ ಮುಖ್ಯವಾಗಿರುವುದರಿಂದ ಲೋಕಸಭೆ ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲು ಕಾರ್ಯಕರ್ತರು ಮತ್ತು ಮುಖಂಡರುಗಳು ತಯಾರಾಗಬೇಕು ಎಂದು ಹೇಳಿದರು.
ಜಮ್ಮು ಕಾಶ್ಮೀರದಲ್ಲಿ ಒಂದು ವರ್ಷಕ್ಕೆ ಎರಡು ಲಕ್ಷ ಕೋಟಿ ರೂ.ಗಳನ್ನು ಮೋದಿರವರು ನೀಡುತ್ತಿದ್ದಾರೆ. ಇನ್ನು ನಾಲ್ಕೈದು ವರ್ಷ ಮೋದಿರವರು ದೇಶದ ಪ್ರಧಾನಿಯಾದರೆ ಜಗತ್ತಿನಲ್ಲಿಯೇ ಭಾರತ ಅತ್ಯಂತ ಶಕ್ತಿಶಾಲಿ ದೇಶವಾಗುವುದರಲ್ಲಿ ಸಂದೇಹವಿಲ್ಲ. ಹದಿಮೂರು ಕೋಟಿ ಬಡವರಿಗೆ ಉಚಿತವಾಗಿ ಅಡುಗೆ ಅನಿಲಗಳನ್ನು ನೀಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ದೇಶದ 50 ಕೋಟಿ ಜನರಿಗೆ ಆರೋಗ್ಯ ಭಾಗ್ಯ ಸಿಕ್ಕಿದೆ. ಮುದ್ರಾ ಬ್ಯಾಂಕ್ನಲ್ಲಿ ಮಹಿಳೆಯರಿಗೆ ಗ್ಯಾರೆಂಟಿಯಿಲ್ಲದೆ ಸಾಲ ಸೌಲಭ್ಯ.
ಹೃದಯಾಘಾತಕ್ಕೊಳಗಾದವರಿಗೆ ಕೈಗೆಟುಕುವ ಬೆಲೆಯಲ್ಲಿ ಸ್ಟಂಟ್ ಅಳವಡಿಕೆ, ಹನಿ ನೀರಾವರಿ ಯೋಜನೆ, ವಿದೇಶಗಳ ಸಾಲ ತೀರುವಳಿ ಇವೆಲ್ಲಾ ಪ್ರಧಾನಿ ಮೋದಿರವರ ಕಡಿಮೆ ಸಾಧನೆಯೇ ಎನ್ನುವುದನ್ನು ಜನರಿಗೆ ಮನದಟ್ಟು ಮಾಡಬೇಕಾಗಿರುವುದರಿಂದ ಬಿಜೆಪಿ. ಪರಿವಾರ್ ಮೇರಾ ಪರಿವಾರ್ ಎನ್ನುವ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿ, ನಗರಾಧ್ಯಕ್ಷ ತಿಪ್ಪೇಸ್ವಾಮಿ, ಸಿದ್ದೇಶ್ಯಾದವ್, ಗ್ರಾಮಾಂತರ ಅಧ್ಯಕ್ಷ ಸುರೇಶ್ಸಿದ್ದಾಪುರ, ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಶ್ಯಾಮಲಶಿವಪ್ರಕಾಶ್, ವಕ್ತಾರ ನಾಗರಾಜ್ಬೇದ್ರೆ, ರೇಖ, ನಗರಸಭೆ ಸದಸ್ಯರುಗಳಾದ ಹರೀಶ್, ಶಶಿಧರ ವೇದಿಕೆಯಲ್ಲಿದ್ದರು.ಶಕ್ತಿ ಕೇಂದ್ರದ ಪ್ರಮುಖರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.