ಬೇಸಿಗೆಯಲ್ಲಿ ನೀರಿನ ಸಮಸ್ಯೆ ಸಾಧ್ಯತೆ; ಮುಂಜಾಗ್ರತಾ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ

ಚಿತ್ರದುರ್ಗ:

       ಬೇಸಿಗೆ ಕಾಲ ಆರಂಭವಾಗಿರುವುದರಿಂದ ತಾಲೂಕಿನಾದ್ಯಂತ ಎಲ್ಲಾ ಸದಸ್ಯರುಗಳ ಸಮಸ್ಯೆಗಳನ್ನು ಆಲಿಸಿ ಕುಡಿಯುವ ನೀರಿನ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ.ಲಿಂಗರಾಜು ಸೂಚಿಸಿದರು.

     ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ2018-19 ನೇ ಸಾಲಿನ ನಾಲ್ಕನೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಎಲ್ಲಾ ಸದಸ್ಯರುಗಳ ಕ್ಷ್ಷೇತ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಸದಸ್ಯರುಗಳನ್ನು ಗಣನೆಗೆ ತೆಗೆದುಕೊಂಡು ಕೆಲಸ ಮಾಡಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಎಲ್ಲಿಯೂ ನಿರ್ಲಕ್ಷೆ ವಹಿಸಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

      ಜೀವ ವೈವಿದ್ಯ ನಿರ್ವಹಣಾ ಸಮಿತಿ ಅಧ್ಯಕ್ಷ ಸುರೇಶ್‍ನಾಯ್ಕ ಸದಸ್ಯರುಗಳ ತೊಂದರೆಯನ್ನು ಕೇಳಿ ವಿಶ್ವಾಸಕ್ಕೆ ತೆಗೆದುಕೊಂಡು ಕುಡಿಯುವ ನೀರಿನ ಸಮಸ್ಯೆಯಿರುವ ಕಡೆ ತಡ ಮಾಡದೆ ಬೋರ್‍ವೆಲ್‍ಗಳನ್ನು ಕೊರೆಸಿ ಹಣಕ್ಕಾಗಿ ಕಾಯಬೇಡಿ. ಕುಡಿಯುವ ನೀರಿನ ವಿಚಾರದಲ್ಲಿ ಬೇಜವಾಬ್ದಾರಿತನ ಮಾಡುವ ಅಧಿಕಾರಿಗಳ ನಡೆಯನ್ನು ಕ್ಷಮಿಸುವುದಿಲ್ಲ. ತುರ್ತು ಇರುವ ಕಡೆ ಟ್ಯಾಂಕರ್‍ಗಳಿಂದ ನೀರು ಪೂರೈಸಿ ಎಂದು ಎಚ್ಚರಿಸಿದರು.

       ಮಲ್ಲಾಪುರ ಗೊಲ್ಲರಹಟ್ಟಿ ಸೇರಿದಂತೆ ತಾಲೂಕಿನಲ್ಲಿ ಬಹಳ ಕಡೆ ಶುದ್ದ ಕುಡಿಯುವ ನೀರಿನ ಘಟಕಗಳು ಕೆಟ್ಟಿವೆ. ಬೇಗನೆ ರಿಪೇರಿ ಮಾಡಿಸಿ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಶುದ್ದ ಕುಡಿಯುವ ನೀರು ನೀಡಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯ್ಕ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಪಹಣಿಗಳ ಸಮಸ್ಯೆಯಿರುವುದರಿಂದ ರೈತರು ತೊಂದರೆ ನುಭವಿಸುತ್ತಿದ್ದಾ ಎಂದು ತಾಲೂಕು ಪಂಚಾಯಿತಿ ಸದಸ್ಯರುಗಳು ಒಕ್ಕೊರಲಿನಿಂದ ಸಭೆಯ ಗಮನ ಸೆಳೆದಾಗ ತಹಶೀಲ್ದಾರ್ ಕಾಂತರಾಜ್‍ರವರು ಬೆಳಿಗ್ಗೆ 8 ರಿಂದ ಸಂಜೆ 8ರವರೆಗೆ ರೈತರಿಗೆ ಪಹಣಿಗಳನ್ನು ವಿತರಿಸಲಾಗುತ್ತಿದೆ. ಆದಷ್ಟು ಬೇಗ ಪಹಣಿ ಸಮಸ್ಯೆಗಳನ್ನು ನಿವಾರಿಸುವುದಾಗಿ ಭರವಸೆ ನೀಡಿದರು.

       ರೈತರಿಗೆ ಪಹಣಿಗಳನ್ನು ಕೊಡುವಾಗ ಕಾಯಿಸಬೇಡಿ. ವೃದ್ದಾಪ್ಯ ವೇತನ ಮಂಜೂರು ಮಾಡುವಾಗ ಇಲ್ಲಸಲ್ಲದ ನಿಬಂಧನೆಗಳನ್ನು ವಿಧಿಸುವುದು ಬೇಡ. ಇದರಿಂದ ಬಡವರಿಗೆ ತೊಂದರೆಯಾಗುತ್ತದೆಯಲ್ಲದೆ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂದು ಸದಸ್ಯರುಗಳು ಆಪಾದಿಸಿದರು.

       ಎಂ.ಕೆ.ಹಟ್ಟಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆಯಿಂದ ಸ್ಥಳೀಯ ಸಂಸ್ಥೆಗಳಿಗೆ ಕಂದಾಯ ಪಾವತಿಯಾಗುತ್ತಿಲ್ಲ. ಪರಿಸರ ಮಾಲಿನ್ಯ ಕಲುಷಿತವಾಗುತ್ತಿದೆ.ರೈತರ ಬೆಳೆಗಳಿಗೂ ಇದರಿಂದ ಹಾನಿಯಾಗುತ್ತಿದೆ ಎಂದು ಸದಸ್ಯರುಗಳು ಸಭೆಯಲ್ಲಿ ದೂರಿದರು.
ಭರಮಸಾಗರ ಕೆರೆಯನ್ನು ಎರಡು ಬಾರಿ ಸರ್ವೆ ಮಾಡಲಾಗಿದೆ. ಇದರಿಂದ ಸಾಕಷ್ಟು ಮನೆಗಳನ್ನು ತೆರವುಗೊಳಿಸಲಾಗುವುದು ಎಂಬ ಗೊಂದಲ ಜನರನ್ನು ಕಾಡುತ್ತಿದೆ ಎಂದು ಸದಸ್ಯರೋರ್ವರು ಸಭೆಯ ಗಮನಕ್ಕೆ ತಂದಾಗ ಕಾನೂನು ಚೌಕಟ್ಟಿನಲ್ಲಿ ಸರ್ವೆ ಮಾಡುತ್ತೇವೆ. ಮನೆ ತೋಟ, ಚರ್ಚ್, ದೇವಸ್ಥಾನ ಏನು ಮುಖ್ಯವಲ್ಲ ಎಂದು ತಹಶೀಲ್ದಾರ್ ಉತ್ತರಿಸಿದರು.ತಾಲೂಕು ಪಂಚಾಯಿತಿ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಸಭೆಯಲ್ಲಿ ಹಾಜರಿದ್ದರು.ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link